ಫಲಾನುಭವಿಗಳು ಮತ್ತು ಕಾನೂನು ಸೇವೆ ಅಗತ್ಯವಿರುವ ಜನರನ್ನು ತಲುಪಲು ಸಾಮಾಜಿಕ ಮಾಧ್ಯಮದ ಬಳಕೆ ಮಾಡುವಂತೆ ಕಾನೂನು ಸೇವಾ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಒತ್ತಾಯಿಸಿದ್ದಾರೆ.
ಕಾಶ್ಮೀರದ ಶ್ರೀನಗರದಲ್ಲಿ ಶನಿವಾರ ನಡೆದ 19ನೇ ಅಖಿಲ ಭಾರತ ಕಾನೂನು ಸೇವೆಗಳ ಪ್ರಾಧಿಕಾರಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಉಚಿತ ಕಾನೂನು ಸಹಾಯಕ್ಕಾಗಿ ಇರುವ ಸೌಲಭ್ಯಗಳನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ) ಪ್ರಚಾರ ಮಾಡಲು ಯತ್ನಿಸಿದ್ದರೂ, ನಾಗರಿಕರಿಗೆ ಆ ಸೌಲಭ್ಯಗಳ ಬಗ್ಗೆ ತಿಳಿದಿಲ್ಲ. ಅಗತ್ಯವಿರುವ ವ್ಯಕ್ತಿಗಳನ್ನು ತಲುಪಲು ಸಾಮಾಜಿಕ ಮಾಧ್ಯಮಗಳ ಬಳಕೆ ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದರು.
"ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಮಾಹಿತಿ ಪಡೆಯಲು ಅವರು (ನಾಗರಿಕರು) ವಕೀಲರನ್ನು ಅವಲಂಬಿಸುತ್ತಾರೆ ಎಂದಾದರೆ ವ್ಯವಸ್ಥೆ ಸಾಕಷ್ಟು ಬಳಕೆಯಾಗುವಂತೆ ಮಾಡಿದ್ದೇವೆಯೇ ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ. ಜನರನ್ನು ಒಳಗೊಳ್ಳಲು ಕಾನೂನು ಸೇವಾ ಸಂಸ್ಥೆಗಳು ಹೆಚ್ಚು ಪೂರ್ವಸನ್ನದ್ಧವಾಗಿರಬೇಕೆಂದು ನಾನು ಒತ್ತಾಯಿಸುತ್ತೇನೆ. ಕಾನೂನು ನೆರವು ಮತ್ತು ಸೇವೆಗಳು ಫಲಾನುಭವಿಗಳನ್ನು ತಲುಪುವ ಗುರಿ ಸಾಧಿಸಲು ಇರುವ ಒಂದು ಮಾರ್ಗವೆಂದರೆ ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸುವುದಾಗಿದೆ" ಎಂದು ಅವರು ಹೇಳಿದರು.
ನ್ಯಾಯಾಂಗ ಎಂಬುದು ಕಳಪೆ ಸಂವಹನಕಾರ ಎಂದು ತಿಳಿದಿದ್ದರೂ, ಸಾಮಾಜಿಕ ಮಾಧ್ಯಮದ ಬಳಕೆಯು ಪರಿಣಾಮಕಾರಿ ಸಂವಹನಕ್ಕೆ ಸಹಾಯ ಮಾಡುತ್ತದೆ ಎಂದು ಸಿಜೆಐ ಒಪ್ಪಿಕೊಂಡರು. ವಕೀಲರು ಮತ್ತು ಅರೆ ಕಾನೂನು ಸ್ವಯಂಸೇವಕರ ಸಾಮರ್ಥ್ಯ ಹೆಚ್ಚಿಸುವಂತೆ ಅವರು ಇದೇ ವೇಳೆ ಕರೆ ನೀಡಿದರು.
ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕ್ರಿಶನ್ ಕೌಲ್ ಮತ್ತು ಸಂಜೀವ್ ಖನ್ನಾ, ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿ ತಶಿ ರಬ್‌ಸ್ತಾನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್‌ಗಳಾದ ಮನೋಜ್ ಸಿನ್ಹಾ ಮತ್ತು ಬಿ ಡಿ ಮಿಶ್ರಾ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.