ತಮ್ಮ ವಿರುದ್ಧ ಹೂಡಲಾಗಿರುವ ಮಾದಕವಸ್ತು ಪ್ರಕರಣ ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ ಸರ್ಕಾರದ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. (ಸಮೀರ್ ಖಾನ್ ಮತ್ತು ಎನ್‌ಸಿಬಿ ನಡುವಣ ಪ್ರಕರಣ).
ಖಾನ್ ಹಾಗೂ ಇತರ ಇಬ್ಬರ ಆರೋಪಿಗಳಾದ ರಾಹಿಲಾ ಫರ್ನಿಚರ್‌ವಾಲಾ ಮತ್ತು ಕರಣ್ ಸೆಜ್ನಾನಿ ಅವರ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 8 (ಸಿ), 20 (ಬಿ) (ಸಿ), 27 ಎ, 27, 28 ಹಾಗೂ 29ರ ಅಡಿ ಮೊಕದ್ದಮೆ ದಾಖಲಿಸಲಾಗಿದೆ.
194.6 ಕೆಜಿಯಷ್ಟು ಗಾಂಜಾ ಮತ್ತು 6 ಸಿಬಿಡಿ (ಕ್ಯಾನಬಿಡಿಯಾಲ್) ಸ್ಪ್ರೇಗಳ ಸಂಗ್ರಹ, ಮಾರಾಟ ಹಾಗೂ ಸಾಗಾಟಕ್ಕೆ ರಹಿಲಾ ಫರ್ನಿಚರ್‌ವಾಲಾ ಮತ್ತು ಕರಣ್ ಸೆಜ್ನಾನಿ ಅವರೊಂದಿಗೆ ಸೇರಿ ಸಮೀರ್ ಖಾನ್ ಅವರು ಸಂಚು ರೂಪಿಸಿದ್ದಾರೆ ಎಂದು ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಆರೋಪಿಸಿತ್ತು.
ತಮ್ಮನ್ನು ತಪ್ಪಾಗಿ ಬಂಧಿಸಲಾಗಿದೆ, ತಮ್ಮಿಂದ ಅಥವಾ ತಮಗೆ ಸಂಬಂಧಿಸಿದ ವ್ಯಕ್ತಿಗಳಿಂದ ಯಾವುದೇ ಮಾದಕವಸ್ತು ವಶಪಡಿಸಿಕೊಂಡಿಲ್ಲ ಸಂಗ್ರಹಿಸಿದ 18 ಮಾದರಿಗಳಲ್ಲಿ ಒಂದರಲ್ಲಿ ಮಾತ್ರ ಗಾಂಜಾ ಪತ್ತೆಯಾಗಿದೆ ಎನ್ನುತ್ತದೆ ರಾಸಾಯನಿಕ ವಿಶ್ಲೇಷಕರ ವರದಿ. ಅಲ್ಲದೆ ಸಂಚು ರೂಪಿಸಿದ್ದಕ್ಕೆ ಯಾವುದೇ ಆಧಾರಗಳಿಲ್ಲ ಎಂಬ ಕಾರಣಗಳನ್ನು ನೀಡಿ ಖಾನ್ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ. ಆರೋಪಿಗಳ ಹೇಳಿಕೆ ಹೊರತುಪಡಿಸಿದರೆ ಬೇರಾವ ನಿಷೇಧಿತ ವಸ್ತುವನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಿಲ್ಲ ಎಂದು ಹೇಳಿದ್ದ ವಿಶೇಷ ನ್ಯಾಯಾಲಯ ಅಕ್ಟೋಬರ್ 14, 2021ರಂದು ಖಾನ್ ಅವರಿಗೆ ಜಾಮೀನು ನೀಡಿದೆ.