ಸುದ್ದಿಗಳು

ದಕ್ಷಿಣ ಭಾರತದಲ್ಲಿ ಸುಪ್ರೀಂ ಪೀಠ: ಸಿಜೆಐ ರಮಣ, ಉಪರಾಷ್ಟ್ರಪತಿಗಳ ಭೇಟಿ ಮಾಡಿದ 5 ರಾಜ್ಯಗಳ ವಕೀಲರ ಪರಿಷತ್‌ ನಿಯೋಗ

Bar & Bench

ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ ಆರಂಭಿಸುವ ಸಂಬಂಧ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಕೀಲರ ಪರಿಷತ್‌ನ ಪ್ರಮುಖ ಪದಾಧಿಕಾರಿಗಳ ನಿಯೋಗವು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶ ವಕೀಲರ ಪರಿಷತ್‌ ಅಧ್ಯಕ್ಷರಾದ ಎಲ್‌ ಶ್ರೀನಿವಾಸ್‌ ಬಾಬು, ಅಮಲ್‌ ರಾಜ್‌ ಪಿ ಎಸ್‌, ಎ ನರಸಿಂಹ ರೆಡ್ಡಿ ಮತ್ತು ರಾಮರಾವ್‌ ಘಂಟ ಹಾಗೂ ಕೇರಳ ವಕೀಲರ ಪರಿಷತ್‌ ಉಪಾಧ್ಯಕ್ಷ ಕೆ ಎನ್‌ ಅನಿಲ್‌ ಕುಮಾರ್‌, ತೆಲಂಗಾಣ ವಕೀಲರ ಪರಿಷತ್‌ ಸದಸ್ಯ ಕೊಂಡಾ ರೆಡ್ಡಿ, ವಕೀಲ ಹಾಗೂ ಬಿಜೆಪಿ ಶಾಸಕ ಎನ್‌ ರಾಮಚಂದ್ರ ರಾವ್‌ ಅವರು ನಿಯೋಗದಲ್ಲಿದ್ದರು.

ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ ಪೀಠ ಆರಂಭಿಸುವಂತೆ ಕಳೆದ ಜನವರಿಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ವಕೀಲರ ಪರಿಷತ್‌ಗಳು ಆಗ್ರಹಿಸಿದ್ದವು.

ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ ಇರುವುದರಿಂದ ದೂರದ ಕಾರಣಕ್ಕೆ ಅಲ್ಲಿಗೆ ತೆರಳಲಾಗದೆ ಮತ್ತು ಅದಕ್ಕೆ ತಗುಲುವ ಖರ್ಚುವೆಚ್ಚ ಭರಿಸಲಾಗದೆ ಜನರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುತ್ತಿಲ್ಲ. ಹೀಗಾಗಿ, ದಕ್ಷಿಣ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಬೇಡಿಕೆ ಸಲ್ಲಿಸಲಾಗಿದೆ ಎಂದು ನಿಯೋಗವು ಹೇಳಿದೆ.

ಈ ಸಂಬಂಧ ತೆಲಂಗಾಣ ವಕೀಲರ ಪರಿಷತ್‌ ಸದಸ್ಯ ಕೆ ಕೊಂಡಾರೆಡ್ಡಿ ಅವರು ವೆಬಿನಾರ್‌ ಆಯೋಜಿಸಿದ್ದು, ಇದರಲ್ಲಿ ದಕ್ಷಿಣ ಭಾರತದ ಎಲ್ಲಾ ವಕೀಲರ ಪರಿಷತ್‌ ಪದಾಧಿಕಾರಿಗಳು ಭಾಗವಹಿಸಿದ್ದರು. ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ ಪೀಠ ಆರಂಭಿಸುವ ಸಂಬಂಧ ದಕ್ಷಿಣ ಭಾರತದ ರಾಜ್ಯಗಳ ವಿಧಾನ ಮಂಡಲಗಳಲ್ಲಿ ನಿಲುವಳಿ ಮಂಡಿಸಿ ಅದಕ್ಕೆ ಒಪ್ಪಿಗೆ ಸೂಚಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ಮನವಿ ಮಾಡಲು ನಿರ್ಧರಿಸಲಾಗಿತ್ತು.

ಈ ಮಧ್ಯೆ, ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರನ್ನು ಭೇಟಿ ಮನವಿ ಸಲ್ಲಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಸುಪ್ರೀಂ ಕೋರ್ಟ್‌ ಪೀಠ ಆರಂಭಿಸಲು ಎಲ್ಲಾ ರೀತಿಯಲ್ಲೂ ಪ್ರಶಸ್ತ ಸ್ಥಳವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ದಾವೆದಾರರ ಹಿತದೃಷ್ಟಿಯಿಂದ ದಕ್ಷಿಣ ಭಾರತದಲ್ಲಿ ಸುಪ್ರೀಂ ಕೋರ್ಟ್‌ ಪೀಠ ಆರಂಭಿಸುವ ಬಹುಕಾಲದ ಬೇಡಿಕೆಯ ಕುರಿತು 2019ರ ನವೆಂಬರ್‌ನಲ್ಲಿ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಸದನದಲ್ಲಿ ಧ್ವನಿ ಎತ್ತಿದ್ದರು. ಚೆನ್ನೈನಲ್ಲಿ ಸುಪ್ರೀಂ ಕೋರ್ಟ್‌ ಪೀಠ ಆರಂಭಿಸುವುದರಿಂದ ಬ್ಯಾಕ್‌ಲಾಗ್‌ ಪ್ರಕರಣಗಳನ್ನು ತುರ್ತಾಗಿ ಬಗೆಹರಿಸಲು ಅನುಕೂಲವಾಗುತ್ತದೆ. ಅಲ್ಲದೇ, ದೆಹಲಿಗೆ ಪ್ರಯಾಣಿಸುವ ವೆಚ್ಚ ದುಬಾರಿ ಆದುದರಿಂದ ದಕ್ಷಿಣ ಭಾರತದ ಬಡವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತಿಲ್ಲ ಎಂದಿದ್ದರು.