ರಕ್ಷಣಾ ಕರ್ತವ್ಯ, ನ್ಯಾಯಾಲಯದ ಜವಾಬ್ದಾರಿ ಹಾಗೂ ಕಾನೂನು ಸುವ್ಯವಸ್ಥೆಯಂತಹ ಹೊಣೆ ಹೊತ್ತ ಪೊಲೀಸರಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಮೊಬೈಲ್ ಫೋನ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗುವ ನಶೆ ಹೆಚ್ಚು ಕಂಡುಬರುತ್ತಿದೆ ಎಂದಿರುವ ಮಧ್ಯಪ್ರದೇಶ ಹೈಕೋರ್ಟ್ ಪೊಲೀಸ್ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಕಾಲಕಳೆಯುವುದರ ಮೇಲೆ ನಿಗಾ ಇಡುವಂತೆ ಈಚೆಗೆ ಸೂಚಿಸಿದೆ [ಅಶೋಕ್ ಕುಮಾರ್ ತ್ರಿಪಾಠಿ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ] .
ಕಾವಲು ಕಾಯುವ ಕೆಲಸದಲ್ಲಿದ್ದ ಪೇದೆಯೊಬ್ಬರು ಪಾನಮತ್ತರಾಗಿ ನಿದ್ರಿಸುತ್ತಿದ್ದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರಿದ್ದ ವಿಭಾಗೀಯ ಪೀಠ ಮೇಲಿನ ಸೂಚನೆ ನೀಡಿತು.
ಅಂತೆಯೇ ಪೊಲೀಸ್ ಅಧಿಕಾರಿಯನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಬೇಕೆಂಬ ನಿರ್ಧಾರ ಅವರ ವಿರುದ್ಧ ಹೊರಿಸಲಾದ ಆರೋಪಕ್ಕೆ ವ್ಯತಿರಿಕ್ತವಾಗಿಯೇನೂ ಇಲ್ಲ ಎಂದ ನ್ಯಾಯಾಲಯ ಆತ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿತು.
ರಕ್ಷಣೆ ಕೋರಿದ ವ್ಯಕ್ತಿಯ ನಿವಾಸದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರ್ಜಿದಾರ ತನ್ನ ಕರ್ತವ್ಯ ನಿರ್ವಹಿಸುವಾಗ ಹೆಚ್ಚು ಜಾಗರೂಕವಾಗಿರಬೇಕಿತ್ತು. ಆದರೆ ಆತನೇ ಮದ್ಯಪಾನ ಮಾಡಿದ್ದರಿಂದ ಅಶಿಸ್ತು ಉಂಟಾಗಿರುವುದು ಮಾತ್ರವಲ್ಲ ಆತನೇ ಸ್ವತಃ ಅಪಘಾತ ಅಥವಾ ಅನಾಹುತಕ್ಕೆ ಎಡೆ ಮಾಡಿಕೊಡುವಂತಹ ಸ್ಥಿತಿಗೂ ಕಾರಣವಾಗಬಹುದು. ಆತನಿಂದ ರಕ್ಷಣೆ ಪಡೆಯುತ್ತಿರುವ ವ್ಯಕ್ತಿಯೇ ಆತನ ನಿರ್ಲಕ್ಷ್ಯದ ಕಾರಣಕ್ಕೆ ಅಪಾಯಕ್ಕೆ ಸಿಲುಕಬಹುದು ಎಂದು ನ್ಯಾಯಾಲಯ ವಿವರಿಸಿತು.
ಇದೇ ವೇಳೆ ಭದ್ರತಾ ಸಿಬ್ಬಂದಿ ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಅತಿಯಾಗಿ ಬಳಸುತ್ತಿರುವುದನ್ನು ಗಮನಿಸಿದ ನ್ಯಾಯಾಲಯ ಅದನ್ನು ತಡೆಯಲಯ ಪರಿಹಾರೋಪಾಯಗಳನ್ನು ರೂಪಿಸುವಂತೆ ಸೂಚಿಸಿತು.
ಮದ್ಯಪಾನ ಮಾತ್ರವಲ್ಲ, ಮೊಬೈಲ್/ಸೋಶಿಯಲ್ ಮೀಡಿಯಾಗಳಿಂದ ಕೂಡ ಪೊಲೀಸರು ಪಾಲಿಸಬೇಕಾದ ಶಿಸ್ತಿಗೆ ಧಕ್ಕೆ ಉಂಟಾಗುತ್ತದೆ. ಕರ್ತವ್ಯ ನಿರ್ವಹಿಸುತ್ತಿರುವಾಗ ಸಾಮಾಜಿಕ ಮಾಧ್ಯಮದ ವ್ಯಸನದಿಂದ ಅಪಾಯ ಎದುರಾಗಬಹುದು. ಕೂಡಲೇ ಹಿರಿಯ ಅಧಿಕಾರಿಗಳು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅದು ವಿವರಿಸಿತು.
“ಈ ನ್ಯಾಯಾಲಯವು ಮೊಬೈಲ್ ಇಲ್ಲವೇ ಸಾಮಾಜಿಕ ಮಾಧ್ಯಮಗಳ ನಶೆ ಎಂಬ ಮತ್ತೊಂದು ಬಗೆಯ ವ್ಯಸನದ ಕುರಿತು ಸಹ ಪೊಲೀಸ್ ಇಲಾಖೆಯಂತಹ ಸಮವಸ್ತ್ರ ಧರಿಸುವ ಇಲಾಖೆಗಳ ಹಿರಿಯ ಅಧಿಕಾರಿಗಳ ಗಮನ ಸೆಳೆಯ ಬಯಸುತ್ತದೆ” ಎಂದು ಅದು ಆದೇಶದಲ್ಲಿ ಹೇಳಿದೆ.
ಅಂತೆಯೇ ಅದು ಈ ನಿಟ್ಟಿನಲ್ಲಿ ನಿಗಾ ವ್ಯವಸ್ಥೆ, ಜಾಗೃತಿ ಕಾರ್ಯಕ್ರಮ, ಹಿರಿಯ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೆಲ ನಿರ್ದೇಶನಗಳನ್ನು ನೀಡಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ತನ್ನ ಆದೇಶದ ಪ್ರತಿ ಕಳಿಸುವಂತೆ ಸೂಚಿಸಿತು.
[ತೀರ್ಪಿನ ಪ್ರತಿ]