Supreme Court Rajya Sabha MP, John Brittas
Supreme Court Rajya Sabha MP, John Brittas 
ಸುದ್ದಿಗಳು

ಪೆಗಾಸಸ್ ಗೂಢಚರ್ಯೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದ ಸಂಸದ ಜಾನ್ ಬ್ರಿಟಾಸ್: ಏನಿದೆ ಅರ್ಜಿಯಲ್ಲಿ?

Bar & Bench

ಪೆಗಾಸಸ್ ಬೇಹುಗಾರಿಕೆ ಹಗರಣದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕೆಂದು ಕೋರಿ ಕೇರಳ ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ವಕೀಲರಾದ ರೆಸ್ಮಿತಾ ಆರ್‌ ಚಂದ್ರನ್‌ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಬ್ರಿಟಾಸ್‌ ಅವರು “ಗೂಢಚರ್ಯೆ, ಫೋನ್‌ ಕದ್ದಾಲಿಕೆ, ವೈರ್‌ ಟ್ಯಾಪಿಂಗ್‌ (ಅಂತರ್ಜಾಲ ಸೇರಿದಂತೆ ಸಂಪರ್ಕ ಸಾಧನಗಳ ಮೇಲೆ ಕಣ್ಗಾವಲು), ಲೈನ್‌ ಬಗಿಂಗ್‌ ಇತ್ಯಾದಿಗಳು ಫೋನ್‌ ಅಥವಾ ಅಂತರ್ಜಾಲ ಆಧರಿತ ಸಂಭಾಷಣೆಗಳ ಮೇಲೆ ಮೂರನೇ ವ್ಯಕ್ತಿ ಕಣ್ಗಾವಲು ಇರಿಸುವುದು ವ್ಯಕ್ತಿಗತ ಗೌಪ್ಯತೆಗೆ ನಿರ್ಣಾಯಕವಾಗಿ ಆಕ್ರಮಣಕಾರಿಯಾಗಿವೆ ಎಂದು ತಿಳಿಸಿದ್ದಾರೆ.

"ಇದು ಭಾರತೀಯ ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನ ಹೊರತುಪಡಿಸಿ ಯಾವುದೇ ವ್ಯಕ್ತಿಯು ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಕಳೆದುಕೊಳ್ಳಬಾರದು" ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಯಾವುದೇ ಅನಧಿಕೃತ ಹಸ್ತಕ್ಷೇಪ ನಡೆದಿಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆ ಮತ್ತು ಸುದ್ದಿ ಜಾಲತಾಣ ದಿ ವೈರ್‌ ಪ್ರಕಟಿಸಿದ ವರದಿಯನ್ನು ಅರ್ಜಿ ಆಧರಿಸಿದೆ.

ಅರ್ಜಿಯಲ್ಲಿರುವುದೇನು?

  • ಭಾರತೀಯ ಟೆಲಿಗ್ರಾಫ್ ಕಾಯಿದೆ- 1885ರ ಸೆಕ್ಷನ್ 5 (2), ಮಾಹಿತಿ ತಂತ್ರಜ್ಞಾನ ಕಾಯಿದೆ- 2000ರ ಸೆಕ್ಷನ್ 69ರ (ತಿದ್ದುಪಡಿ) ಸಿಆರ್‌ಪಿಸಿ ಸೆಕ್ಷನ್‌ 92 ಹಾಗೂ ಭಾರತೀಯ ಟೆಲಿಗ್ರಾಫ್ ನಿಯಮ 419 (ಎ) ಅಡಿಯಲ್ಲಿ ತಿಳಿಸಲಾಗಿರುವ ಕಾರ್ಯವಿಧಾನದ ಮೂಲಕ ಮಾತ್ರ ಭಾರತದಲ್ಲಿ ಯಾವುದೇ ಅಧಿಕೃತ ಗೂಢಚರ್ಯೆ ಮಾಡಬಹುದು.

  • 2019ರ ನವೆಂಬರ್ 28ರಂದು ಅನಧಿಕೃತ ಹಸ್ತಕ್ಷೇಪ ಮಾಡಿಲ್ಲ ಎಂದು 2019ರ ನವೆಂಬರ್ 28ರಂದು ಸಂಸತ್ತಿನಲ್ಲಿ ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞರು ಸಚಿವರು ನೀಡಿದ್ದ ಹೇಳಿಕೆಗೆ ಸರ್ಕಾರ ಅಂಟಿಕೊಂಡರೆ ಈಗಿನ ಹಸ್ತಕ್ಷೇಪವನ್ನು ಅಧಿಕೃತವೆಂದೇ ಪರಿಗಣಿಸಬೇಕಾಗುತ್ತದೆ.

  • ಆದ್ದರಿಂದ, ಸರ್ಕಾರ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಮತ್ತು ತನ್ನದೇ ಆದ ಸಚಿವರು, ಸಿಬ್ಬಂದಿ, ಚುನಾವಣಾ ಆಯುಕ್ತರು, ನ್ಯಾಯಾಧೀಶರು, ಸಿಬಿಐ ಅಧಿಕಾರಿಗಳು, ಸುಪ್ರೀಂ ಕೋರ್ಟ್ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮಾತ್ರವಲ್ಲದೆ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಸಂವಹನ ಸಾಧನಗಳಿಗೆ ಲಗ್ಗೆ ಹಾಕಿದ ಕಾರಣಗಳನ್ನು ಸರ್ಕಾರ ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿದೆ.

  • ಇಸ್ರೇಲ್‌ನ ಎನ್‌ಎಸ್‌ಒ ಸಮೂಹ ಮಾರಾಟ ಮಾಡಿರುವ ಈ ಗೂಢಚರ್ಯೆ ತಂತ್ರಾಂಶ ಹ್ಯಾಕ್ ಮಾಡಲಾದ / ಹ್ಯಾಕ್ ಮಾಡಬೇಕಾದ ಉದ್ದೇಶಿತ ಪಟ್ಟಿಯಲ್ಲಿ 136 ಮಂದಿ ಪ್ರಮುಖ ರಾಜಕಾರಣಿಗಳು, ನ್ಯಾಯಾಧೀಶರು, ಪತ್ರಕರ್ತರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಭಾರತವೂ ಸೇರಿದಂತೆ ಜಗತ್ತಿನ ಸರ್ಕಾರಗಳ ಮುಖ್ಯಸ್ಥರು ಇದ್ದಾರೆ. ಚುನಾವಣಾ ಆಯೋಗದ ಸದಸ್ಯರು, ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಮೇಲೆ ಕೂಡ ಬೇಹುಗಾರಿಕೆ ನಡೆಸಲಾಗಿದೆ.

  • ಇದು ಪ್ರಜಾಪ್ರಭುತ್ವದ ಮೂಲಭೂತ ಅಂಶಗಳು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ವ್ಯವಸ್ಥೆಯನ್ನು ಅಲುಗಾಡಿಸಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ನ್ಯಾಯಿಕ ಆಡಳಿತದಲ್ಲಿ ಬಲವಾದ ಹಸ್ತಕ್ಷೇಪ ನಡೆಸಲಾಗಿದೆ.

ವಕೀಲ ಎಂ ಎಲ್‌ ಶರ್ಮಾ ಅವರು ಪೆಗಾಸಸ್‌ ಹಗರಣದ ಕುರಿತು ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕೆಂದು ಇತ್ತೀಚೆಗೆ ಬೇರೊಂದು ಅರ್ಜಿ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.