Karnataka Lokayukta 
ಸುದ್ದಿಗಳು

ಲೋಕಾಯುಕ್ತ ಎಡಿಜಿಪಿ, ತನಿಖಾಧಿಕಾರಿಗೆ ನ್ಯಾಯಾಲಯದ ಆದೇಶ ಅನುಪಾಲಿಸುವ ಇರಾದೆ ಇದ್ದಂತಿಲ್ಲ: ವಿಶೇಷ ನ್ಯಾಯಾಲಯ ಅಸಮಾಧಾನ

“ಶೋಕಾಸ್‌ ನೋಟಿಸ್‌ ನೀಡಿ, ಲೋಕಾಯುಕ್ತ ಪೊಲೀಸರಿಂದ ವಿವರಣೆ ಬಯಸಿದರೂ ಅಂತಿಮ ವರದಿ ಸಲ್ಲಿಸಲು ಯಾರಿಂದ ಅನುಮತಿ ಪಡೆಯಬೇಕು ಎಂಬುದಕ್ಕೆ ಉತ್ತರಿಸಿಲ್ಲ. ಹೀಗಾಗಿ, ಎಡಿಜಿಪಿ, ತನಿಖಾಧಿಕಾರಿಗೆ ಕೊನೆಯ ಅವಕಾಶ ನೀಡಲಾಗಿದೆ ಎಂದಿರುವ ನ್ಯಾಯಾಲಯ.

Bar & Bench

ಚಿಕ್ಕಮಗಳೂರಿನ ಶೃಂಗೇರಿಯ ಕಾಂಗ್ರೆಸ್‌ ಮಾಜಿ ಶಾಸಕ ಟಿ ಡಿ ರಾಜೇಗೌಡ ಕುಟುಂಬದ ವಿರುದ್ಧದ ಆದಾಯ ಮೀರಿದ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸಲು ಯಾರ ಅನುಮತಿಗಾಗಿ ಕಾಯಲಾಗುತ್ತಿದೆ ಎಂಬ ನ್ಯಾಯಾಲಯ ಪ್ರಶ್ನೆಗೆ ಉತ್ತರಿಸದ ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ತನಿಖಾಧಿಕಾರಿಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ತೀವ್ರ ಅಸಮಾಧಾನ ದಾಖಲಿಸಿದೆ.

ಚಿಕ್ಕಮಗಳೂರಿನ ಕೊಪ್ಪ ನಿವಾಸಿ ಎಚ್‌ ಕೆ ದಿನೇಶ್‌ ದಾಖಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರು ನಡೆಸಿದರು.

Judge Santosh Gajanan Bhat

ಕಳೆದ ಬಾರಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು “ನಿಮ್ಮ ಮೇಲೆ ಕುಳಿತಿರುವ ಸೂಪರ್‌ ಕಾಪ್‌ (ಪೊಲೀಸ್‌ ಅಧಿಕಾರಿ) ಯಾರು? ಯಾವ ಕಾನೂನಿನ ಅಡಿ ಅಂತಿಮ ವರದಿ ಸಲ್ಲಿಸಲು ಅನುಮತಿಗೆ ಕಾಯುತ್ತಿದ್ದೀರಿ” ಎಂಬುದನ್ನು ವಿವರಿಸಬೇಕು ಎಂದು ನಿರ್ದೇಶಿಸಿತ್ತು. ಇಂದೂ ತನಿಖಾಧಿಕಾರಿ ನಂದಿನಿ ಅವರು ನ್ಯಾಯಾಲಯದ ಪ್ರಶ್ನಿಗೆ ಉತ್ತರಿಸಲಿಲ್ಲ.

ಇದರಿಂದ ನ್ಯಾಯಾಲಯವು “ಶೋಕಾಸ್‌ ನೋಟಿಸ್‌ ಜಾರಿ ಮಾಡಿ, ಲೋಕಾಯುಕ್ತ ಪೊಲೀಸರಿಂದ ವಿವರಣೆ ಬಯಸಿದರೂ ಅಂತಿಮ ವರದಿ ಸಲ್ಲಿಸಲು ಯಾರಿಂದ ಅನುಮತಿ ಪಡೆಯಬೇಕು ಎಂಬುದಕ್ಕೆ ಉತ್ತರಿಸಿಲ್ಲ. ಚಿಕ್ಕಮಗಳೂರಿನ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ತನಿಖಾಧಿಕಾರಿಯೂ ಆದ ಬಿ ಎನ್‌ ನಂದಿನಿ ಮತ್ತು ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೆಶಕರು (ಎಡಿಜಿಪಿ) ನ್ಯಾಯಾಲಯದ ಆದೇಶ ಪಾಲಿಸುವ ಇರಾದೆ ಹೊಂದಿಲ್ಲ ಎಂದೆನಿಸುತ್ತದೆ. ನ್ಯಾಯದಾನದ ದೃಷ್ಟಿಯಿಂದ ಕೊನೆಯ ಅವಕಾಶ ನೀಡಲಾಗಿದೆ” ಎಂದು ಆದೇಶದಲ್ಲಿ ದಾಖಲಿಸಿದ್ದು, ವಿಚಾರಣೆಯನ್ನು ಮೇ 16ಕ್ಕೆ ಮುಂದೂಡಿದೆ.

ಕಾಂಗ್ರೆಸ್‌ ಶಾಸಕ ರಾಜೇಗೌಡ, ಅವರ ಪತ್ನಿ ಡಿ ಕೆ ಪುಷ್ಪಾ ಮತ್ತು ಪುತ್ರ ಟಿ ಆರ್‌ ರಾಜದೇವ್‌ ಅವರು ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ. ಇದನ್ನು ಚುನಾವಣಾ ಅಫಿಡವಿಟ್‌ನಲ್ಲಿ ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ದಿನೇಶ್‌ ಅವರು ಖಾಸಗಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ 2025ರ ಜೂನ್‌ 6ರಂದು ನಿರ್ದೇಶಿಸಿತ್ತು. ಈ ಸಂಬಂಧ ಇದುವರೆಗೂ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿಲ್ಲ.

ಕಳೆದ ಏಪ್ರಿಲ್‌ 21ರ ವಿಚಾರಣೆಯಂದು ತನಿಖಾಧಿಕಾರಿ ನಂದಿನಿ ಅವರು 12 ದಿನದಲ್ಲಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದಿದ್ದರು. ಮೇ 2ರಂದು ಪ್ರಕರಣ ವಿಚಾರಣೆ ಆರಂಭವಾದಾಗ ನಂದಿನಿ ಅವರು ವರದಿಯನ್ನು ಕೇಂದ್ರ ಲೋಕಾಯುಕ್ತ ಕಚೇರಿಗೆ ಕಳುಹಿಸಿದ್ದು, ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ನ್ಯಾಯಾಲಯವು ಯಾವ ಕಾನೂನಿನ ಅಡಿ ಮೇಲಧಿಕಾರಿಯಿಂದ ಅನುಮತಿ ಪಡೆಯಬೇಕು ಎಂಬುದನ್ನು ವಿವರಣೆ ಬಯಸಿದ್ದನ್ನು ಇಲ್ಲಿ ಸ್ಮರಿಸಬಹುದು.