ʼನಿಮ್ಮ ಮೇಲಿರುವ ಸೂಪರ್‌ ಕಾಪ್‌ ಯಾರು?ʼ: ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ವಿಶೇಷ ನ್ಯಾಯಾಲಯ ತರಾಟೆ

“ನಿಮ್ಮ ತನಿಖೆಯ ಮೇಲೆ ನಿಮಗೆ ನಿಯಂತ್ರಣ ಇಲ್ಲವೇ?” ಎಂದು ಲೋಕಾಯುಕ್ತ ಹಾಸನ-ಚಿಕ್ಕಮಗಳೂರು ಪೊಲೀಸ್‌ ವರಿಷ್ಠಾಧಿಕಾರಿ ಬಿ ಎನ್‌ ನಂದಿನಿ ಅವರ ವಿರುದ್ಧ ಹರಿಹಾಯ್ದ ನ್ಯಾಯಾಲಯ.
Karnataka Lokayukta
Karnataka Lokayukta
Published on

“ನಿಮ್ಮ ಮೇಲೆ ಕುಳಿತಿರುವ ಸೂಪರ್‌ ಕಾಪ್‌ (ಪೊಲೀಸ್‌ ಅಧಿಕಾರಿ) ಯಾರು? ಯಾವ ಕಾನೂನಿನ ಅಡಿ ಅಂತಿಮ ವರದಿ ಸಲ್ಲಿಸಲು ಅನುಮತಿಗೆ ಕಾಯುತ್ತಿದ್ದೀರಿ” ಎಂದು ಲೋಕಾಯುಕ್ತ ಹಾಸನ-ಚಿಕ್ಕಮಗಳೂರು ಪೊಲೀಷ್‌ ವರಿಷ್ಠಾಧಿಕಾರಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿತು.

ಚಿಕ್ಕಮಗಳೂರಿನ ಶೃಂಗೇರಿಯ ಕಾಂಗ್ರೆಸ್‌ ಶಾಸಕ ಟಿ ಡಿ ರಾಜೇಗೌಡ, ಅವರ ಪತ್ನಿ ಮತ್ತು ಪುತ್ರನ ವಿರುದ್ಧದ ಆದಾಯ ಮೀರಿದ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯು ಮುಗಿದಿದ್ದು, ಮೇಲಧಿಕಾರಿಗಳ ಅನುಮತಿಗೆ ಕೇಂದ್ರೀಯ ಲೋಕಾಯುಕ್ತ ಕಚೇರಿಗೆ ವರದಿ ಕಳುಹಿಸಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಬಿ ಎನ್‌ ನಂದಿನಿ ಅವರು ನ್ಯಾಯಾಧೀಶರಾದ ಸಂತೋಷ್‌ ಗಜಾನನ್‌ ಭಟ್‌ ಅವರ ಪೀಠಕ್ಕೆ ತಿಳಿಸಿದರು.

ಇದರಿಂದ ಕೆರಳಿದ ಪೀಠವು “ತನಿಖಾ ವರದಿಯನ್ನು ಬೇರೊಬ್ಬರಿಗೆ ಕಳುಹಿಸಿದ್ದೇಕೆ? ಅದಕ್ಕೆ ಸಿಆರ್‌ಪಿಸಿಯಲ್ಲಿ ಅವಕಾಶ ಎಲ್ಲಿದೆ? ಯಾವ ಸೆಕ್ಷನ್‌ ಅಡಿ ಅವರಿಗೆ ಸಲ್ಲಿಸಿದ್ದೀರಿ. ಮೇಲಧಿಕಾರಿ ಒಪ್ಪಿಗೆ ನೀಡಿದ ಬಳಿಕ ನ್ಯಾಯಾಲಯಕ್ಕೆ ಸಲ್ಲಿಸುತ್ತೀರಾ? ಇದು ನಿಮ್ಮ ವಾದವೇ? ನಿಮ್ಮ ತನಿಖೆಯ ಮೇಲೆ ನಿಮಗೆ ನಿಯಂತ್ರಣ ಇಲ್ಲವೇ? ತನಿಖಾಧಿಕಾರಿಯಾಗಿ, ನೀವು ತನಿಖೆ ಪೂರ್ಣಗೊಳಿಸಿ, ವರದಿ ಸಿದ್ಧಪಡಿಸಿದ್ದೀರಿ. ಇಲ್ಲಿ ನಿಮ್ಮ ಸೂಪರ್‌ ತನಿಖಾಧಿಕಾರಿ ಯಾರು? ಇದು ಹೇಗೆ? ನೀವು ತನಿಖೆ ಪೂರ್ಣಗೊಳಿಸಿರುವಾಗ ಅದು ಏನೆಂದು ನೀವು ಹೇಳಬೇಕು. ಸಿಆರ್‌ಪಿಸಿಯ ಯಾವ ಸೆಕ್ಷನ್‌ ಅಡಿ ಮೇಲಧಿಕಾರಿ ತನಿಖಾ ವರದಿಗೆ ಒಪ್ಪಿಗೆ ನೀಡುತ್ತಾರೆ ತೋರಿಸಿ. ಸಿಆರ್‌ಪಿಸಿ, ಬಿಎನ್‌ಎಸ್‌ಎಸ್‌ ಮೀರಿ ಹೋಗಲಾಗದು. ಸಿಆರ್‌ಪಿಸಿ ಸೆಕ್ಷನ್‌ 173 ಅಡಿ ತನಿಖೆ ಮುಗಿದ ಮೇಲೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯ ಹೇಳಿತು.

ತನಿಖೆಗೆ ಸಂಬಂಧಿಸಿದ ಸ್ಥಿತಿಗತಿ ವರದಿಯಲ್ಲಿ ತನಿಖೆ ಮುಗಿದಿದ್ದು, ಲೋಕಾಯುಕ್ತ ಕೇಂದ್ರ ಕಚೇರಿಗೆ ಅನುಮತಿಗಾಗಿ ಕಳುಹಿಸಲಾಗಿದೆ ಎಂದು ತಿಳಿಸಲಾಗಿದೆ. ತನಿಖಾ ಸಂಸ್ಥೆಗಳು ತಮ್ಮದೇ ಆದ ಪ್ರಕ್ರಿಯೆ ಸಂಹಿತಾ ಪಾಲಿಸುತ್ತವೆ ಎಂಬುದನ್ನು ದಾಖಲಿಸುವುದು ದುರದೃಷ್ಟಕರವಾಗಿದೆ. ಹಾಲಿ ಪೊಲೀಷ್‌ ವರಿಷ್ಠಾಧಿಕಾರಿ ತನಿಖಾಧಿಕಾರಿಯಾಗಿದ್ದು, ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಮೇಲಧಿಕಾರಿಗಳ ಯಾವ ಸೆಕ್ಷನ್‌ ಅಡಿ ಅನುಮತಿಬೇಕಾಗಿದೆ ಎಂಬುದನ್ನು ತಿಳಿಸಬೇಕು. ಈ ಕುರಿತು ಮುಂದಿನ ವಿಚಾರಣೆಯ ವೇಳೆಗೆ ತನಿಖಾಧಿಕಾರಿ ವಿವರಿಸಬೇಕು” ಎಂದು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಮೇ 7, 2026ಕ್ಕೆ ಮುಂದೂಡಿದೆ.

ಕಾಂಗ್ರೆಸ್‌ ಶಾಸಕ ರಾಜೇಗೌಡ, ಅವರ ಪತ್ನಿ ಡಿ ಕೆ ಪುಷ್ಪಾ ಮತ್ತು ಪುತ್ರ ಟಿ ಆರ್‌ ರಾಜದೇವ್‌ ಅವರು ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆ. ಇದನ್ನು ಚುನಾವಣಾ ಅಫಿಡವಿಟ್‌ನಲ್ಲಿ ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಚಿಕ್ಕಮಗಳೂರಿನ ಕೊಪ್ಪ ನಿವಾಸಿ ಎಚ್‌ ಕೆ ದಿನೇಶ್‌ ಅವರು ಖಾಸಗಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ 2025ರ ಜೂನ್‌ 6ರಂದು ನಿರ್ದೇಶಿಸಿತ್ತು.

ಕಳೆದ ಏಪ್ರಿಲ್‌ 21ರ ವಿಚಾರಣೆಯಂದು ತನಿಖಾಧಿಕಾರಿ ನಂದಿನಿ ಅವರು 12ದಲ್ಲಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದಿದ್ದರು. ಇಂದು ಪ್ರಕರಣ ವಿಚಾರಣೆ ಆರಂಭವಾದಾಗ ನಂದಿನಿ ಅವರು ಕೇಂದ್ರ ಲೋಕಾಯುಕ್ತ ಕಚೇರಿಗೆ ಕಳುಹಿಸಿದ್ದು, ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಕ್ಕೆ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು.

Kannada Bar & Bench
kannada.barandbench.com