ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಲಂಚದ ಬೇಡಿಕೆಯೊಡ್ಡಿದ್ದ ಹಾಗೂ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನಗೆ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯವು ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇನ್ನು ಅಸಭ್ಯ ಭಾಷೆ ಬಳಸಿ ಜಾತಿ ನಿಂದನೆ ಮಾಡಿದ್ದಕ್ಕಾಗಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಮುನಿರತ್ನ ಅವರ ಜಾಮೀನು ಆದೇಶವನ್ನು ಕಾಯ್ದಿರಿಸಲಾಗಿದೆ.
ಗುತ್ತಿಗೆದಾರ ಚೆಲುವರಾಜು ಅವರು ನೀಡಿದ ದೂರಿನ ಅನ್ವಯ ವೈಯಾಲಿಕಾವಲ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಹಾಗೂ ಸರ್ಕಾರಿ ನೌಕರನಾಗಿರುವ ಅವರ ಅಂಗರಕ್ಷಕ ವಿಜಯಕುಮಾರ್ ಸಲ್ಲಿಸಿದ್ದ ಅರ್ಜಿಗಳನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಪುರಸ್ಕರಿಸಿದ್ದಾರೆ.
ಮುನಿರತ್ನ ಮತ್ತು ವಸಂತ್ ಕುಮಾರ್ ಅವರು ತಲಾ ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ಒದಗಿಸಬೇಕು. ಅರ್ಜಿದಾರರು ಸಾಕ್ಷ್ಯಗಳ ನಾಪತ್ತೆ ಅಥವಾ ನಾಶ ಮಾಡುವುದಾಗಲಿ ಅಥವಾ ಸಾಕ್ಷಿಗಳಿಗೆ ಬೆದರಿಕೆಯೊಡ್ಡುವುದು, ತಿರುಚುವುದನ್ನಾಗಲಿ ಮಾಡಬಾರದು. ತನಿಖಾ ಸಂಸ್ಥೆ ವಿಚಾರಣೆಗೆ ಸೂಚಿಸಿದಾಗ ಹಾಜರಾಗಬೇಕು. ಪ್ರಕರಣದ ಸಂಬಂಧ ಮೂರು ತಿಂಗಳವರೆಗೆ ಅಥವಾ ಆರೋಪ ಪಟ್ಟಿ ಸಲ್ಲಿಸುವವರೆಗೆ ಅರ್ಜಿದಾರರು ಪ್ರತಿ ತಿಂಗಳ ಎರಡನೇ ಭಾನುವಾರ ಬೆಳಿಗ್ಗೆ 9 ರಿಂದ 5ರವರೆಗೆ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಅರ್ಜಿದಾರರು ಇಂಥದ್ದೇ ಅಪರಾಧದಲ್ಲಿ ಭಾಗಿಯಾಗಬಾರದು ಅಥವಾ ನಿರ್ದಿಷ್ಟ ಪ್ರದೇಶದ ಶಾಂತಿ ಭಂಗಕ್ಕೆ ಹಾನಿಯಾಗುವ ರೀತಿ ನಡೆದುಕೊಳ್ಳಬಾರದು. ನ್ಯಾಯಾಲಯದ ಅನುಮತಿ ಪಡೆಯದೇ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ ಎಂದು ಷರತ್ತುಗಳನ್ನು ವಿಧಿಸಿದೆ.
ಪ್ರಕರಣದ ಹಿನ್ನೆಲೆ: ಗುತ್ತಿಗೆದಾರ ಚೆಲುವರಾಜು ಅವರು “ರಾಜರಾಜೇಶ್ವರಿ ನಗರ ಕ್ಷೇತ್ರದ ವಾರ್ಡ್ ಸಂಖ್ಯೆ 42ರಲ್ಲಿ (ಲಕ್ಷ್ಮಿದೇವಿ ನಗರ) ಗಂಗಾ ಎಂಟರ್‌ಪ್ರೈಸಸ್ ಎಂಬ ಹೆಸರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಮಾಡುತ್ತಿದ್ದು, 2021ರ ಸೆಪ್ಟೆಂಬರ್‌ನಲ್ಲಿ ಮುನಿರತ್ನ ಅಂಗರಕ್ಷಕ ವಿಜಯಕುಮಾರ್ ಅವರು ಕರೆ ಮಾಡಿ ಶಾಸಕರ ಕಚೇರಿಗೆ ಬರುವಂತೆ ಸೂಚಿಸಿದ್ದರು. ಘನತ್ಯಾಜ್ಯ ಸಂಗ್ರಹಣೆ ಕೆಲಸಕ್ಕೆ 10 ಆಟೊ ರಿಕ್ಷಾ ಕೊಡಿಸುತ್ತೇನೆ. ಅದಕ್ಕೆ 20 ಲಕ್ಷ ಕೊಡುವಂತೆ ಮುನಿರತ್ನ ಬೇಡಿಕೆ ಇಟ್ಟಿದ್ದರು. ಸ್ನೇಹಿತರ ಬಳಿ 20 ಲಕ್ಷ ಸಾಲ ಪಡೆದು ಮುನಿರತ್ನ ಅವರಿಗೆ ಅಂಗರಕ್ಷಕನ ಮೂಲಕ ತಲುಪಿಸಿದ್ದೆ. ಎರಡು ದಿನಗಳ ಬಳಿಕ ವಿಚಾರಿಸಲಾಗಿ 10 ಆಟೊ ಹೆಚ್ಚುವರಿ ನೀಡುವುದಾಗಿ ಹೇಳಿ ವಂಚಿಸಿದ್ದಾರೆ” ಎಂದು ದೂರಿದ್ದಾರೆ.
“2023ರ ಸೆಪ್ಟೆಂಬರ್‌ನಲ್ಲಿ ಆಪ್ತ ಸಹಾಯಕ ಅಭಿಷೇಕ್‌ನಿಂದ ಕರೆ ಮಾಡಿಸಿ ಕಚೇರಿಗೆ ಕರೆಯಿಸಿ, 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಲಕ್ಷ ರೂಪಾಯಿಯನ್ನು ಸಾಲ ಪಡೆದು ಹೊಂದಿಸಿಕೊಡುತ್ತೇನೆ ಎಂದು ತಿಳಿಸಿದ್ದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ತಕ್ಷಣ ಹಣ ತಂದುಕೊಂಡುವಂತೆ ಸೂಚಿಸಿದ್ದರು. ಮತ್ತೆ ಕಚೇರಿಗೆ ಕರೆಯಿಸಿದ್ದು, ಹಣ ತಂದಿಲ್ಲ ಎಂದಾಗ ಹಲ್ಲೆ ನಡೆಸಿದ್ದರು” ಎಂದು ಚೆಲುವರಾಜು ಆರೋಪಿಸಿದ್ದಾರೆ.
“ಐದು ವರ್ಷ ನಾನು ಶಾಸಕನಾಗಿರುತ್ತೇನೆ. ಹೇಳಿದಂತೆ ನಡೆಯದಿದ್ದರೆ, ಹಣ ತಂದು ಕೊಡದಿದ್ದರೆ ಬೇರೆಯವರಿಗೆ ಗುತ್ತಿಗೆ ಕೆಲಸ ನೀಡಲಾಗುವುದು” ಎಂದು ಬೆದರಿಕೆ ಹಾಕಿದ್ದರು. ಅದಾದ ಮೇಲೆ ತುರ್ತಾಗಿ ಏಳು ದಿನಗಳ ಅಲ್ಪಾವಧಿಗೆ ಗುತ್ತಿಗೆ ಕರೆದು ಕಾರ್ಯಾದೇಶ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಹಣ ಕೊಡದಿದ್ದಕ್ಕೆ ಅಭಿಷೇಕ್, ವಿಜಯಕುಮಾರ್ ಅವರೂ ಹಲ್ಲೆ ಮಾಡಿದ್ದರು ಎಂದು ಚೆಲುವರಾಜು ದೂರಿದ್ದಾರೆ. ಇದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 504, 506, 420, 323, 385, 37ರ ಅಡಿ ಮುನಿರತ್ನ, ವಿಜಯ್‌ಕುಮಾರ್, ಅಭಿಷೇಕ್ ಮತ್ತು ವಸಂತ್ ಕುಮಾರ್ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಜಿ ಕಾರ್ಪೊರೇಟರ್ ನೀಡಿರುವ ಜಾತಿ ನಿಂದನೆ ದೂರಿನ ಅನ್ವಯ ದಾಖಲಾಗಿರುವ ಪ್ರಕರಣದಲ್ಲಿ ಮುನಿರತ್ನ ಅವರ ಜಾಮೀನು ಅರ್ಜಿ ಆದೇಶವನ್ನು ವಿಶೇಷ ನ್ಯಾಯಾಲಯವು ನಾಳೆಗೆ ಕಾಯ್ದಿರಿಸಿದೆ.
ಮುನಿರತ್ನ ಪರವಾಗಿ ವಾದಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು “ಹಳೆಯ ಘಟನೆಗೆ ಸಂಬಂಧಿಸಿದಂತೆ ನೋಟಿಸ್ ನೀಡದೇ ಮುನಿರತ್ನ ಅವರನ್ನು ಬಂಧಿಸಲಾಗಿದೆ. ಗುಂಪಿನ ಮುಂದೆ ದೂರುದಾರರ ಜಾತಿ ನಿಂದನೆಯಾಗಿಲ್ಲ. ಅಲ್ಲದೇ, ದೂರುದಾರರ ಮುಂದೆಯೂ ಜಾತಿ ನಿಂದನೆ ಮಾಡಲಾಗಿಲ್ಲ. ಸಾರ್ವಜನಿಕರ ಮುಂದೆ ಜಾತಿ ನಿಂದನೆಯಾಗಿಲ್ಲ. ಗುತ್ತಿಗೆದಾರ ಚೆಲುವರಾಜು ಉಪಸ್ಥಿತಿಯಲ್ಲಿ ಜಾತಿ ನಿಂದನೆಯಾಗಿದೆ ಎನ್ನಲಾಗಿದೆ. ಇಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳ ಮುಂದೆ ಜಾತಿ ನಿಂದನೆ ನಡೆದಿಲ್ಲ. ಹೀಗಾಗಿ, ಎಸ್‌ಸಿ/ಎಸ್‌ಟಿ ಕಾಯಿದೆ ಅನ್ವಯಿಸಲ್ಲ. ಅರ್ಜಿದಾರರ ವಿರುದ್ಧವಿರುವ ಸರ್ಕಾರ ಅಧಿಕಾರದಲ್ಲಿದ್ದು, ರಾಜಕೀಯವಾಗಿ ಪ್ರತೀಕಾರದ ಕ್ರಮವಹಿಸಲಾಗಿದೆ” ಎಂದರು.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರದೀಪ್ ಅವರು “ಹಲವು ವರ್ಷಗಳಿಂದ ಈ ರೀತಿಯಲ್ಲಿ ಮುನಿರತ್ನ ಜಾತಿ ನಿಂದನೆ ಮಾಡಿದ್ದಾರೆ. ಹೀಗಾಗಿ, ಎಫ್‌ಐಆರ್‌ನಲ್ಲಿ 2015ರಿಂದ ಜಾತಿ ನಿಂದನೆ ಎಂದು ಉಲ್ಲೇಖಿಸಲಾಗಿದೆ. ಸ್ನೇಹಿತರ ಮುಂದೆಯೂ ಜಾತಿ ನಿಂದನೆ ಮಾಡಿದ್ದಾರೆ. ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಧ್ವನಿ ಮಾದರಿ ಸಂಗ್ರಹಿಸಲಾಗಿದೆ. ಶಾಸಕರ ಕಚೇರಿಯೂ ಸಾರ್ವಜನಿಕ ಸ್ಥಳವಾಗಿರುವುದರಿಂದ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿಲ್ಲ ಎನ್ನಲಾಗದು. ಮುನಿರತ್ನ ಇತಿಹಾಸ ತಿಳಿದವರಿಗೆ ಅವರು ಸಾಕ್ಷ್ಯ ನಾಶ ಮಾಡುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬಾರದು” ಎಂದು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ.
ಪ್ರಕರಣದ ಹಿನ್ನೆಲೆ: ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್ ತಾನು ಆದಿ ದ್ರಾವಿಡ (ಎಸ್ ಸಿ) ಜನಾಂಗಕ್ಕೆ ಸೇರಿದ್ದು, 2015ರಿಂದ 2020ರವರೆಗೆ ಲಕ್ಷ್ಮಿದೇವಿ ನಗರ ವಾರ್ಡ್ ಸಂಖ್ಯೆ 42ರ ಬಿಬಿಎಂಪಿ ಸದಸ್ಯನಾಗಿದ್ದೆ. ಕೆಲ ವಿಚಾರಗಳಲ್ಲಿ ಮುನಿರತ್ನ ಮತ್ತು ತನ್ನ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಸ್ನೇಹಿತರ ಎದುರು ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದರು. ಅಸಭ್ಯ ಪದ ಬಳಕೆಯ ಮೂಲಕ ನಿಂದಿಸಿ, ನಾನು ರಾಜಕೀಯವಾಗಿ ಬೆಳೆಯುವುದಕ್ಕೆ ಬಿಡಬಾರದು ಎಂದು ಹೇಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮುನಿರತ್ನ ಲಂಚ ನೀಡುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಚೆಲುವರಾಜು ಹೇಳಿದ್ದರು. ಲಂಚ ಕೊಡದಂತೆ ನಾನು ಅವರಿಗೆ ತಿಳಿಸಿದ್ದೆ. ತನ್ನ ಕಚೇರಿಗೆ ಕರೆಸಿಕೊಂಡಿದ್ದ ಮುನಿರತ್ನ ಅವರು ಚೆಲುವರಾಜು ಅವರನ್ನು ಜಾತಿ ನಿಂದನೆ ಮಾಡಿದ್ದಲ್ಲದೇ ಮನೆಯವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ವೇಲುನಾಯ್ಕರ್ ಮಾತು ಕೇಳಿ ಕಮಿಷನ್ ಕೊಡುತ್ತಿಲ್ಲ ಎಂದು ಬೆದರಿಸಿದ್ದಾರೆ. ದಲಿತ ಮತ್ತು ಒಕ್ಕಲಿಗ ಸಮುದಾಯಗಳ ನಡುವೆ ವೈಷಮ್ಯ ಉಂಟು ಮಾಡುವ ಮತ್ತು ಘರ್ಷಣೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇದನ್ನು ಚೆಲುವರಾಜು ಆಡಿಯೊ ರೆಕಾರ್ಡ್ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.
ಈ ದೂರಿನ ಅನ್ವಯ ಮುನಿರತ್ನ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಷೇಧ) ಕಾಯಿದೆ ಸೆಕ್ಷನ್‌ಗಳಾದ 3(1)(r)(s), ಐಪಿಸಿ ಸೆಕ್ಷನ್‌ಗಳಾದ 153(1)(a)(b), 509, 504, 153ರ ಅಡಿ ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.