Army 
ಸುದ್ದಿಗಳು

ಉದ್ದೇಶಪೂರ್ವಕವಲ್ಲದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಯೋಧರಿಗೂ ಹುತಾತ್ಮ ಸೇನಾನಿಗಳಂತೆಯೇ ಪಿಂಚಣಿ: ಪಂಜಾಬ್ ಹೈಕೋರ್ಟ್

1991ರಲ್ಲಿ ಆಪರೇಷನ್ ರಕ್ಷಕ್ ಕಾರ್ಯಾಚರಣೆ ವೇಳೆ ಆಕಸ್ಮಿಕ ಗುಂಡೇಟಿನಿಂದ ಯೋಧನೊಬ್ಬ ಸಾವನ್ನಪ್ಪಿದ ಪ್ರಕರಣದ ವಿಚಾರಣೆ ನಡೆಸಿದ ಪೀಠ ಆತನನ್ನು ʼಯುದ್ಧದಲ್ಲಿನ ಗಾಯಾಳುʼ ಎಂದು ಪರಿಗಣಿಸಿತು.

Bar & Bench

ತನ್ನ ಸಹೋದ್ಯೋಗಿಯಿಂದ ಸಾವಿಗೀಡಾದ ಯೋಧರು ಕೂಡ ಸಮರದಲ್ಲಿ ಮಡಿದ ಯೋಧರಂತೆಯೇ ಸವಲತ್ತುಗಳನ್ನು ಪಡೆಯಲು ಅರ್ಹರು ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ಭಾರತ ಒಕ್ಕೂಟ ಮತ್ತು ರುಕ್ಮಿಣಿ ದೇವಿ ನಡುವಣ ಪ್ರಕರಣ].

ಪಿಂಚಣಿಗೆ ಅರ್ಜಿ ಸಲ್ಲಿಸುವಲ್ಲಿ 25 ವರ್ಷಗಳಷ್ಟು ವಿಳಂಬ ಉಂಟಾಗಿದೆ ಎಂದು ಕೇಂದ್ರ ಸರ್ಕಾರ ಎತ್ತಿದ್ದ ಆಕ್ಷೇಪಣೆ ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಅನುಪಿಂದರ್ ಸಿಂಗ್ ಗ್ರೆವಾಲ್ ಮತ್ತು ದೀಪಕ್ ಮಂಚಂದ ಅವರಿದ್ದ ಪೀಠ ತನ್ನ ಸಹೋದ್ಯೋಗಿಯಿಂದ ಹತನಾದ ಯೋಧನಿಗೆ ಸಮರದಲ್ಲಿ ಸಾವನ್ನಪ್ಪಿದ ಯೋಧರಿಗೆ ದೊರೆಯುವಂತಹ ಸವಲತ್ತುಗಳನ್ನು ನಿರಾಕರಿಸುವಂತಿಲ್ಲ ಎಂಬುದು ಸ್ಪಷ್ಟ ಎಂದು ತಿಳಿಸಿತು.

1991ರಲ್ಲಿ ಆಪರೇಷನ್ ರಕ್ಷಕ್ ಕಾರ್ಯಾಚರಣೆ ವೇಳೆ ಆಕಸ್ಮಿಕ ಗುಂಡೇಟಿನಿಂದ ಯೋಧನೊಬ್ಬ ಸಾವನ್ನಪ್ಪಿದ ಪ್ರಕರಣದ ವಿಚಾರಣೆ ನಡೆಸಿದ ಪೀಠ ಆತನನ್ನು ಯುದ್ಧದಲ್ಲಿನ ಗಾಯಾಳು ಎಂದು ಪರಿಗಣಿಸಿತು.

ಉದಾರೀಕೃತ ಕೌಟುಂಬಿಕ ಪಿಂಚಣಿ ನೀಡಬೇಕೆಂದು ಯೋಧನ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವಂತೆ ಫೆಬ್ರವರಿ 22, 2022ರಂದು ನಿರ್ದೇಶಿಸಿದ್ದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಆದೇಶವನ್ನು ಕೇಂದ್ರ ಸರ್ಕಾರ ಪ್ರಶ್ನಿಸಿತ್ತು.

ಕಾರ್ಯಾಚರಣೆ ವೇಳೆ ಸಂಭವಿಸುವಂತಹ ಇಂತಹ ಸಾವುಗಳು ಕೂಡ ಪಿಂಚಣಿ ಸವಲತ್ತುಗಳಿಗೆ ಅರ್ಹ ಎಂದು 2001ರಲ್ಲಿ ರಕ್ಷಣಾ ಸಚಿವಾಲಯ ನೀಡಿದ್ದ ಮಾರ್ಗಸೂಚಿಗಳನ್ನು ನ್ಯಾಯಮಂಡಳಿ ಸೂಕ್ತ ರೀತಿಯಲ್ಲಿ ಅನ್ವಯಿಸಿದೆ ಎಂದು ಹೈಕೋರ್ಟ್‌ ಹೇಳಿದೆ.

ಮಂಡಳಿ ಆದೇಶ ಕಾನೂನುಬಾಹಿರವಾದುದಲ್ಲ ಎಂದು ನ್ಯಾಯಾಲಯ ಅರ್ಜಿ ವಜಾಗೊಳಿಸಿತು. ಕೇಂದ್ರ ಸರ್ಕಾರದ ಪರವಾಗಿ ವಕೀಲ ಧರಮ್ ಚಂದ್ ಮಿತ್ತಲ್ ವಾದ ಮಂಡಿಸಿದರು.