BJP MLA Muniratna and Bengaluru City Civil Court 
ಸುದ್ದಿಗಳು

ಜಾತಿ ನಿಂದನೆ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು; ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೆ ಬಂಧನದ ಭೀತಿ

ಲಂಚಕ್ಕೆ ಬೇಡಿಕೆ ಹಾಗೂ ಬೆದರಿಕೆ ಪ್ರಕರಣದಲ್ಲಿ ಮುನಿರತ್ನಗೆ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

Bar & Bench

ಬಿಬಿಎಂಪಿ ಮಾಜಿ ಸದಸ್ಯನನ್ನು ಜಾತಿ ಉಲ್ಲೇಖಿಸಿ ನಿಂದಿಸಿದ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.

ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್‌ ನೀಡಿದ್ದ ದೂರಿನ ಅನ್ವಯ ವೈಯಾಲಿಕಾವಲ್‌ ಠಾಣೆಯಲ್ಲಿ ದಾಖಲಾಗಿರುವ ಜಾತಿ ನಿಂದನೆ ಆರೋಪದ ಪ್ರಕರಣದಲ್ಲಿ ಜಾಮೀನು ಕೋರಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಪುರಸ್ಕರಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಮುನಿರತ್ನ ಅವರ ಜಾಮೀನು ಮನವಿಯನ್ನು ಪುರಸ್ಕರಿಸಲಾಗಿದೆ. ಮುನಿರತ್ನ ಅವರು ಎರಡು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಸಾಕ್ಷ್ಯ ನಾಶ ಮಾಡುವ ಪ್ರಯತ್ನ ಮಾಡಬಾರದು. ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರಹೋಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.

ಲಂಚಕ್ಕೆ ಬೇಡಿಕೆ ಹಾಗೂ ಬೆದರಿಕೆ ಪ್ರಕರಣದಲ್ಲಿ ಬುಧವಾರ ಮುನಿರತ್ನಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಪ್ರಕರಣದ ಹಿನ್ನೆಲೆ: ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್‌ ತಾನು ಆದಿ ದ್ರಾವಿಡ (ಎಸ್‌ ಸಿ) ಜನಾಂಗಕ್ಕೆ ಸೇರಿದ್ದು, 2015ರಿಂದ 2020ರವರೆಗೆ ಲಕ್ಷ್ಮಿದೇವಿ ನಗರ ವಾರ್ಡ್‌ ಸಂಖ್ಯೆ 42ರ ಬಿಬಿಎಂಪಿ ಸದಸ್ಯನಾಗಿದ್ದೆ. ಕೆಲ ವಿಚಾರಗಳಲ್ಲಿ ಮುನಿರತ್ನ ಮತ್ತು ತನ್ನ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಸ್ನೇಹಿತರ ಎದುರು ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದರು. ಅಸಭ್ಯ ಪದ ಬಳಕೆಯ ಮೂಲಕ ನಿಂದಿಸಿ, ನಾನು ರಾಜಕೀಯವಾಗಿ ಬೆಳೆಯುವುದಕ್ಕೆ ಬಿಡಬಾರದು ಎಂದು ಹೇಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮುನಿರತ್ನ ಲಂಚ ನೀಡುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಚೆಲುವರಾಜು ಹೇಳಿದ್ದರು. ಲಂಚ ಕೊಡದಂತೆ ನಾನು ಅವರಿಗೆ ತಿಳಿಸಿದ್ದೆ. ತನ್ನ ಕಚೇರಿಗೆ ಕರೆಸಿಕೊಂಡಿದ್ದ ಮುನಿರತ್ನ ಅವರು ಚೆಲುವರಾಜು ಅವರನ್ನು ಜಾತಿ ನಿಂದನೆ ಮಾಡಿದ್ದಲ್ಲದೇ ಮನೆಯವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ವೇಲುನಾಯ್ಕರ್‌ ಮಾತು ಕೇಳಿ ಕಮಿಷನ್‌ ಕೊಡುತ್ತಿಲ್ಲ ಎಂದು ಬೆದರಿಸಿದ್ದಾರೆ. ದಲಿತ ಮತ್ತು ಒಕ್ಕಲಿಗ ಸಮುದಾಯಗಳ ನಡುವೆ ವೈಷಮ್ಯ ಉಂಟು ಮಾಡುವ ಮತ್ತು ಘರ್ಷಣೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇದನ್ನು ಚೆಲುವರಾಜು ಆಡಿಯೊ ರೆಕಾರ್ಡ್‌ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.

ಈ ದೂರಿನ ಅನ್ವಯ ಮುನಿರತ್ನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಷೇಧ) ಕಾಯಿದೆ ಸೆಕ್ಷನ್‌ಗಳಾದ 3(1)(r)(s), ಐಪಿಸಿ ಸೆಕ್ಷನ್‌ಗಳಾದ 153(1)(a)(b), 509, 504, 153ರ ಅಡಿ ಬೆಂಗಳೂರಿನ ವೈಯಾಲಿಕಾವಲ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

ಬಿಜೆಪಿ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯಲ್ಲಿ ಬುಧವಾರ ಮಾಜಿ ಸಚಿವ ಮುನಿರತ್ನ ಸೇರಿ ಆರು ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮುನಿರತ್ನ, ಅವರ ಅಂಗರಕ್ಷಕ ವಿಜಯಕುಮಾರ್‌, ಸುಧಾಕರ್‌, ಕಿರಣ್‌ ಕುಮಾರ್‌, ಲೋಹಿತ್‌ ಗೌಡ, ಮಂಜುನಾಥ್‌ ಮತ್ತು ಲೋಕಿ ಎಂಬವರನ್ನು ಆರೋಪಿಗಳನ್ನಾಗಿಸಲಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 354A, 354C, 376, 506, 504, 120(b), 149, 384, 406, 308 ಅಡಿ ಪ್ರಕರಣ ದಾಖಲಿಸಲಾಗಿದೆ. ಜಾಮೀನಿನ ಮೇಲೆ ಮುನಿರತ್ನ ಹೊರಬರುತ್ತಿದ್ದಂತೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.