McDonald’s and McPatel’s 
ಸುದ್ದಿಗಳು

ಮೆಕ್‌ ಡೊನಾಲ್ಡ್ಸ್‌ ವಿರುದ್ಧ ಗುಜರಾತ್‌ನ ಮ್ಯಾಕ್‌ ಪಟೇಲ್‌ ದಾವೆಗೆ ಕಾರಣವೇನು? ನಾಳೆ ಪ್ರಕರಣದ ವಿಚಾರಣೆ

ಎಲ್ಲಾ ಸಂಯೋಜನೆಗಳು ಅಥವಾ ಕೈಗಾರಿಕೆಗಳಲ್ಲಿ ಮೆಕ್‌ಡೊನಾಲ್ಡ್ಸ್ "ಮೆಕ್" ಎಂಬ ಪದದ ಮೇಲೆ ಏಕಸ್ವಾಮ್ಯ ಸಾಧಿಸುವಂತಿಲ್ಲ ಎಂದು ಭಾರತೀಯ ಕಂಪನಿ ವಾದಿಸಿದೆ.

Bar & Bench

ಜಾಗತಿಕ ಫಾಸ್ಟ್‌ಫುಡ್‌ ಕಂಪೆನಿಯಾದ ಮೆಕ್‌ ಡೊನಾಲ್ಡ್ಸ್‌ ತಾನು ಮ್ಯಾಕ್‌ ಪಟೇಲ್‌ ಚಿಹ್ನೆ ಬಳಸದಂತೆ ಆಧಾರರಹಿತ ಬೆದರಿಕೆ ಒಡ್ಡಿದೆ ಎಂದು ಆರೋಪಿಸಿ ಗುಜರಾತ್‌ ಮೂಲದ ತಿನಿಸು ತಯಾರಿಕಾ ಕಂಪೆನಿ ಮ್ಯಾಕ್‌ ಪಟೇಲ್‌ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಅಹಮದಾಬಾದ್ ಗ್ರಾಮೀಣ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದು ಪ್ರಕರಣದ ವಿಚಾರಣೆ ನಾಳೆ (ಜುಲೈ 28, 2025) ನಡೆಯಲಿದೆ.

1999ರ ಟ್ರೇಡ್ ಮಾರ್ಕ್ಸ್ ಕಾಯಿದೆಯ ಸೆಕ್ಷನ್ 142ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದ್ದು ಮ್ಯಾಕ್‌ ಪಟೇಲ್‌ ತನ್ನ ಕಾರ್ಪೊರೇಟ್ ಮತ್ತು ಉತ್ಪನ್ನ ಬ್ರ್ಯಾಂಡಿಂಗ್‌ನಲ್ಲಿ "ಮೆಕ್" ಪೂರ್ವಪ್ರತ್ಯಯವನ್ನು ಬಳಸಿದ್ದಕ್ಕೆ ಸಂಬಂಧಿಸಿದಂತೆ ಮೆಕ್‌ ಡೊನಾಲ್ಡ್ಸ್ ಕಾನೂನು ಕ್ರಮ ಕೈಗೊಳ್ಳದಂತೆ ಅಥವಾ ಬೆದರಿಕೆ ಹಾಕದಂತೆ ತಡೆಯಾಜ್ಞೆ ಕೋರಿದೆ.z

ಭಾರತೀಯ ತಿಂಡಿ ತಯಾರಕ ಕಂಪನಿ ಮಾರ್ಚ್ 2024ರಲ್ಲಿ "ಮ್ಯಾಕ್‌ ಪಟೇಲ್‌" ಎಂಬ ಬ್ರಾಂಡ್ ಅನ್ನು 30 ನೇ ತರಗತಿಯ ಅಡಿಯಲ್ಲಿ ನೋಂದಾಯಿಸಲು ಅರ್ಜಿ ಸಲ್ಲಿಸಿತ್ತು. ಬೇಕರಿ ಸರಕುಗಳು, ತಿಂಡಿಗಳು, ನೂಡಲ್ಸ್, ಮಿಠಾಯಿ, ಸಾಸ್‌ಗಳು ಮತ್ತು ಶೀತಲೀಕರಿಸಿದ ಆಹಾರಗಳಂತಹ ಉತ್ಪನ್ನಗಳಿಗೆ ಸಂಬಂಧಿಸಿದ ಅರ್ಜಿ ಇದಾಗಿದೆ.

ಈ ಅರ್ಜಿಗೆ ಮೆಕ್‌ ಡೊನಾಲ್ಡ್ಸ್‌ ಆಗಸ್ಟ್ 27, 2024ರಂದು ಭಾರತೀಯ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಯಲ್ಲಿ . ಕಾನೂನು ಸಂಸ್ಥೆ ಎಸ್ಎಸ್ ರಾಣಾ & ಕಂಪನಿ ಮೂಲಕ ಆಕ್ಷೇಪಣೆ ಸಲ್ಲಿಸಿತು.

ಮ್ಯಾಕ್‌ ಪಟೇಲ್‌ ಗುರುತು ತನ್ನ ಮೆಕ್‌ ಡೊನಾಲ್ಡ್ಸ್‌ ಮತ್ತು  ಮೆಕ್‌ಫ್ರೈಸ್‌, ಮೆಕ್‌ ಚಿಕನ್‌ ಮೆಕ್‌ ವೆಜಿ, ಮೆಕ್‌ಕೆಫೆ ಇನ್ನಿತರ ತನ್ನ ಸಮೂಹದ ವಾಣಿಜ್ಯ ಚಿಹ್ನೆಗಳನ್ನು ಹೋಲುತ್ತದೆ. ಮೆಕ್‌ ಪೂರ್ವ ಪ್ರತ್ಯಯ 1970ರ ದಶಕದಿಂದ ಜಾಗತಿಕವಾಗಿ ಮತ್ತು 1996ರಿಂದ ಭಾರತದಲ್ಲಿ ಚಾಲ್ತಿಯಲ್ಲಿದೆ.

ಮ್ಯಾಕ್‌ ಪಟೇಲ್‌ ಮೆಕ್‌ ಎಂಬ ಪೂರ್ವ ಪ್ರತ್ಯಯ ಅಳವಡಿಸಿಕೊಂಡಿರುವುದು ದುರುದ್ದೇಶದಿಂದ ಕೂಡಿದ್ದು ತನ್ನ ವರ್ಚಸ್ಸಿನ ಲಾಭ ಪಡೆಯುವ ಉದ್ದೇಶ ಇದರ ಹಿಂದಿದ್ದು ಇದರಿಂದ ಗೊಂದಲ ಮತ್ತು ವಂಚನೆ ಉಂಟಾಗುವ ಸಾಧ್ಯತೆ ಇದೆ ಜೊತೆಗೆ ಮೆಕ್‌ ಡೊನಾಲ್ಡ್ಸ್‌ ವಾಣಿಜ್ಯ ಚಿಹ್ನೆಗಳ ವಿಶಿಷ್ಟತೆಯನ್ನು ದುರ್ಬಲಗೊಳಿಸುತ್ತದೆ ಎಂದು ಬಹುರಾಷ್ಟ್ರೀಯ ಕಂಪೆನಿ ವಾದಿಸಿತ್ತು.

ಅಕ್ಟೋಬರ್ 29, 2024 ರಂದು ಸಲ್ಲಿಸಿದ ತನ್ನ ಪ್ರತಿವಾದದಲ್ಲಿ, ಮ್ಯಾಕ್‌ ಪಟೇಲ್‌ ಫುಡ್ಸ್ ಈ ಆರೋಪಗಳನ್ನು ನಿರಾಕರಿಸಿದ್ದು ಎಲ್ಲಾ ಸಂಯೋಜನೆಗಳು ಅಥವಾ ಕೈಗಾರಿಕೆಗಳಲ್ಲಿ ಮೆಕ್‌ ಡೊನಾಲ್ಡ್ಸ್ "ಮೆಕ್" ಎಂಬ ಪದದ ಮೇಲೆ ಏಕಸ್ವಾಮ್ಯ ಸಾಧಿಸುವಂತಿಲ್ಲ ಎಂದಿದೆ.

ಮೆಕ್‌ ಡೊನಾಲ್ಡ್‌ ಜೊತೆಗೆ ನಂಟು ಕಲ್ಪಿಸಿಕೊಳ್ಳುವ ಅಥವಾ ಲಾಭ ಪಡೆಯುವ ಉದ್ದೇಶ ತನಗೆ ಇಲ್ಲ. ತಾನು ಕಾನೂನುಬದ್ಧವಾಗಿ ಸಂಘಟಿತವಾದ ಭಾರತೀಯ ಘಟಕವಾಗಿದ್ದು, ಸಂಸ್ಕರಿಸಿದ ಆಹಾರ ವಲಯದಲ್ಲಿ, ವಿಶೇಷವಾಗಿ ಶೀತಲೀಕರಿಸಿದ ಫ್ರೆಂಚ್ ಫ್ರೈಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಮಧ್ಯಮ ಉದ್ಯಮವಾಗಿದೆ. ತನ್ನ ಚಿಹ್ನೆ ಮೆಕ್‌ ಡೊನಾಲ್ಡ್ಸ್‌ನ ವಾಣಿಜ್ಯ ಚಿಹ್ನೆಗಳಿಗಿಂತಲೂ ದೃಶ್ಯಾತ್ಮಕವಾಗಿ, ಉಚ್ಚಾರಣಾತ್ಮಕವಾಗಿ ಮತ್ತು ಪರಿಕಲ್ಪನಾತ್ಮಕವಾಗಿ ಭಿನ್ನವಾಗಿದೆ ಎಂದಿದೆ.

ವಾಣಿಜ್ಯ ಚಿಹ್ನೆಯನ್ನು ಪರೀಕ್ಷಿಸುವ ಹಂತದಲ್ಲಿ  ರಿಜಿಸ್ಟ್ರಾರ್‌ಗೆ ಯಾವುದೇ ಹೋಲಿಕೆಯ ಅಂಶಗಳು ಕಂಡುಬಂದಿಲ್ಲ ಅದು ಅರ್ಜಿಯನ್ನು ಮಾನ್ಯ ಮಾಡಿದೆ. ಗೊಂದಲ ಅಥವಾ ಗ್ರಾಹಕರಿಗೆ ವಂಚನೆಯಾಗುತ್ತಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಮೆಕ್‌ ಡೊನಾಲ್ಡ್ಸ್‌ ವ್ಯಾಪಾರದ ಅಸೂಯೆಯಿಂದ ಮತ್ತು ದೇಶೀಯ ಕಂಪೆನಿಗೆ ಕಿರುಕುಳ ನೋಡುವ ದುರುದ್ದೇಶದಿಂದ ಪ್ರಕರಣ ದಾಖಲಿಸಿದೆ. ಮೆಕ್‌ ಎಂಬ ಪೂರ್ವಪ್ರತ್ಯಯ ಸಾಮಾನ್ಯ ಭಾಷಾ ರಚನೆಯಾಗಿದ್ದು ನೋಂದಾಯಿತ ವೈಶಿಷ್ಟ್ಯದಿಂದ ಕೂಡಿರುವುದಿಲ್ಲ ಎಂದು ಅದು ಹೇಳಿದೆ.

ಇದುವರೆಗೆ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿ ವಿವಾದದ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಜೊತೆಗೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಅದು ನಿರ್ಧಾರ ಕೈಗೊಳ್ಳುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.