Allahabad High Court  
ಸುದ್ದಿಗಳು

ಮಹಿಳಾ ವಿರೋಧಿ ಅಪರಾಧಗಳಲ್ಲಿ ಸಂವೇದನಾಶೀಲ ನ್ಯಾಯಾಧೀಶರು ದೀರ್ಘ ಕಾನೂನು ನಿಯಮಾವಳಿಗಿಂತ ಉತ್ತಮ: ಅಲಾಹಾಬಾದ್ ಹೈಕೋರ್ಟ್‌

ಮಹಿಳೆಯರ ಮೇಲಿನ ಲೈಂಗಿಕ ಅಪರಾಧದ ಪ್ರಕರಣಗಳನ್ನು ನ್ಯಾಯಾಲಯಗಳು ಅತ್ಯಂತ ಸೂಕ್ಷ್ಮತೆಯಿಂದ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂಬ ನಿರೀಕ್ಷೆಯಿದೆ ಎಂದು ಹೇಳಿದ ಪೀಠ.

Bar & Bench

ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆ ನಡೆಸುವಾಗ, ಸಾಮಾಜಿಕವಾಗಿ ಸಂವೇದನೆ ಇರುವ ನ್ಯಾಯಾಧೀಶರು ಸುದೀರ್ಘ ದಂಡನಾ ಕಾನೂನು ನಿಯಮಾವಳಿಗಿಂತ ಉತ್ತಮ ರಕ್ಷಾಕವಚವಾಗುತ್ತಾರೆ ಎಂದು ಅಲಾಹಾಬಾದ್ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಅತ್ಯಾಚಾರ ಆರೋಪಿಯೊಬ್ಬನ ಖುಲಾಸೆ ರದ್ದುಗೊಳಿಸುವ ವೇಳೆ ನ್ಯಾಯಾಲಯ ಹೀಗೆ ಹೇಳಿತು [ಉತ್ತರ ಪ್ರದೇಶ ಸರ್ಕಾರ ಮತ್ತು ಧರ್ಮನಡುವಣ ಪ್ರಕರಣ].

ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಫರೂಕಾಬಾದ್‌ನ ಸೆಷನ್ಸ್ ನ್ಯಾಯಾಧೀಶರು ಆರೋಪಿಯನ್ನು ಖುಲಾಸೆಗೊಳಿಸಿದ್ದರು. ಅದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸುನೀತ್ ಕುಮಾರ್ ಮತ್ತು ವಿಕ್ರಮ್ ಡಿ ಚೌಹಾಣ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

“ಮಹಿಳೆಯರ ಮೇಲಿನ ಲೈಂಗಿಕ ಅಪರಾಧದ ಪ್ರಕರಣಗಳನ್ನು ನ್ಯಾಯಾಲಯಗಳು ಅತ್ಯಂತ ಸೂಕ್ಷ್ಮತೆಯಿಂದ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂಬ ನಿರೀಕ್ಷೆಯಿದೆ” ಎಂದಿರುವ ಪೀಠ "ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ಕಟ್ಟುನಿಟ್ಟಾಗಿ ಮತ್ತು ತೀವ್ರವಾಗಿ ವ್ಯವಹರಿಸಬೇಕುʼ ಎಂದು ಒತ್ತಿ ಹೇಳಿದೆ. ಪ್ರಾಸಿಕ್ಯೂಷನ್‌ ವಾದದ ಪ್ರಕಾರ ದೂರುದಾರರ 9 ವರ್ಷದ ಮಗಳ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದ.

" ಸಂತ್ರಸ್ತೆ ಘಟನೆಯ ಅತ್ಯುತ್ತಮ ಸಾಕ್ಷಿಯಾಗಿದ್ದು ಆರೋಪಿ ಪ್ರತಿವಾದಿಗೆ ವಿಧಿಸುವ ಶಿಕ್ಷೆ ಆಕೆಯ ಸಾಕ್ಷ್ಯವೊಂದನ್ನೇ ಆಧರಿಸಬಹುದು” ಎಂದು ನ್ಯಾಯಾಲಯ ಹೇಳಿತು. ಆರೋಪಿಯ ವಿರುದ್ಧದ ಆರೋಪ ಅನುಮಾನಕ್ಕೆ ಆಸ್ಪದವಿಲ್ಲದಂತೆ ದೃಢಪಟ್ಟಿದೆ ಎಂದಿತು. ಹೀಗಾಗಿ ಆರೋಪಿಗೆ ₹ 25 ಸಾವಿರ ದಂಡದೊಂದಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತು.