ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದ ಪ್ರಕರಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಮುಖಂಡ ಬಸನಗೌಡ ಬಾದರ್ಲಿ ಅವರ ವಿರುದ್ಧ ಹೊರಡಿಸಿದ್ದ ಜಾಮೀನುರಹಿತ ವಾರೆಂಟ್ ಹಿಂಪಡೆದಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಬ್ಬರಿಗೂ ಬುಧವಾರ ಜಾಮೀನು ಮಂಜೂರು ಮಾಡಿದೆ. (ನಾರಾಯಣಿ ವರ್ಸಸ್ ಡಿ ಕೆ ಶಿವಕುಮಾರ್ ಮತ್ತು ಇತರರು).
ನಾರಾಯಣಿ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಸಿದ ನಗರದ 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹಾಗೂ ಹಾಲಿ ಮತ್ತು ಮಾಜಿ ಶಾಸಕರ ಪ್ರಕರಣಗಳ ವಿಚಾರಣೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್ ಅವರು ಈ ಆದೇಶ ಮಾಡಿದ್ದಾರೆ.
ಖಂಡ್ರೆ ಹಾಗೂ ಬಾದರ್ಲಿ ಅವರ ಖುದ್ದು ಹಾಜರಾತಿಯ ಹಿನ್ನೆಲೆಯಲ್ಲಿ ಇಬ್ಬರೂ ತಲಾ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ನೀಡಿ ಜಾಮೀನು ಪಡೆಯಲು ಸೂಚಿಸಿತು. ಆದರೆ, ಅರ್ಜಿದಾರರು ಇದಕ್ಕೆ ಬದಲಾಗಿ ನಗದು ಠೇವಣಿ ಸಲ್ಲಿಸಲು ಅವಕಾಶ ಕೋರಿದ ಕಾರಣ ಅವರ ಮನವಿಯನ್ನು ಪರಿಗಣಿಸಿದ ಪೀಠವು ತಲಾ 5 ಸಾವಿರ ರೂಪಾಯಿ ನಗದು ಠೇವಣಿ ಇಡಲು ಆದೇಶಿಸಿ, ಜಾಮೀನು ಮಂಜೂರು ಮಾಡಿತು. ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಲಾಗಿದೆ.
ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಈಶ್ವರ್ ಖಂಡ್ರೆ, ಎನ್ ಎಸ್ ಮಂಜುನಾಥ್, ಬಸವನಗೌಡ ಬಾದರ್ಲಿ, ಶಫೀವುಲ್ಲಾ ಮತ್ತು ಸಲೀಂ ಮೊಹಮ್ಮದ್ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ ಅಡಿ ನಾರಾಯಣಿ ಎಂಬುವವರು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಮಾರ್ಚ್ 23ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಎಲ್ಲಾ ಆರೋಪಿಗಳಿಗೂ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು.
ಶಫಿ ಉಲ್ಲಾ ಮತ್ತು ಸಲೀಮ್ ಮೊಹಮ್ಮದ್ ಅವರಿಗೆ ಈಗಾಗಲೇ ಜಾಮೀನು ದೊರೆತಿದ್ದು, ಕಳೆದ ಶುಕ್ರವಾರ ಡಿ ಕೆ ಶಿವಕುಮಾರ್ ಮತ್ತು ಮಂಜುನಾಥ್ ಎನ್ ಎಸ್ ಅವರಿಗೆ ತಲಾ ಹತ್ತು ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ತಲಾ ಒಂದೊಂದು ಭದ್ರತೆ ಪಡೆದು ಜಾಮೀನು ಮಂಜೂರು ಮಾಡಲಾಗಿತ್ತು. ಅಂದೂ ಖಂಡ್ರೆ ಮತ್ತು ಬಾದರ್ಲಿ ಅವರು ಹಾಜರಾಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜಾಮೀನುರಹಿತ ವಾರೆಂಟ್ ಜಾರಿ ಮಾಡಲಾಗಿತ್ತು. ಹೀಗಾಗಿ, ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಿದ್ದ ಖಂಡ್ರೆ ಮತ್ತು ಬಾದರ್ಲಿ ಅವರ ಕೋರಿಕೆಯನ್ನು ನ್ಯಾಯಾಲಯ ಪರಿಗಣಿಸಿ, ಜಾಮೀನು ನೀಡಿದೆ.