“ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸುವ ಬದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅವಕಾಶ ನೀಡಬೇಕು” ಎಂಬ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ತಳ್ಳಿ ಹಾಕಿದೆ.
ಆರೋಪ ನಿಗದಿ ಪ್ರಕ್ರಿಯೆ ಭಾಗವಾಗಿ ಪಟ್ಟಿಯಾಗಿದ್ದ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ನಡೆಸಿದರು.
ಪ್ರಜ್ವಲ್ ಪರ ವಕೀಲ ಜಿ ಅರುಣ್ ಅವರು “ಪ್ರಜ್ವಲ್ ನ್ಯಾಯಾಲಯಕ್ಕೆ ಖುದ್ದು ಹಾಜರಾದರೆ, ಮಾಧ್ಯಮದವರು ಉತ್ಪೇಕ್ಷಿಸಿ ವರದಿ ಮಾಡುತ್ತಾರೆ” ಎಂದು ಆಕ್ಷೇಪಿಸಿದರು. ಅಂತೆಯೇ, ಪ್ರಕರಣಕ್ಕೆ ಸಂಬಂಧಿಸಿದ ಸಿಡಿಆರ್ (ಕರೆ ದಾಖಲೆ ವಿವರ) ಅನ್ನು ಪ್ರಾಸಿಕ್ಯೂಷನ್ ಒದಗಿಸಿಲ್ಲ” ಎಂದೂ ದೂರಿದರು.
ಇದನ್ನು ತಳ್ಳಿ ಹಾಕಿದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಈಗಿಂದೀಗಲೇ ಸಿಡಿಆರ್ ದಾಖಲೆಗಳನ್ನು ಮತ್ತೊಮ್ಮೆ ಒದಗಿಸುವುದಾಗಿ ತಿಳಿಸಿ ಅದನ್ನು ಅರುಣ್ ಅವರಿಗೆ ನೀಡಿದರು. ಅಂತೆಯೇ, ಆರೋಪಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಕ್ಕೆ ವಿನಾಯತಿ ನೀಡಿ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಹಾಜರಾಗಲು ಅವಕಾಶ ನೀಡಬಾರದು” ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.
ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಜನವರಿ 15ಕ್ಕೆ ಮುಂದೂಡಿ ಆದೇಶಿಸಿದರು. ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲಾಗಿತ್ತು. ಈ ಮಧ್ಯೆ, ಅರುಣ್ ಅವರು ಮುಂದಿನ ವಿಚಾರಣೆ ವೇಳೆ ಆರೋಪ ಮುಕ್ತಿ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದರು.
ಇತ್ತೀಚೆಗೆ ಹೈಕೋರ್ಟ್, ಮುಂದಿನ ವಿಚಾರಣೆವರೆಗೆ ವಾದ-ಪ್ರತಿವಾದ ಆಲಿಸಬಹುದು. ಆದರೆ, ಆರೋಪ ನಿಗದಿ ಮಾಡಬಾರದು ಎಂದು ವಿಶೇಷ ನ್ಯಾಯಾಲಯಕ್ಕ ನಿರ್ದೇಶಿಸಿತ್ತು.