Swami Vivekananda and Karnataka HC
Swami Vivekananda and Karnataka HC 
ಸುದ್ದಿಗಳು

ಮೈಸೂರಿನಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಮಂಜೂರು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

Bar & Bench

ಮೈಸೂರಿನ ನಾರಾಯಣ ಶಾಸ್ತ್ರಿ–ಕೃಷ್ಣ ವಿಲಾಸ ರಸ್ತೆಯಲ್ಲಿರುವ ಪುರಾತನ ನಿರಂಜನ ಮಠ ಹಾಗೂ ಎನ್‌ಟಿಎಂ ಶಾಲೆಗೆ ಸೇರಿದ ಸ್ಥಳದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕಾಗಿ 36 ಸಾವಿರ ಚದರ ಅಡಿ ಜಾಗವನ್ನು ರಾಮಕೃಷ್ಣಾಶ್ರಮಕ್ಕೆ ನೀಡಿರುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್‌ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಮೈಸೂರಿನ ಟಿ ಎಸ್‌ ಲೋಕೇಶ್‌ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ನಡೆಸಿತು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ರಾಮಕೃಷ್ಣಾಶ್ರಮದ ಅಧ್ಯಕ್ಷರಿಗೆ ನೋಟಿಸ್‌ ಜಾರಿ ಮಾಡಲು ಪೀಠ ಆದೇಶ ಮಾಡಿತು.

ಅರ್ಜಿದಾರರ ಪರ ವಕೀಲ ಜೆ ಎಂ ಅನಿಲ್‌ಕುಮಾರ್‌ ಅವರು “ರಾಜ್ಯ ಸರ್ಕಾರ ಈ ಸ್ಥಳವನ್ನು ಒತ್ತಡಕ್ಕೆ ಮಣಿದು ರಾಮಕೃಷ್ಣಾಶ್ರಮಕ್ಕೆ ಹಸ್ತಾಂತರಿಸಿದೆ. ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ, ಇಲ್ಲಿನ ಪುರಾತನ ಈಶ್ವರ ದೇವಾಲಯ ಮತ್ತು ಮಠದ ಕುರುಹುಗಳನ್ನು ನಾಶ ಮಾಡಿ ಸ್ಮಾರಕ ನಿರ್ಮಿಸಲು ಸಮುದಾಯದ ಭಕ್ತರ ಸಮ್ಮತಿಯಿಲ್ಲ. ಆದ್ದರಿಂದ ಈ ವಿವಾದಿತ ಸ್ಥಳದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಬೇಕು ಹಾಗೂ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು” ಎಂದು ಕೋರಿದರು.

ಸ್ವಾಮಿ ವಿವೇಕಾನಂದರ 100ನೇ ಜನ್ಮದಿನದ ಸ್ಮರಣಾರ್ಥ ಅವರು ದೇಶದ ವಿವಿಧೆಡೆ ನೆಲೆಸಿದ್ದ ಪ್ರಮುಖ ಸ್ಥಳಗಳನ್ನು ಸ್ಮಾರಕ ರೂಪದಲ್ಲಿ ಕಾಪಿಡುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಈ ಜಾಗವನ್ನು 2013ರ ಜನವರಿ 9ರಂದು ರಾಮಕೃಷ್ಣಾಶ್ರಮಕ್ಕೆ ಹಸ್ತಾಂತರ ಮಾಡಿದೆ.