ಸುಪ್ರೀಂಕೋರ್ಟ್ ಪ್ರಾದೇಶಿಕ ಪೀಠ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕು ಎಂದು ಕೆಎಸ್‌ಬಿಸಿ ಒತ್ತಾಯಿಸುತ್ತಿರುವುದೇಕೆ?

ದಕ್ಷಿಣದವರು ಹಣಕಾಸಿನ ಕೊರತೆಯಿಂದಾಗಿ ನ್ಯಾಯ ಲಭ್ಯತೆಯಿಂದ ದೂರ ಉಳಿಯದಂತಾಗಲು ಹಾಗೂ ತಮ್ಮ ಪ್ರಕರಣಗಳಿಗಾಗಿ ದೆಹಲಿಗೆ ಧಾವಿಸುವುದನ್ನು ತಪ್ಪಿಸಲು ದಕ್ಷಿಣದಲ್ಲಿ ಸುಪ್ರೀಂಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸುಪ್ರೀಂಕೋರ್ಟ್ ಪ್ರಾದೇಶಿಕ ಪೀಠ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕು ಎಂದು ಕೆಎಸ್‌ಬಿಸಿ ಒತ್ತಾಯಿಸುತ್ತಿರುವುದೇಕೆ?

ಸುಪ್ರೀಂಕೋರ್ಟ್‌ ಪ್ರಾದೇಶಿಕ ಪೀಠವನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು ಎಂದು ಕೋರಿ ಕರ್ನಾಟಕ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅಧ್ಯಕ್ಷ ಎಲ್‌ ಶ್ರೀನಿವಾಸಬಾಬು ಅವರು ಗುರುವಾರ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ದಕ್ಷಿಣದಲ್ಲಿ ಪ್ರಾದೇಶಿಕ ಪೀಠ ಸ್ಥಾಪನೆ ಸಂಬಂಧ ರಾಷ್ಟ್ರಪತಿಗಳ ಗಮನ ಸೆಳೆಯುವಂತೆಯೂ ಅವರು ಕೋರಿದ್ದಾರೆ.

ʼದೇಶದ ಬಹುತೇಕ ದಾವೆಗಳು ಸುಪ್ರೀಂಕೋರ್ಟ್‌ನಲ್ಲಿ ಇತ್ಯಾರ್ಥವಾಗುತ್ತಿದ್ದು ಸುಮಾರು 65,000 ಪ್ರಕರಣಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ದೇಶದ ದೂರದೂರದ ಸ್ಥಳಗಳಲ್ಲಿರುವವರು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡುವುದರಿಂದ ಮೊಕದ್ದಮೆಗಳು ಹೆಚ್ಚಳವಾಗುವುದಲ್ಲದೆ ದಾವೆಯ ವೆಚ್ಚವೂ ಹೆಚ್ಚುತ್ತದೆ. ಚೆನ್ನೈ, ತಿರುವನಂತಪುರ, ಪುದುಚೇರಿ, ಗುಜರಾತ್‌, ಮಹಾರಾಷ್ಟ್ರ, ಗೋವಾ, ಹಾಗೂ ಪೂರ್ವದಲ್ಲಿ ಅಸ್ಸಾಂ ಮತ್ತಿತರ ರಾಜ್ಯಗಳಿಂದಲೂ ನವದೆಹಲಿಗೆ ದಾವೆದಾರರು ಬರುತ್ತಾರೆʼ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ʼಸುಪ್ರೀಂಕೋರ್ಟ್‌ನ ಈಗಿನ ಕಾರ್ಯವೈಖರಿಯನ್ನು ಕೊಂಚ ಬದಲಿಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು. ಮುಖ್ಯ ದಾವೆಗಳನ್ನು ಹೊರತುಪಡಿಸಿ ಉಳಿದ ದಾವೆಗಳ ವಿಚಾರಣೆಗೆ ಖಾಯಂ ಪ್ರಾದೇಶಿಕ ಪೀಠಗಳನ್ನು ತೆರೆಯುವುದು ಅಗತ್ಯವಿದೆ. ಇದಕ್ಕೆ ನ್ಯಾಯಾಂಗ ವ್ಯವಸ್ಥೆಯ ಸದಸ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಸತ್ತಿನ ಸ್ಥಾಯಿ ಸಮಿತಿಗಳು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಕೀಲರ ಪರಿಷತ್ತುಗಳು ಕಾನೂನು ಆಯೋಗಗಳು ಈ ನಿಟ್ಟಿನಲ್ಲಿ ಪತ್ರಗಳನ್ನು ಬರೆದಿವೆʼ ಎಂದು ಕೆಎಸ್‌ಬಿಸಿ ಮನವಿಯಲ್ಲಿ ತಿಳಿಸಲಾಗಿದೆ.

Also Read
ಅಗತ್ಯವಿರುವ ವಕೀಲರಿಗೆ ₹5 ಕೋಟಿ ಹಂಚಿಕೆಯ ಕೆಎಸ್‌ಬಿಸಿ ಯೋಜನೆ ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

"2009 ರಲ್ಲಿ ನ್ಯಾಯಮೂರ್ತಿ ಲಕ್ಷ್ಮಣನ್ ಅವರ ನೇತೃತ್ವದ 18 ನೇ ಕಾನೂನು ಆಯೋಗವು ಸಾಂವಿಧಾನಿಕ ವಿಷಯಗಳನ್ನು ಆಲಿಸಲು ದೆಹಲಿಯಲ್ಲಿ ಸಾಂವಿಧಾನಿಕ ಪೀಠ ಸ್ಥಾಪಿಸಬೇಕು ಉಳಿದಂತೆ ನಾಲ್ಕು ಶಾಶ್ವತ ಪೀಠಗಳನ್ನು ರಚಿಸಬೇಕೆಂದು ಶಿಫಾರಸು ಮಾಡಿದೆʼ ಎಂದು ಮನವಿಯಲ್ಲಿ ತಿಳಿಸಲಾಗಿದ್ದು "ಸಂವಿಧಾನದ 130ನೇ ವಿಧಿಯು ರಾಷ್ಟ್ರಪತಿಯವರ ಒಪ್ಪಿಗೆಯೊಂದಿಗೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರಾದೇಶಿಕ ಪೀಠ ರಚಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಅಧಿಕಾರ ನೀಡುತ್ತದೆ. ಏಳು ಸದಸ್ಯರ ಸಾಂವಿಧಾನಿಕ ಪೀಠವನ್ನು ಹೊಂದಲು ಸುಪ್ರೀಂಕೋರ್ಟ್‌ನ ನಿಯಮಾವಳಿಗಳು ಅವಕಾಶ ನೀಡಲಿದ್ದು ನಾಲ್ಕು ಅಥವಾ ಆರು ನ್ಯಾಯಮೂರ್ತಿಗಳಿರುವ ಸಣ್ಣ ಪೀಠಗಳನ್ನು ದೇಶದ ಉಳಿದೆಡೆ ಸ್ಥಾಪಿಸುವಂತೆ ಹೇಳುತ್ತದೆʼ ಎಂಬುದಾಗಿ ವಿವರಿಸಿದೆ.

ʼಸಾಮಾನ್ಯ ಜನರಿಗೆ ತ್ವರಿತ ನ್ಯಾಯ ಒದಗಿಸುವ ಸಲುವಾಗಿ ಸುಪ್ರೀಂಕೋರ್ಟ್‌ ದಕ್ಷಿಣ, ಪಶ್ಚಿಮ ಹಾಗೂ ಈಶಾನ್ಯ ಭಾಗಗಳಲ್ಲಿ ತನ್ನ ಪೀಠಗಳನ್ನು ಸ್ಥಾಪಿಸಬೇಕು ಎಂದು 2004, 2005 ಹಾಗೂ 2006ರ ಸಂಸದೀಯ ಸ್ಥಾಯಿ ಸಮಿತಿ ವರದಿಗಳು ಹೇಳುತ್ತವೆ. ಸ್ಥಾಯಿಸಮಿತಿಯ 20, 26 ಹಾಗೂ 28ನೇ ವರದಿಗಳು ಚೆನ್ನೈನಲ್ಲಿ ಪ್ರಾಯೋಗಿಕವಾಗಿ ಪ್ರಾದೇಶಿಕ ಪೀಠ ಸ್ಥಾಪನೆಯಾಗಬೇಕು. ಇದರಿಂದ ದೆಹಲಿಗೆ ತಲುಪಲಾಗದ ಬಡವರಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತವೆʼ ಎಂಬುದಾಗಿ ಮನವಿ ಪತ್ರ ತಿಳಿಸಿದೆ.

ʼಕಾನೂನು ಆಯೋಗ ತನ್ನ 229 ನೇ ವರದಿಯಲ್ಲಿ ಶಾಶ್ವತ ಪೀಠವನ್ನು ನವದೆಹಲಿ, ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತಾಗಳಲ್ಲಿ ಸ್ಥಾಪಿಸಬೇಕೆಂದು ಹೇಳಿದೆ. ಈ ವರದಿಗಳ ಹೊರತಾಗಿಯೂ ಪ್ರಾದೇಶಿಕ ಪೀಠ ಸ್ಥಾಪನೆಗೆ ಸುಪ್ರೀಂಕೋರ್ಟ್‌ ಸಮ್ಮತಿ ಸೂಚಿಸಿಲ್ಲ. ಕಾನೂನು ಆಯೋಗದ 229 ನೇ ವರದಿ ನಾಲ್ಕು ಪ್ರಾದೇಶಿಕ ಪೀಠಗಳನ್ನು ಸ್ಥಾಪಿಸದಿದ್ದರೂ ಉತ್ತರದಲ್ಲಿ ದೆಹಲಿಯಲ್ಲಿ ಹಾಗೂ ದಕ್ಷಿಣದಲ್ಲಿ ಬೆಂಗಳೂರಿನಲ್ಲಿ ಎರಡು ಪೀಠಗಳನ್ನಾದರೂ ಸ್ಥಾಪಿಸಿ ಕಾರ್ಯಸಾಧುವಾದ ಮತ್ತು ಪರಿಣಾಮಕಾರಿಯಾದ ರೀತಿಯಲ್ಲಿ ನ್ಯಾಯಾಂಗ ಆಡಳಿತ ನಡೆಸಬೇಕು ಎಂದು ಹೇಳುತ್ತದೆ. ಬೆಂಗಳೂರಿನಲ್ಲಿ ಪೀಠ ಸ್ಥಾಪಿಸಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ ಮತ್ತು ಲಕ್ಷದ್ವೀಪದ ಪ್ರಕರಣಗಳ ವಿಚಾರಣೆ ನಡೆಸಬಹುದು ಎಂದು ಅದು ಶಿಫಾರಸು ಮಾಡಿದೆʼ ಎಂಬ ಮಾಹಿತಿಯನ್ನು ಪತ್ರದಲ್ಲಿ ನೀಡಲಾಗಿದೆ.

Also Read
ಕೋವಿಡ್ ಸೋಂಕಿತ ವಕೀಲರ ನೆರವಿಗೆ ಧಾವಿಸಿದ ಕೆಎಸ್‌ಬಿಸಿ: ರೂ.25 ಸಾವಿರದವರೆಗೆ ಧನಸಹಾಯ

"ಈ ಪೀಠಗಳು ಶಾಶ್ವತ ಪೀಠಗಳಾಗಿ ಕಾರ್ಯ ನಿರ್ವಹಿಸಲಿದ್ದು ನಿರ್ದಿಷ್ಟ ಪ್ರಕರಣದ ಕುರಿತು ಹೈಕೋರ್ಟಗಳ ತೀರ್ಪು ಪ್ರಶ್ನಿಸುವ ಮೇಲ್ಮನವಿಗಳನ್ನು ಆಲಿಸುತ್ತವೆ. ಸುಪ್ರೀಂಕೋರ್ಟ್‌ ಪ್ರಧಾನ ಪೀಠ ಆಗ ಸಾಂವಿಧಾನಿಕ ಸಮಸ್ಯೆಗಳು ಹಾಗೂ ರಾಷ್ಟ್ರೀಯ ಮಹತ್ವದ ವಿಚಾರಗಳನ್ನು ಆಲಿಸಬಹುದು. ಹಾಗೆ ಮಾಡುವುದರಿಂದ ದಾವೆದಾರರು ಆಯಾ ವಲಯಗಳಲ್ಲಿ ದಾವೆ ಹೂಡುವಂತಾಗಿ ಬಾಕಿ ಉಳಿಯುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿ, ಪ್ರಕರಣಗಳ ವಿಲೇವಾರಿ ಹೆಚ್ಚುತ್ತದೆ. ಇದರಿಂದ ಸಾಮಾನ್ಯ ಜನರಿಗೆ ನಿಜಾರ್ಥದಲ್ಲಿ ಸುಪ್ರೀಂಕೋರ್ಟ್‌ ಕೈಗೆಟಕಿದಂತಾಗುತ್ತದೆ" ಎಂದು ಕೆಎಸ್‌ಬಿಸಿ ತಿಳಿಸಿದೆ.

ಪೀಠ ಸ್ಥಾಪನೆಯಾಗುವುದರಿಂದ ದೊರೆಯುವ ಇತರ ಪ್ರಯೋಜನಗಳನ್ನೂ ಪತ್ರದಲ್ಲಿ ವಿವರಿಸಲಾಗಿದೆ. ದಕ್ಷಿಣದವರು ಹಣಕಾಸಿನ ಕೊರತೆಯಿಂದಾಗಿ ನ್ಯಾಯ ಲಭ್ಯತೆಯಿಂದ ದೂರ ಉಳಿಯದಂತಾಗಲು ಹಾಗೂ ತಮ್ಮ ಪ್ರಕರಣಗಳಿಗಾಗಿ ದೆಹಲಿಗೆ ಧಾವಿಸವುದನ್ನು ತಪ್ಪಿಸಲು ದಕ್ಷಿಣದಲ್ಲಿ ಸುಪ್ರೀಂಕೋರ್ಟ್‌ ಪೀಠ ಸ್ಥಾಪನೆಯಾಗಬೇಕು. ಇದರಿಂದ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತದೆ ನ್ಯಾಯಮೂರ್ತಿಗಳ ಹುದ್ದೆ ಹೆಚ್ಚುತ್ತದೆ. ವಕೀಲರು ತಮ್ಮ ಪ್ರದೇಶದಲ್ಲಿಯೇ ಇದ್ದು ಸುಪ್ರೀಂಕೋರ್ಟ್‌ ಪ್ರಾದೇಶಿಕ ಪೀಠದಲ್ಲಿ ಪ್ರಾಕ್ಟೀಸ್‌ ಮಾಡಬಹುದು. ಹೈಕೋರ್ಟ್‌ ನ್ಯಾಯಮೂರ್ತಿಗಳ ಪದೋನ್ನತಿಯಲ್ಲಿ ಹೆಚ್ಚಳವಾಗುತ್ತದೆ ಎಂದು ಅದು ಹೇಳಿದೆ.

ನಿಗದಿತ ಸಂಖ್ಯೆಯ ನ್ಯಾಯಾಧೀಶರು ಎಲ್ಲ ಹಂತಗಳಲ್ಲಿ ನೇಮಿಸದೆ ಹೋದರೆ ಅದು ಗಂಭೀರ ನ್ಯೂನತೆಯಾಗಿ ಉಳಿಯಲಿದೆ. ಆಗ ಕೆಳ ಹಂತದಲ್ಲಿ ಸುಪ್ರೀಂಕೋರ್ಟ್‌ ಪೀಠವೊಂದನ್ನು ಸ್ಥಾಪಿಸಿದರೂ ಸಹ ಪ್ರಕರಣಗಳ ಬಾಕಿ ಉಳಿಯುವಿಕೆ ಹಾಗೂ ನ್ಯಾಯ ವಿಳಂಬ ಮುಂದುವರೆಯಲಿದೆ ಎಂಬ ಎಚ್ಚರಿಕೆಯ ನುಡಿಗಳು ಕೂಡ ಪತ್ರದಲ್ಲಿವೆ.

Related Stories

No stories found.
Kannada Bar & Bench
kannada.barandbench.com