ನ್ಯಾಯಾಲಯದ ಆದೇಶ ಉಲ್ಲಂಘಿಸಿ ತ್ಯಾಜ್ಯ ವಿಲೇವಾರಿ: ಬೇಷರತ್‌ ಕ್ಷಮೆ ಕೇಳಿದ ಆಯುಕ್ತ ಗುಪ್ತಾ; ಕ್ರಮ ಕೈಬಿಟ್ಟ ಹೈಕೋರ್ಟ್‌

ಪ್ರಕರಣದ ಸಂಬಂಧ ನೀಡಿರುವ ನಿರ್ದೇಶನಗಳಲ್ಲಿ ಪಾಲಿಸಿರುವ ಹಾಗೂ ಪಾಲನೆಯಾಗದಿರುವ ನಿರ್ದೇಶನಗಳ ಪಟ್ಟಿ ಮಾಡಬೇಕು. ನ್ಯಾಯಾಲಯದ ಆದೇಶ ಪಾಲನೆಗೆ ಅಗತ್ಯವಿರುವ ಕ್ರಿಯಾ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಬೇಕು ಎಂದ ಪೀಠ.
BBMP Commissioner Gauvrav Gupta and Karnataka HC

BBMP Commissioner Gauvrav Gupta and Karnataka HC

ನ್ಯಾಯಾಲಯದ ನಿರ್ಬಂಧದ ಹೊರತಾಗಿಯೂ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ಸುರಿದ ವಿಚಾರವಾಗಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಗುರುವಾರ ಬೇಷರತ್ ಕ್ಷಮೆ ಯಾಚಿಸಿ ಸಲ್ಲಿಸಿರುವ ಅಫಿಡವಿಟ್‌ ಅನ್ನು ಕರ್ನಾಟಕ ಹೈಕೋರ್ಟ್‌ ಒಪ್ಪಿದ್ದು, ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸುವ ನಿರ್ಧಾರ ಕೈಬಿಟ್ಟಿದೆ. ಕಳೆದ ವಿಚಾರಣೆ ಸಂದರ್ಭದಲ್ಲಿ ಗುಪ್ತಾ ಅವರ ಅಫಿಡವಿಟ್‌ ಪರಿಶೀಲಿಸಿದ ಬಳಿಕ ಅವರಿಗೆ ಕರುಣೆ ತೋರಬೇಕೆ, ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ನ್ಯಾಯಾಲಯವು ಕಟುವಾಗಿ ನುಡಿದಿತ್ತು.

ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಬಿಬಿಎಂಪಿ ವಿಫಲವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಭವಿಷ್ಯದಲ್ಲಿ ಆಯುಕ್ತರು ಜಾಗರೂಕತೆಯಿಂದಿರಬೇಕು, ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಪೀಠ ಹೇಳಿದೆ.

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ನಿರ್ದೇಶನದಂತೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗಿರುವುದಕ್ಕೆ ಬೇಷರತ್ ಕ್ಷಮೆ ಯಾಚಿಸುತ್ತೇನೆ. ನ್ಯಾಯಾಲಯದ ಬಗ್ಗೆ ಅತ್ಯಂತ ಗೌರವ ಹೊಂದಿದ್ದೇನೆ. ನ್ಯಾಯಾಲಯದ ಆದೇಶ ಉಲ್ಲಂಘಿಸುವ ಯಾವ ಉದ್ದೇಶವೂ ಇಲ್ಲ. ಸದ್ಯ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅನುಮತಿ ನೀಡಿದೆ. ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಭವಿಷ್ಯದಲ್ಲಿ ಮತ್ತಷ್ಟು ಜಾಗರೂಕತೆಯಿಂದ ಇರಲಾಗುವುದು ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವುದನ್ನು ಪೀಠವು ದಾಖಲೆಯಲ್ಲಿ ಪರಿಗಣಿಸಿದೆ.

ಅರ್ಜಿದಾರ ಪರ ವಕೀಲ ಜಿ ಆರ್‌ ಮೋಹನ್‌ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕಾಲಕಾಲಕ್ಕೆ ಅನೇಕ ನಿರ್ದೇಶನಗಳನ್ನು ನೀಡಿದೆ. ಸರ್ಕಾರ, ಬಿಬಿಎಂಪಿ ಹಾಗೂ ಇತರ ಪ್ರತಿವಾದಿಗಳು ಕೆಲ ನಿರ್ದೇಶನಗಳನ್ನು ಪಾಲನೆ ಮಾಡಿ ವರದಿ ಸಲ್ಲಿಸಿದ್ದು, ಮತ್ತಷ್ಟು ನಿರ್ದೇಶನಗಳನ್ನು ಪಾಲಿಸಿಲ್ಲ ಎಂದು ಪೀಠದ ಗಮನಕ್ಕೆ ತಂದರು.

Also Read
ಬಿಬಿಎಂಪಿ ಆಯುಕ್ತ ಗುಪ್ತಾ ಅಫಿಡವಿಟ್‌ ಸಲ್ಲಿಕೆ ನಂತರ ಕರುಣೆ ತೋರಬೇಕೆ, ಬೇಡವೇ ಎಂದು ನಿರ್ಧಾರ: ಹೈಕೋರ್ಟ್‌ ಕೆಂಡಾಮಂಡಲ

ಆಗ ನ್ಯಾಯಾಲಯವು ಪ್ರಕರಣದ ಸಂಬಂಧ ನೀಡಿರುವ ನಿರ್ದೇಶನಗಳಲ್ಲಿ ಪಾಲಿಸಿರುವ ಹಾಗೂ ಪಾಲನೆಯಾಗದಿರುವ ನಿರ್ದೇಶನಗಳ ಪಟ್ಟಿ ಮಾಡಬೇಕು. ನ್ಯಾಯಾಲಯದ ಆದೇಶ ಪಾಲನೆಗೆ ಅಗತ್ಯವಿರುವ ಕ್ರಿಯಾ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಬೇಕು ಎಂದು ಮೋಹನ್‌ ಅವರಿಗೆ ನಿರ್ದೇಶಿಸಿತು.

ರಾಜ್ಯ ಸರ್ಕಾರ, ಬಿಬಿಎಂಪಿ ಸೇರಿ ಎಲ್ಲ ಪ್ರತಿವಾದಿಗಳು ನ್ಯಾಯಾಲಯದ ಆದೇಶ ಜಾರಿಗೆ ತರುವ ಕಾರ್ಯವನ್ನು ಮುಂದುವರಿಸಿ, ಮುಂದಿನ ವಿಚಾರಣೆ ವೇಳೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿತು. ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಮುಂದಿನ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ ಪೀಠವು ಮೂರು ವಾರ ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com