BBMP and Karnataka HC
BBMP and Karnataka HC 
ಸುದ್ದಿಗಳು

ಬಿಬಿಎಂಪಿ ಆದೇಶ ಪಾಲನೆ ಸಂಬಂಧ ಮೆಮೊ ಸಲ್ಲಿಕೆ; ಸ್ಥಿತಿಗತಿ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

Bar & Bench

ಬೆಂಗಳೂರಿನಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶ‌ ಮತ್ತು ನಿರ್ದೇಶನಗಳು, ಅದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಾಲಿಸಿರುವುದು ಹಾಗೂ ಪಾಲಿಸದಿರುವುದರ ವಿವರ ಹಾಗೂ ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ಕ್ರಮದ ಕುರಿತ ಪಟ್ಟಿಯನ್ನು ಒಳಗೊಂಡ ಮೆಮೊವನ್ನು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.

ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಬಿಬಿಎಂಪಿ ವಿಫಲವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಅರ್ಜಿದಾರರ ವಕೀಲರು ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಸಲ್ಲಿಸಿರುವ ಮೆಮೊವನ್ನು ಸ್ವೀಕರಿಸಲಾಗಿದೆ. ಮುಂದಿನ ವಿಚಾರಣೆ ವೇಳೆಗೆ ಪ್ರತಿವಾದಿ ಬಿಬಿಎಂಪಿಯು ಸ್ಥಿತಿಗತಿ ವರದಿ ಸಲ್ಲಿಸಬೇಕು” ಎಂದು ಪೀಠವು ಹೇಳಿದ್ದು, ವಿಚಾರಣೆಯನ್ನು ಜೂನ್‌ 15ಕ್ಕೆ ಮುಂದೂಡಿದೆ.

ಕಳೆದ ವಿಚಾರಣೆಯಲ್ಲಿ ನ್ಯಾಯಾಲಯದ ನಿರ್ಬಂಧದ ಹೊರತಾಗಿಯೂ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿದ ವಿಚಾರವಾಗಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬೇಷರತ್ ಕ್ಷಮೆ ಯಾಚಿಸಿ ಅಫಿಡವಿಟ್‌ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಅವರ ವಿರುದ್ದ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದು ಪೀಠವು ಹೇಳಿದ್ದನ್ನು ಇಲ್ಲಿ ನೆನಯಬಹುದಾಗಿದೆ.

ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಅವರ ನೆರವಿಗೆ ಯಾವುದೇ ನೀತಿ, ನಿಯಮ ಅಥವಾ ಕಾನೂನು ಈಗ ಬರುವುದಿಲ್ಲ. ತಮ್ಮ ನಡತೆಯ ಕುರಿತು ಹತ್ತು ದಿನಗಳ ಒಳಗೆ ಅವರು ಸಲ್ಲಿಸುವ ವೈಯಕ್ತಿಕ ಅಫಿಡವಿಟ್‌ ಪರಿಶೀಲಿಸಿದ ಬಳಿಕ ಅವರಿಗೆ ಕುರುಣೆ ತೋರಬೇಕೇ, ಬೇಡವೇ ಎಂಬುದುನ್ನು ನಿರ್ಧರಿಸಲಾಗುವುದು ಎಂದು ಹೈಕೋರ್ಟ್‌ ಮಾರ್ಚ್‌ 5ರ ಆದೇಶದಲ್ಲಿ ಕಠಿಣ ಆದೇಶ ಮಾಡಿತ್ತು.