“ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗುವಂತೆ 1998ರಲ್ಲಿ ನನ್ನನ್ನು ಕೇಳಿದಾಗ ನಾನು ಹಿರಿಯ ವಕೀಲ ಸೋಲಿ ಸೊರಾಬ್ಜಿ ಅವರ ಸಲಹೆ ಕೇಳಿದ್ದೆ. 'ಸೇವೆಯ ಕರೆಗೆ ನೀವು ಓಗೊಡಬೇಕು' ಎಂದು ಅವರು ಹೇಳಿದ್ದರು. ಅಂತೆಯೇ, ನನ್ನ ಮಾರ್ಗದರ್ಶಿಯಾದ ಅವರ ಸಲಹೆಯನ್ನು ಒಪ್ಪಿಕೊಂಡೆ. ಅದಕ್ಕಾಗಿ ಒಂದೇ ಒಂದು ದಿನವೂ ನಾನು ಪಶ್ಚಾತಾಪಪಟ್ಟಿಲ್ಲ” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಈಚೆಗೆ ಕೋವಿಡ್‌ನಿಂದ ಮೃತಪಟ್ಟ ಹಿರಿಯ ನ್ಯಾಯವಾದಿ ಸೋಲಿ ಸೊರಾಬ್ಜಿ ಅವರ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನನ್ನ ನಿಜವಾದ ಮಾರ್ಗದರ್ಶಿ ಸೋಲಿ. 1998ರ ಮಧ್ಯಭಾಗದಲ್ಲಿ ಒಂದು ದಿನ ನನಗೆ ಕರೆ ಮಾಡಿ ಹೆಚ್ಚುವರಿ ಸಾಲಿಸಿಟರ್ ಜನರ್ ಹುದ್ದೆ ಒಪ್ಪಿಕೊಳ್ಳುವ ಇರಾದೆ ಹೊಂದಿದ್ದೀರಾ ಎಂದು ಕೇಳಿದ್ದನ್ನು ನಾನು ಎಂದಿಗೂ ಮರೆಯಲಾರೆ. ಆ ಹುದ್ದೆಯನ್ನು ನಾನು ಕೃತಜ್ಞತೆಯಿಂದ ಒಪ್ಪಿಕೊಂಡಿದ್ದೆ” ಎಂದರು.
“ಸೋಲಿಯವರು ನೈತಿಕತೆಯ ಧ್ವನಿಯಾಗಿದ್ದು, ನ್ಯಾಯಾಲಯದ ಹೊರಗೆ ಮತ್ತು ಒಳಗೆ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಸ್ವಾತಂತ್ರ್ಯದ ಪರ ನಿಲ್ಲುತ್ತಿದ್ದರು. ಮಾನವ ಸ್ವಾತಂತ್ರ್ಯದ ಚಳವಳಿಗಾರನಾಗಿದ್ದರು ಎಂಬುದಕ್ಕೆ ಅವರು ವಿವಿಧ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣಗಳೇ ಸಾಕ್ಷಿ” ಎಂದು ವಿವರಿಸಿದರು.
ಸೋಲಿ ಸೊರಾಬ್ಜಿ ಅವರ ಬಳಿ ಐದು ವರ್ಷ ಕಿರಿಯ ವಕೀಲರಾಗಿದ್ದ ಹಾಗೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದ ಯು ಯು ಲಲಿತ್ ಅವರು “ಕಾನೂನು ಕ್ಷೇತ್ರದಲ್ಲಿನ ಎಲ್ಲ ವಿಭಾಗಗಳಲ್ಲೂ ಸೊರಾಬ್ಜಿ ನೈಪುಣ್ಯತೆ ಸಾಧಿಸಿದ್ದರು. ಯಾವುದೇ ವಿಭಾಗವಾದರೂ ಸರಿಯೇ ಅದರಲ್ಲಿ ಪ್ರಕರಣವನ್ನು ಅವರು ಮುನ್ನಡೆಸುತ್ತಿದ್ದರು. ಅವರು ನಡೆಸಿದ್ದ ಪ್ರಕರಣಗಳ ಪೈಕಿ ಅತ್ಯಂತ ವಿಶೇಷವಾಗಿ ಉಲ್ಲೇಖಿಸಬೇಕಾದದ್ದು ಯೂನಿಯನ್ ಕಾರ್ಬೈಡ್ ಪ್ರಕರಣ. ಇದಕ್ಕಾಗಿ ಅವರು ಸಾಕಷ್ಟು ಶ್ರಮ ಹಾಕಿದ್ದರು. ಆದರೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಮತ್ತು 19(1)(ಎ) ಅವರಿಗೆ ಅತ್ಯಂತ ಪ್ರಿಯವಾಗಿತ್ತು. ಅದೊಂದು ಅವರಿಗೆ ಅತ್ಯಂತ ಕಾಳಜಿಯ ಕ್ಷೇತ್ರವಾಗಿದ್ದು, ತನ್ನೆಲ್ಲಾ ಶ್ರಮವಹಿಸಿ ಶ್ರದ್ಧೆಯಿಂದ ಅದಕ್ಕೆ ಎದುರಾಗಬಹುದಾದ ಅಡೆತಡೆಗಳಿಂದ ಅದರ ರಕ್ಷಣೆಗೆ ಮುಂದಾಗುತ್ತಿದ್ದರು. ಸೋಲಿ ಅವರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅತ್ಯುತ್ತಮ ರಕ್ಷನಾಗಿದ್ದರು. ಅಲ್ಪಸಂಖ್ಯಾತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಹಕ್ಕುಗಳ ಸಮರ್ಥಕರೂ ಹೌದು” ಎಂದು ನೆನಪಿಸಿಕೊಂಡರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಮಾತನಾಡಿ, “ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾಗರಿಕ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದ ಅವರು ಕೆಲವು ಮಹತ್ವದ ಪ್ರಕರಣಗಳಲ್ಲಿ ನಿರ್ಣಾಯಕ ಪಾತ್ರ ನಿಭಾಯಿಸಿದ್ದು, ಅವು ಈ ದೇಶದ ಕಾನೂನು ಚೌಕಟ್ಟನ್ನು ವ್ಯಾಖ್ಯಾನಿಸಿವೆ. ಗೋಲಕನಾಥ್ ಮತ್ತು ಕೇಶವಾನಂದ ಭಾರತಿ ಪ್ರಕರಣಗಳಲ್ಲಿ ಸೋಲಿ ಅವರು ಮತ್ತೊಬ್ಬ ಮಹಾನ್ ನ್ಯಾಯವಾದಿ ನಾನಿ ಪಾಲ್ಖಿವಾಲಾ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು. ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದೇ ನಾವು ಅವರಿಗೆ ಸಲ್ಲಿಸುವ ಗೌರವ” ಎಂದು ಹೇಳಿದರು.
“ಎರಡನೇ ಮಹಾಯುದ್ಧದ ಬಳಿಕ ಭಾರತ ಕಂಡ ಮಹಾನ್ ವಕೀಲ ಸೊರಾಬ್ಜಿ. ಕಾರ್ನೆಲಿಯಾ ಸೊರಾಬ್ಜಿ ಮತ್ತು ಡಾ. ರಿಚರ್ಡ್ ಸೊರಾಬ್ಜಿ ಅವರಂತೆ ಇವರೂ ಹಾಲ್ ಆಫ್ ಫೇಮ್‌ಗೆ ಸೇರುತ್ತಾರೆ ಎಂದು” ಸುಪ್ರೀಂ ಕೋರ್ಟ್ ಹಿರಿಯ ಗೋಪಾಲ್ ಸುಬ್ರಮಣಿಯಮ್ ಹೇಳಿದರು.
ಸೊರಾಬ್ಜಿ ಅವರ ಬಳಿ ಕಿರಿಯ ವಕೀಲರಾಗಿದ್ದ ಹರೀಶ್ ಸಾಳ್ವೆ ಮಾತನಾಡಿ “ಸೋಲಿಯವರ ಮ್ಯಾಜಿಕ್ ಅನ್ನು ನಾವು ಆಗಿಂದಾಗ್ಗೆ ನೋಡಿದ್ದೇವೆ. ಅವರಿಗೆ ನ್ಯಾಯಶಾಸ್ತ್ರಜ್ಞನ ಮಿದುಳು ಮತ್ತು ವಕೀಲನ ಹೃದಯವಿತ್ತು. ಕಾನೂನು ತತ್ವಗಳಲ್ಲಿ ತುಂಬಾ ನಿರರ್ಗಳರಾಗಿದ್ದರು ಮತ್ತು ಅವುಗಳನ್ನು ಸಮರ್ಥವಾಗಿ ಮಂಡಿಸುವ ಮೂಲಕ ಮನವೊಲಿಸುತ್ತಿದ್ದರು” ಎಂದು ನೆನೆಪಿಸಿಕೊಂಡರು.