ಮಹತ್ವದ ತೀರ್ಪೊಂದರಲ್ಲಿ ದೆಹಲಿ ಹೈಕೋರ್ಟ್ ಗುರುವಾರ ಒಂದು ರಾಜ್ಯದ ಮುಖ್ಯಮಂತ್ರಿ ನೀಡಿದ ಭರವಸೆ, ವಾಗ್ದಾನ ಅಥವಾ ಹೇಳಿಕೆ ಜಾರಿಗೊಳಿಸಬಹುದಾದ ಭರವಸೆಗೆ ಸಮನಾಗಿದ್ದು ಅದನ್ನು ಸರ್ಕಾರ ಈಡೇರಿಸಬೇಕಿದೆ ಎಂದು ಹೇಳಿದೆ.
ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2020ರ ಮಾರ್ಚ್ 29ರಂದು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಭರವಸೆಗೆ ದೆಹಲಿ ಸರ್ಕಾರ ಬದ್ಧವಾಗಿರಬೇಕು ಎಂದು ನ್ಯಾ. ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿತ್ತು. ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್ ಅವರು ಕೋವಿಡ್ ಬಿಕ್ಕಟ್ಟಿನ ವೇಳೆ ಯಾರೇ ಬಾಡಿಗೆದಾರರು ಬಾಡಿಗೆ ಪಾವತಿಸಲು ಸಾಧ್ಯವಾಗದಿದ್ದರೆ ದೆಹಲಿ ಸರ್ಕಾರ ಬಡವರ ಪರವಾಗಿ ಬಾಡಿಗೆ ಪಾವತಿಸುವುದಾಗಿ ಹೇಳಿದ್ದರು.
ಭರವಸೆ ತತ್ವ ಮತ್ತು ಕಾನೂನುಬದ್ಧ ನಿರೀಕ್ಷೆಗಳ ಸಿದ್ಧಾಂತದ ಆಧಾರದ ಮೇಲೆ ಮುಖ್ಯಮಂತ್ರಿ ತಾವು ನೀಡಿದ ಭರವಸೆ/ಆಶ್ವಾಸನೆಯನ್ನು ಜಾರಿಗೊಳಿಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿತು.
ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಬೇಕಿದ್ದು ಒಂದು ವೇಳೆ ಪ್ರಸ್ತಾವನೆ ಕಾರ್ಯಗತಗೊಳಿಸದೆ ಇರಲು ಅವರು ನಿರ್ಧರಿಸಿದರೆ ಅದಕ್ಕೆ ಕಾರಣ ನೀಡುವಂತೆ ದೆಹಲಿ ಸರ್ಕಾರಕ್ಕೆ ಪೀಠ ನಿರ್ದೇಶಿಸಿತು. ಭೂಮಾಲೀಕರು ಮತ್ತು ಬಾಡಿಗೆದಾರರಿಗೆ ಮುಖ್ಯಮಂತ್ರಿ ನೀಡಿದ ಭರವಸೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ 6 ವಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ. ದೊಡ್ಡಮಟ್ಟದ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಆತಂಕಗಳನ್ನು ಹೋಗಲಾಡಿಸುವಂತೆ ಯೋಜನೆ ಜಾರಿಗೆ ತರಬೇಕು ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರಲ್ಲಿ ಒಬ್ಬರು ಭೂಮಾಲೀಕರಾಗಿದ್ದು, ತಮಗೆ ಮಾಸಿಕ ಬಾಡಿಗೆ ಸಿಕ್ಕಿಲ್ಲ ಎಂದು ವಾದಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ನೀಡಿದ ಭರವಸೆಯಂತೆ ಬಾಡಿಗೆ ಪಾವತಿಸಬೇಕು ಎಂದು ಅವರು ಕೋರಿದ್ದರು.