ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನವೆಂಬರ್ 7 ರಿಂದ 18 ರವರೆಗೆ ಜಿನೀವಾದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ (ಯುಎನ್‌ಎಚ್ಆರ್‌ಸಿ) 41ನೇ ಜಾಗತಿಕ ನಿಯತಕಾಲೀನ ಪರಾಮರ್ಶೆ (ಯುಪಿಆರ್) ಅಧಿವೇಶನದಲ್ಲಿ ಭಾರತದ ನಿಯೋಗದ ನೇತೃತ್ವವಹಿಸಲಿದ್ದಾರೆ.
ನವೆಂಬರ್ 10 ರಂದು ಮಂಡಿಸಲಾಗುವ ಭಾರತದ ರಾಷ್ಟ್ರೀಯ ವರದಿ ಸೇರಿದಂತೆ ಎಲ್ಲಾ ರಾಷ್ಟ್ರಗಳ ಮಾನವ ಹಕ್ಕುಗಳ ಕಾರ್ಯಕ್ಷಮತೆಯ ಪರಾಮರ್ಶೆಗೆ ಅಧಿವೇಶನ ಸಾಕ್ಷಿಯಾಗಲಿದೆ.
ಮೆಹ್ತಾ ಅವರಲ್ಲದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮಹಿಳಾ ಮತ್ತು ಮಕ್ಕಳ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಅಲ್ಪಸಂಖ್ಯಾತ ವ್ಯವಹಾರಗಳು, ನೀತಿ ಆಯೋಗ ಮತ್ತು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ಸಹ ನಿಯೋಗದಲ್ಲಿರಲಿದ್ದಾರೆ.
ಪತ್ರಿಕಾ ಪ್ರಕಟಣೆ ಪ್ರಕಾರ ಆಗಸ್ಟ್ 5, 2022ರಂದು ಭಾರತದ ರಾಷ್ಟ್ರೀಯ ವರದಿಯನ್ನು ಸಲ್ಲಿಸಲಾಗಿದ್ದು ಅದು 2017 ರಲ್ಲಿ ನಡೆದ ಮೂರನೇ ಯುಪಿಆರ್ ಸಮಾವೇಶದಲ್ಲಿ ಭಾರತವು ಒಪ್ಪಿಕೊಂಡಿದ್ದ ಶಿಫಾರಸುಗಳ ಜಾರಿಗೆ ಇರಿಸಿದ ಹೆಜ್ಜೆ ಹಾಗೂ ಮಾನವ ಹಕ್ಕುಗಳ ಬಗ್ಗೆ ಪ್ರಚಾರ ಮತ್ತು ಅವುಗಳ ರಕ್ಷಣೆಗೆ ಭಾರತ ಕೈಗೊಂಡ ಕ್ರಮಗಳನ್ನು ವಿವರಿಸುತ್ತದೆ.
ನ್ಯಾಯಾಂಗ, ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಅಕಾಡೆಮಿ, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಸಾರ್ವಜನಿಕರು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ನಡೆಸಿದ ಆಳ ಸಮಾಲೋಚನೆಯ ಬಳಿಕ ರಾಷ್ಟ್ರೀಯ ವರದಿ ಸಿದ್ಧಪಡಿಸಲಾಗಿದೆ.