ಮುಖ್ಯಮಂತ್ರಿಯವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಆಡಳಿತಾತ್ಮಕ ಆದೇಶ ಅಥವಾ ಸೂಚನೆಯೊಂದಿಗೆ ಸಮೀಕರಿಸಲಾಗುವುದಿಲ್ಲ. ಅದೇ ರೀತಿ, ಸರ್ಕಾರಿ ಕಾರ್ಯಕಾರಿಣಿಯ ಪ್ರತಿಯೊಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಆಡಳಿತಾತ್ಮಕ ಶ್ರೇಣೀಕರಣದಲ್ಲಿರುವವರು ನೋಡಲಾಗದು, ಓದಲಾಗದು ಮತ್ತು ಅನುಸರಿಸಲಾಗದು ಎಂದು ಮಧ್ಯಪ್ರದೇಶ ಹೈಕೋರ್ಟ್ ತಿಳಿಸಿದೆ (ಸೋನು ಬೈರ್ವಾ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ).
ಆದ್ದರಿಂದ, ಬಂಧನ ಆದೇಶ ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ನಡುವೆ ಸ್ಪಷ್ಟ ಸಂಬಂಧ ಸ್ಥಾಪಿಸಲಾರದೆ ಜಿಲ್ಲಾದಂಡಾಧಿಕಾರಿ (ಡಿಎಂ) ಜಾರಿಗೊಳಿಸಿದ ಬಂಧನ ಆದೇಶವನ್ನು ಮುಖ್ಯಮಂತ್ರಿಗಳ ʼಆದೇಶದಡಿಯಲ್ಲಿʼ ಅಂಗೀಕರಿಸಲಾಗಿದೆ ಎಂದು ಪರಿಗಣಿಸಲಾಗದು ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಸುಜೋಯ್ ಪಾಲ್ ಮತ್ತು ಅನಿಲ್ ವರ್ಮಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರೆಮ್‌ಡೆಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಯಿದೆ- 1980ರ (ಎನ್‌ಎಸ್‌ಎ) ಅಡಿಯಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬಂಧನಕ್ಕೊಳಗಾದ ಸೋನು ಬೈರ್ವಾ ಅವರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಆಲಿಸಿತು.
ರೆಮೆಡೆಸಿವಿರ್ ಚುಚ್ಚುಮದ್ದನ್ನು ಕಾಳಸಂತೆಯಲ್ಲಿ ಮಾರುವ ವ್ಯಕ್ತಿಗಳನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗುವುದು ಎಂದು ತಿಳಿಸಿ ಮುಖ್ಯಮಂತ್ರಿಯವರು ಮಾಡಿದ್ದ ಅನೇಕ ಸಾಮಾಜಿಕ ಮಾಧ್ಯಮ ಗಮನ ಸೆಳೆದರು. ಬಂಧನಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸುವಾಗ ಜಿಲ್ಲಾಧಿಕಾರಿ ಅವರು ಈ ʼಆದೇಶದಡಿʼ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ವಾದಿಸಿದರು.
ಆದರೆ ಈ ವಾದದಲ್ಲಿ ಹುರುಳಿಲ್ಲ ಎಂದು ಕಂಡುಕೊಂಡ ನ್ಯಾಯಾಲಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಆಡಳಿತಾತ್ಮಕ ಆದೇಶದೊಂದಿಗೆ ಸಮೀಕರಿಸಲಾಗದು ಎಂದಿತು.
ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡಲು ಉನ್ನತ ಕಾರ್ಯಕಾರಣಿ ಸೂಚನೆ/ ಆದೇಶ ಹೊರಡಿಸಿದ್ದರೆ ಮತ್ತು ಅದನ್ನು ವಿಧೇಯತೆಯಿಂದ ಜಿಲ್ಲಾಧಿಕಾರಿ ಅಂಗೀಕರಿಸಿದ್ದರೆ ಆಗ ಬಹುಶಃ ಪ್ರಕರಣ ಭಿನ್ನವಾಗಿರುತ್ತಿತ್ತು ಎಂದು ಪೀಠ ಹೇಳಿತು. ಆದ್ದರಿಂದ, ಜಿಲ್ಲಾಧಿಕಾರಿ ತಮ್ಮ ವಿವೇಚನೆಯನ್ನು ಕಾನೂನಿನ ಪ್ರಕಾರ ಬಳಸಿದ್ದು ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತೀರ್ಮಾನಿಸಿತು.
ಆಸಕ್ತಿಕರ ಅಂಶವೆಂದರೆ, ದೆಹಲಿ ಹೈಕೋರ್ಟ್ ಇತ್ತೀಚೆಗೆ “ಒಂದು ರಾಜ್ಯದ ಮುಖ್ಯಮಂತ್ರಿ ನೀಡಿದ ಭರವಸೆ, ಜಾರಿಗೊಳಿಸಬಹುದಾದ ಆಶ್ವಾಸನೆಗೆ ಸಮನಾಗಿರುತ್ತದೆ ಮತ್ತು ಅದನ್ನು ಸರ್ಕಾರ ಜಾರಿಗೆ ತರಬೇಕು" ಎಂದು ತೀರ್ಪು ನೀಡಿದ್ದನ್ನು ಇಲ್ಲಿ ನೆನೆಯಬಹುದು.