Congress Leader Vinay Kulkarni and Bengaluru City Civil Court 
ಸುದ್ದಿಗಳು

ಯೋಗೀಶ್‌ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ

2025ರ ಜೂ.7ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಯುತ್ತಿರುವಾಗ ವಿನಯ್‌ ಕುಲಕರ್ಣಿ ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಹೇಳಿ, ಜಾಮೀನು ರದ್ದುಗೊಳಿಸಿತ್ತು.

Bar & Bench

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದ 15ನೇ ಆರೋಪಿಯಾದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ನಿರಾಕರಿಸಿದೆ. ಆದರೆ, 16ನೇ ಆರೋಪಿ ಚಂದ್ರಶೇಖರ್‌ ಇಂಡಿ ಅಲಿಯಾಸ್‌ ಚಂದು ಮಾಮ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಮಾಜಿ ಸಚಿವ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಇಂದು ಪ್ರಕಟಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಪ್ರಕರಣದ ಹಿನ್ನೆಲೆ: ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್‌ 15ರಂದು ಯೋಗೀಶ್‌ಗೌಡ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಪ್ರಕರಣದ ಪ್ರಮುಖ ಆರೋಪಿ ವಿನಯ ಕುಲಕರ್ಣಿ ಅವರು 2025ರ ಜೂನ್‌ 13ರಿಂದ ನ್ಯಾಯಾಂಗ ಬಂಧನದಲ್ಲಿದ್ದು ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ.

2025ರ ಜೂನ್‌ 7ರಂದು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಯುತ್ತಿರುವಾಗ ವಿನಯ್‌ ಕುಲಕರ್ಣಿ ಅವರು ಸಾಕ್ಷಿಗಳನ್ನು ಸಂಪರ್ಕಿಸಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಹೇಳಿ, ಜಾಮೀನು ರದ್ದುಗೊಳಿಸಿತ್ತು. 2021ರ ಆಗಸ್ಟ್‌ 11ರಂದು ಸುಪ್ರೀಂ ಕೋರ್ಟ್‌ ವಿನಯ್‌ ಕುಲಕರ್ಣಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. 2020ರ ನವೆಂಬರ್‌ 5ರಂದು ವಿನಯ್‌ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು.