CM Siddaramaiah 
ಸುದ್ದಿಗಳು

[ಸೌಜನ್ಯ ಪ್ರಕರಣ] ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೆ ಸಲ್ಲಿಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ

“ನನಗೆ ತಿಳಿದಿರುವ ಮಟ್ಟಿಗೆ, ವಕೀಲನಾಗಿ ಹೇಳುವುದೇನೆಂದರೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ತೀರ್ಪಿನ ಪ್ರತಿಯನ್ನು ತಂದುಕೊಟ್ಟಿದ್ದಾರೆ. ಆದರೆ, ಅದನ್ನು ನಾನು ಇನ್ನೂ ಓದಿಲ್ಲ” ಎಂದ ಸಿಎಂ.

Bar & Bench

ರಾಜ್ಯದಾದ್ಯಂತ ಆಕ್ರೋಶ ಮೂಡಿಸಿದ್ದ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಕಳೆದ ಕೆಲ ದಿನಗಳಿಂದ ಎದ್ದಿರುವ ಕೂಗಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.

“ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನೀಡಲಾಗಿತ್ತು. (ವಿಚಾರಣಾಧೀನ) ನ್ಯಾಯಾಲಯದಲ್ಲಿ ಅದು ಇತ್ಯರ್ಥವಾಗಿದೆ. ಸೌಜನ್ಯ ಪೋಷಕರು ಮತ್ತು ಕೆಲವರು ಅದನ್ನು ಮರು ತನಿಖೆ ಮಾಡಬೇಕು ಎಂದು ಕೋರಿದ್ದಾರೆ. ಕಾನೂನಾತ್ಮಕವಾಗಿ ಏನು ಮಾಡಬೇಕಿದೆ ಎಂಬುದನ್ನು ವಿಚಾರ ಮಾಡಬೇಕಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉಡುಪಿಯಲ್ಲಿ ಮಂಗಳವಾರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು “ನನಗೆ ತಿಳಿದಿರುವ ಮಟ್ಟಿಗೆ, ವಕೀಲನಾಗಿ ಹೇಳುವುದೇನೆಂದರೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ. ತೀರ್ಪಿನ ಪ್ರತಿಯನ್ನು ತಂದುಕೊಟ್ಟಿದ್ದಾರೆ. ಆದರೆ, ಅದನ್ನು ನಾನು ಓದಿಲ್ಲ. ವಿಚಾರಣಾಧೀನ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ” ಎಂದರು.

ಈ ಸಂಬಂಧ ಮುಖ್ಯಮಂತ್ರಿ ಅವರ ಅಧಿಕೃತ ಖಾತೆಯಿಂದ ಟ್ವೀಟ್‌ ಮಾಡಲಾಗಿದ್ದು “ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಿಬಿಐ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಅವರ ಪೋಷಕರು ಹಾಗೂ ಸಾಮಾಜಿಕ ಹೋರಾಟಗಾರರು ಈ ಪ್ರಕರಣದ ಮರುತನಿಖೆಗೆ ಒತ್ತಾಯಿಸಿದ್ದಾರೆ. ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬಹುದೆಂದು ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನ್ಯಾಯಾಲಯದ ತೀರ್ಪನ್ನು ಓದಿ, ನಂತರ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೆ ಸಲ್ಲಿಸಲಾಗುವುದು” ಎಂದು ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ: ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ 2012ರ ಅಕ್ಟೋಬರ್‌ 9ರಂದು ನಾಪತ್ತೆಯಾಗಿದ್ದರು. ಮರು ದಿನ ಮೃತ ವಿದ್ಯಾರ್ಥಿನಿಯ ದೇಹವು ಮಣ್ಣಸಂಕ ಬಳಿ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಬೆಳ್ತಂಗಡಿ ಠಾಣೆಯಲ್ಲಿ ಮೊದಲಿಗೆ ಆಕೆಯ ತಂದೆ ಚಂದ್ರಪ್ಪ ಗೌಡ ಅವರು ತನ್ನ ಎರಡನೇ ಪುತ್ರಿ ಸೌಜನ್ಯ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಆನಂತರ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿತ್ತು.

ಪ್ರಕರಣವು 2013ರಲ್ಲಿ ಸಿಬಿಐಗೆ ವರ್ಗಾವಣೆಗೊಂಡಿದ್ದು, 2015ರಲ್ಲಿ ಪ್ರಕರಣವು ಮಂಗಳೂರಿನಿಂದ ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.

ಪ್ರಕರಣದಲ್ಲಿ ಇತ್ತೀಚೆಗೆ ಆದೇಶ ನೀಡಿದ್ದ ನ್ಯಾಯಾಲಯವು ಸುಮಾರು 11 ವರ್ಷಗಳ ಸುದೀರ್ಘ ಕಾನೂನು ಪ್ರಕ್ರಿಯೆ ಇದಾಗಿದೆ. ಸಿಆರ್‌ಪಿಸಿ ಸೆಕ್ಷನ್‌ 235(1)ರ ಅಡಿ ಆರೋಪಿ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ತನ್ನ ಆದೇಶದಲ್ಲಿ ಹೇಳಿತ್ತು.