ಯುದ್ಧ ವಿರೋಧಿ ಚಿತ್ರಕಲಾ ಪ್ರದರ್ಶನಕ್ಕೆ ಅಡ್ಡಿಪಡಿಸುವುದಿಲ್ಲ: ದೆಹಲಿ ಹೈಕೋರ್ಟ್‌ಗೆ ಪೊಲೀಸರ ಆಶ್ವಾಸನೆ

ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಲಾಗಿದ್ದ ಪ್ರದರ್ಶನ ರದ್ದುಗೊಳಿಸುವಂತೆ ಇಬ್ಬರು ಪೊಲೀಸರು ತಮ್ಮನ್ನು ಬೆದರಿಸಿದ್ದರು ಎಂದು ಕಲಾವಿದ ದೂರಿದ್ದರು.
Delhi High Court
Delhi High Court
Published on

ಪ್ಯಾಲೆಸ್ಟೈನ್‌ನಲ್ಲಿ ನಡೆದ ಯುದ್ಧದ ಭೀಕರತೆಯ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶಿಸಿದ್ದ 25 ವರ್ಷದ ಕಲಾವಿದನ ಕದನ ವಿರೋಧಿ ಚಿತ್ರಕಲಾ ಪ್ರದರ್ಶನಕ್ಕೆ ತಡೆ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ಆಶ್ವಾಸನೆ ನೀಡಿದ್ದಾರೆ.

ಭಾನುವಾರ ಪ್ರದರ್ಶನ ಆಯೋಜಿಸಲಾಗಿದೆ. ಕಲಾ ಪ್ರದರ್ಶನ, ಚಲನಚಿತ್ರ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವ ದೆಹಲಿ ಮೂಲದ ಕಲಾವಿದರ ಸಮೂಹ ʼಪ್ರೋಗ್ರೆಸ್ಸಿವ್ ಆರ್ಟಿಸ್ಟ್ ಲೀಗ್‌ʼನ ಸದಸ್ಯರಾಗಿರುವ ಕಲಾವಿದ ಕೇಶವ್ ಆನಂದ್ ತಮ್ಮ ನಿವಾಸದಲ್ಲಿ ಯುದ್ಧವಿರೋಧಿ ಚಿತ್ರಕಲಾ ಪ್ರದರ್ಶನ ಆಯೋಜಿಸುತ್ತಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು.  ಇದನ್ನು ಗಮನಿಸಿದ ದೆಹಲಿಯ ಇಬ್ಬರು ಪೊಲೀಸರು ತಮ್ಮ ಮನೆಗೆ ಬಂದು ಕಾರ್ಯಕ್ರಮ ರದ್ದುಗೊಳಿಸುವಂತೆ ಒತ್ತಡ ಹೇರಿದರು ಎಂದು ಕಲಾವಿದ ದೂರಿದ್ದರು.

Also Read
ಮತದಾನದ ಹಕ್ಕು ಮೂಲಭೂತ ಹಕ್ಕು; ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಇನ್ನೊಂದು ಮುಖ: ಮಣಿಪುರ ಹೈಕೋರ್ಟ್‌

ಮನೆಯೊಳಗೆ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸುವುದು ಕಾನೂನುಬಾಹಿರ ಕೃತ್ಯವಲ್ಲ ಮತ್ತು ದೆಹಲಿ ಪೊಲೀಸರಿಗೆ ಅವರನ್ನು ನಿರ್ಬಂಧಿಸಲು ಯಾವುದೇ ಅಧಿಕಾರವಿಲ್ಲ ಎಂದು ಕಲಾವಿದ ಆನಂದ್‌ ಪರ ವಕೀಲ ಮಾಣಿಕ್ ಗುಪ್ತಾ ಅವರು ನ್ಯಾಯಮೂರ್ತಿ ಸಚಿನ್ ದತ್ತ ಅವರೆದುರು ವಾದಿಸಿದರು.

ನ್ಯಾಯಾಲಯ ಪ್ರದರ್ಶನದ ಸ್ವರೂಪದ ಬಗ್ಗೆ ಕೇಳಿದಾಗ ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು 20ಕ್ಕಿಂತ ಹೆಚ್ಚು ಜನರು ಭಾಗವಹಿಸುವುದಿಲ್ಲ ಎಂದು ವಕೀಲರು ತಿಳಿಸಿದರು.

Also Read
ತೃತೀಯ ಲಿಂಗಿಗಳನ್ನು ಗೌರವಾನ್ವಿತವಾಗಿ ಸಂಬೋಧಿಸಲು ಪದ, ಅಭಿವ್ಯಕ್ತಿ ಪಟ್ಟಿ ಸಿದ್ಧಪಡಿಸಲು ಮದ್ರಾಸ್‌ ಹೈಕೋರ್ಟ್‌ ಆದೇಶ

ಈ ಹಂತದಲ್ಲಿ ದೆಹಲಿ ಪೊಲೀಸರು, ಯಾವುದೇ ಅಹಿತಕರ  ನಡೆಯುವುದಿಲ್ಲ ಎಂದಾದರೆ, ಕಾರ್ಯಕ್ರಮವನ್ನು ಅಡ್ಡಿಪಡಿಸುವ ಯಾವುದೇ ಉದ್ದೇಶ ತಮಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಕಕ್ಷಿದಾರರು ಮಾಡಿದ ವಾದಗಳ ಆಧಾರದ ಮೇಲೆ ಯಾವುದೇ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿತು.

Kannada Bar & Bench
kannada.barandbench.com