[ಐಜೆಆರ್‌-2022 ವರದಿ] ನ್ಯಾಯಾಂಗ, ಕಾನೂನು ಸೇವೆ, ಕಾರಾಗೃಹ ವಿಭಾಗದಲ್ಲಿ ಗಣನೀಯ ಸುಧಾರಣೆ; ದೇಶಕ್ಕೇ ಕರ್ನಾಟಕ ಪ್ರಥಮ

ಮಾನವ ಸಂಪನ್ಮೂಲ, ಬಜೆಟ್‌ ಹಂಚಿಕೆ, ಕಾರ್ಯಭಾರ & ವೈವಿಧ್ಯತೆಯ ಅಂಶಗಳನ್ನು ವಿಶ್ಲೇಷಣೆಯ ಭಾಗವಾಗಿಸಲಾಗಿದೆ. ಉದಾಹರಣೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರು, ಎಸ್‌ಸಿ/ಎಸ್‌ಟಿ, ಒಬಿಸಿಗೆ ಕಲ್ಪಿಸಿರುವ ಪ್ರಾಧಾನ್ಯತೆ ಪರಿಗಣಿಸಲಾಗಿದೆ.
India Justice Report 2022
India Justice Report 2022

ದೇಶದ ನ್ಯಾಯದಾನ ವ್ಯವಸ್ಥೆಯ ನಾಲ್ಕು ಆಧಾರ ಸ್ತಂಭಗಳಾದ ಕಾರಾಗೃಹ, ನ್ಯಾಯಾಂಗ, ಕಾನೂನು ಸೇವೆ, ಪೊಲೀಸ್‌ ವಿಭಾಗದಲ್ಲಿ ಗಣನೀಯ ಸುಧಾರಣೆ ಸಾಧಿಸಿರುವ ಕರ್ನಾಟಕವು ರಾಷ್ಟ್ರದ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ದೊಡ್ಡ ಮತ್ತು ಮಧ್ಯಮ ಗಾತ್ರದ 18 ರಾಜ್ಯಗಳ ಪೈಕಿ ಕರ್ನಾಟಕವು ಅಗ್ರಸ್ಥಾನ ಪಡೆದಿದೆ.

ದಕ್ಷ್‌, ಕಾಮನ್‌ವೆಲ್ತ್‌ ಮಾನವ ಹಕ್ಕುಗಳ ಇನಿಶಿಯೇಟಿವ್‌, ಕಾಮನ್‌ ಕಾಸ್‌, ಸೆಂಟರ್‌ ಫಾರ್‌ ಸೋಶಿಯಲ್‌ ಜಸ್ಟೀಸ್‌, ವಿಧಿ ಸೆಂಟರ್‌ ಫಾರ್‌ ಲೀಗಲ್‌ ಪಾಲಿಸಿ ಮತ್ತು ಟಿಸ್‌-ಪ್ರಯಾಸ್‌ ಸಂಸ್ಥೆಗಳು ವಿವಿಧ ರಾಜ್ಯಗಳು, ಕೇಂದ್ರ ಸರ್ಕಾರದ ದತ್ತಾಂಶ ಬಳಕೆ ಮಾಡಿ 'ಇಂಡಿಯಾ ಜಸ್ಟೀಸ್‌ ರಿಪೋರ್ಟ್‌ (ಐಜೆಆರ್‌)-2022' ಸಿದ್ಧಪಡಿಸಿವೆ. ದೇಶದ ವಿವಿಧ ರಾಜ್ಯಗಳಲ್ಲಿನ ಔಪಚಾರಿಕ ನ್ಯಾಯದಾನ ವ್ಯವಸ್ಥೆಗೆ ರ‍್ಯಾಂಕ್‌ ನೀಡಲಾಗಿದ್ದು, ಇದು ಏಕೈಕ ಸಮಗ್ರ ಪರಿಮಾಣಾತ್ಮಕ ಸೂಚಿಯಾಗಿದೆ.

ಮಾನವ ಸಂಪನ್ಮೂಲ, ಬಜೆಟ್‌ ಹಂಚಿಕೆ, ಕಾರ್ಯಭಾರ ಮತ್ತು ವೈವಿಧ್ಯತೆಯ ಅಂಶಗಳನ್ನು ವಿಶ್ಲೇಷಣೆಯ ಭಾಗವಾಗಿಸಲಾಗಿದೆ. ಉದಾಹರಣೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳಿಗೆ ಕಲ್ಪಿಸಿರುವ ಪ್ರಾಧಾನ್ಯತೆ ಪರಿಗಣಿಸಲಾಗಿದೆ. ಐದು ವರ್ಷಗಳ ದತ್ತಾಂಶವನ್ನು ಹೋಲಿಕೆ ಮಾಡುವ ಮೂಲಕ ವರ್ಷದಿಂದ ವರ್ಷಕ್ಕೆ ನ್ಯಾಯದಾನ ವ್ಯವಸ್ಥೆ ಸುಧಾರಿಸಲು ಸರ್ಕಾರಗಳು ಮಾಡಿರುವ ಪ್ರಯತ್ನವನ್ನು ತೆರೆದಿಡಲಾಗಿದೆ.

ಪೊಲೀಸ್‌ ವಿಭಾಗದಲ್ಲಿ 30, ನ್ಯಾಯಾಂಗದಲ್ಲಿ 28, ಕಾರಾಗೃಹದಲ್ಲಿ 29, ಕಾನೂನು ನೆರವು ವಿಭಾಗದಲ್ಲಿ 15 ಸೂಚಿಗಳು ಸೇರಿದಂತೆ ಒಟ್ಟಾರೆ 102 ಸೂಚಿಗಳಡಿ ವಿಶ್ಲೇಷಣೆ ನಡೆಸಿ ಕರ್ನಾಟಕಕ್ಕೆ ಮೊದಲ ರ‍್ಯಾಂಕ್‌ ನೀಡಲಾಗಿದೆ. ಒಟ್ಟು 10 ಅಂಕಗಳ ಪೈಕಿ ಕರ್ನಾಟಕವು 6.38 ಅಂಕ ಪಡೆದು ದೇಶಕ್ಕೇ ಮೊದಲ ಸ್ಥಾನ ಪಡೆದರೆ, 6.11 ಅಂಕ ಪಡೆದಿರುವ ತಮಿಳುನಾಡು ಮತ್ತು ತೆಲಂಗಾಣ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿವೆ. 5.60 ಅಂಕ ಪಡೆದಿರುವ ಗುಜರಾತ್‌ 4ನೇ ಸ್ಥಾನದಲ್ಲಿದ್ದು, 5.41 ಅಂಕ ಪಡೆದಿರುವ ಆಂಧ್ರಪ್ರದೇಶ 5ನೇ ಸ್ಥಾನದಲ್ಲಿಯೂ ಮತ್ತು 5.36 ಅಂಕ ಪಡೆದಿರುವ ಕೇರಳ 6ನೇ ಸ್ಥಾನದಲ್ಲಿಯೂ ಇವೆ. ಒಟ್ಟಾರೆ ದಕ್ಷಿಣ ಭಾರತದ ಐದೂ ರಾಜ್ಯಗಳು ಮೇಲುಗೈ ಸಾಧಿಸಿರುವುದು ದತ್ತಾಂಶದಿಂದ ನಿಚ್ಚಳವಾಗಿದೆ.

ಐಜೆಆರ್‌ ಬಿಡುಗಡೆ ಮಾಡುತ್ತಿರುವ ಮೂರನೇ ವರದಿ ಇದಾಗಿದ್ದು, 2019ರಲ್ಲಿ ಬಿಡುಗಡೆಯಾಗಿದ್ದ ಪ್ರಥಮ ವರದಿಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಲಭ್ಯವಾಗಿದ್ದರೆ, 2020ರ ವರದಿಯಲ್ಲಿ ಕರ್ನಾಟಕವು 14ನೇ ಸ್ಥಾನಕ್ಕೆ ಕುಸಿದಿತ್ತು.

ಐಜೆಆರ್‌ ವರದಿಯಲ್ಲಿ ಕಾರಾಗೃಹ, ನ್ಯಾಯಾಂಗ, ಕಾನೂನು ಸೇವೆ ಮತ್ತು ಪೊಲೀಸ್‌ ವಿಭಾಗಗಳನ್ನು ಪ್ರತ್ಯೇಕಿಸಿ, ವಿಶ್ಲೇಷಣೆ ನಡೆಸಿ ಅಂಕ ನೀಡಲಾಗಿದೆ. ಈ ಎಲ್ಲಾ ವಿಭಾಗಗಳಲ್ಲಿ ಕರ್ನಾಟಕವು 2ನೇ ಸ್ಥಾನ ಪಡೆದಿದೆ.

ನ್ಯಾಯಾಂಗ ವಿಭಾಗದಲ್ಲಿ 28 ಸೂಚಿಗಳನ್ನು ವಿಶ್ಲೇಷಣೆ ನಡೆಸಲಾಗಿದೆ. ಇಲ್ಲಿ ನಿಗದಿಪಡಿಸಿದ 10 ಅಂಕಗಳ ಪೈಕಿ 6.79 ಅಂಕ ಪಡೆದಿರುವ ಕರ್ನಾಟಕವು ದ್ವಿತೀಯ ಸ್ಥಾನ ಪಡೆದಿದೆ. 6.69 ಅಂಕ ಪಡೆಯುವ ಮೂಲಕ ಐಜೆಆರ್‌ನ ಮೂರು ವರ್ಷದ ವರದಿಯಲ್ಲಿ ತಮಿಳುನಾಡು ಅಗ್ರಸ್ಥಾನ ಪಡೆದು, ಹ್ಯಾಟ್ರಿಕ್‌ ಸಾಧನೆ ಮಾಡಿದೆ. 6.55 ಅಂಕ ಪಡೆದಿರುವ ಪಂಜಾಬ್‌ ಮೂರನೇ ಸ್ಥಾನ ಪಡೆದಿದೆ. 2019 ಮತ್ತು 2020ರ ಐಜೆಆರ್‌ ವರದಿಯಲ್ಲಿ ಕರ್ನಾಟಕವು ಕ್ರಮವಾಗಿ 16 ಮತ್ತು 12ನೇ ಸ್ಥಾನ ಪಡೆದಿತ್ತು.

ಕಾರಾಗೃಹ ವಿಭಾಗದಲ್ಲಿ 29 ಸೂಚಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, 6.01 ಅಂಕ ಪಡೆದಿರುವ ಕರ್ನಾಟಕ ದ್ವಿತೀಯ, ಕ್ರಮವಾಗಿ 6.24 ಅಂಕ ಪಡೆದಿರುವ ತಮಿಳುನಾಡು ಮತ್ತು 5.35 ಅಂಕ ಪಡೆದಿರುವ ತೆಲಂಗಾಣ ಒಂದು ಮತ್ತು ಮೂರನೇ ಸ್ಥಾನ ಪಡೆದಿವೆ. ಐಜೆಆರ್‌ 2019 ಮತ್ತು 20ನೇ ಸಾಲಿನ ವರದಿಯಲ್ಲಿ ಕರ್ನಾಟಕವು 3 ಮತ್ತು 14ನೇ ಸ್ಥಾನ ಪಡೆಯುವ ಮೂಲಕ ಕುಸಿತ ಕಂಡಿತ್ತು.

15 ಸೂಚಿಗಳನ್ನು ಒಳಗೊಂಡ ಕಾನೂನು ಸೇವಾ ವಿಭಾಗದಲ್ಲಿ 6.13 ಅಂಕ ಪಡೆದ ಕರ್ನಾಟಕ ದ್ವಿತೀಯ ಸ್ಥಾನಿಯಾದರೆ, 6.31 ಅಂಕ ಪಡೆದಿರುವ ಜಾರ್ಖಂಡ್‌ ಪ್ರಥಮ ಹಾಗೂ 6.10 ಅಂಕ ಪಡೆದಿರುವ ಗುಜರಾತ್‌ ತೃತೀಯ ಸ್ಥಾನಿಯಾಗಿವೆ. ಐಜೆಆರ್‌ 2019 ಮತ್ತು 20ನೇ ಸಾಲಿನ ವರದಿಯಲ್ಲಿ ಕರ್ನಾಟಕವು ಕ್ರಮವಾಗಿ 7 ಮತ್ತು 16ನೇ ಸ್ಥಾನ ಪಡೆದು, ಹಿನ್ನೆಡೆ ಅನುಭವಿಸಿತ್ತು.

Also Read
ಇಂಡಿಯಾ ಜಸ್ಟೀಸ್‌ ರಿಪೋರ್ಟ್ 2022: ದೊಡ್ಡ ರಾಜ್ಯಗಳಲ್ಲಿ ತಮಿಳುನಾಡು, ಚಿಕ್ಕ ರಾಜ್ಯಗಳಲ್ಲಿ ಸಿಕ್ಕಿಂಗೆ ಅಗ್ರಸ್ಥಾನ

ಪೊಲೀಸ್‌ ವಿಭಾಗದಲ್ಲಿ ಕುಸಿತ

ಪೊಲೀಸ್‌ ವಿಭಾಗದಲ್ಲಿ 30 ಸೂಚಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, 6.61 ಅಂಕ ಪಡೆದಿರುವ ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ. 6.92 ಅಂಕ ಪಡೆದಿರುವ ತೆಲಂಗಾಣ ಪ್ರಥಮ ಮತ್ತು 6.22 ಅಂಕ ಪಡೆದಿರುವ ಆಂಧ್ರಪ್ರದೇಶವು ತೃತೀಯ ಸ್ಥಾನ ಪಡೆದಿವೆ. 2019ರ ಐಜೆಆರ್‌ ವರದಿಯಲ್ಲಿ 6ನೇ ಸ್ಥಾನ ಪಡೆದಿದ್ದ ಕರ್ನಾಟಕವು 2020ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಆದರೆ, ಪ್ರಸಕ್ತ ವರದಿಯಲ್ಲಿ ಒಂದು ಸ್ಥಾನ ಕುಸಿತ ಕಂಡಿದೆ.

ಉಳಿದಂತೆ ದೇಶದ 23 ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಪಟ್ಟಿಯಲ್ಲಿ ಕರ್ನಾಟಕವು ಅಗ್ರಸ್ಥಾನ ಪಡೆದಿದೆ. ತ್ರಿಪುರ ಮತ್ತು ಕೇರಳ ನಂತರದ ಸ್ಥಾನದಲ್ಲಿವೆ.

Kannada Bar & Bench
kannada.barandbench.com