KAT Chairman Justice (Rtd) R B Budihal 
ಸುದ್ದಿಗಳು

ಜೈಲಿನಲ್ಲಿ ದರ್ಶನ್‌ಗೆ ಆತಿಥ್ಯ: ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಅಮಾನತು ಆದೇಶ ಎತ್ತಿ ಹಿಡಿದ ಕೆಎಟಿ

ಜೈಲಿನಲ್ಲಿ ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳಸೀನ, ಸಹ ಆರೋಪಿ ನಾಗರಾಜು ಜೊತೆ ದರ್ಶನ್‌ ಹರಟೆ ಹೊಡೆಯುತ್ತಿರುವ ಪೋಟೊ ಆ.25ರಂದು ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಪ್ರಕರಣದ ಸಂಬಂಧ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಅಮಾನತು ಮಾಡಲಾಗಿತ್ತು.

Bar & Bench

ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸಿದ ಆರೋಪದ ಮೇಲೆ ಜೈಲು ಅಧೀಕ್ಷಕ ಹುದ್ದೆಯಿಂದ ಮಲ್ಲಿಕಾರ್ಜುನ ಬಿ. ಸ್ವಾಮಿ ಅಮಾನತುಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ಎತ್ತಿಹಿಡಿದಿದೆ.

ಸರ್ಕಾರದ ಆದೇಶ ರದ್ದುಕೋರಿ ಮಲ್ಲಿಕಾರ್ಜುನ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಆರ್‌ ಬಿ ಬೂದಿಹಾಳ್‌ ಮತ್ತು ಆಡಳಿತಾತ್ಮಕ ಸದಸ್ಯ ರಾಘವೇಂದ್ರ ಔರಾದ್ಕರ್‌ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ.

ಸರ್ಕಾರದ ಪರ ವಾದಿಸಿದ್ದ ಅಪರ ಸರ್ಕಾರಿ ವಕೀಲ ಜಿ ರಮೇಶ್‌ ನಾಯ್ಕ್‌ ಅವರು, ನಟ ದರ್ಶನ್‌ಗೆ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ನೀಡಿದ ಆರೋಪದ ಮೇಲೆ ಅರ್ಜಿದಾರರನ್ನು ಸೇವೆಯಿಂದ ಅಮಾನತುಪಡಿಸಲಾಗಿದೆ. ದರ್ಶನ್‌ ಅವರ ಸೆಲ್‌ಗೆ ಉನ್ನತ ಭದ್ರತೆ ಕಲ್ಪಿಸಲಾಗಿತ್ತು. ಅದರ ಮೇಲುಸ್ತುವಾರಿಯನ್ನು ಅರ್ಜಿದಾರರಿಗೆ ನೀಡಲಾಗಿತ್ತು. ಆದರೆ, ದರ್ಶನ್‌ಗೆ ಇತರೆ ಕೈದಿಗಳೊಂದಿಗೆ ಕಾರಾಗೃಹ ಆವರಣದಲ್ಲಿ ಕೂತು ಕಾಫಿ ಕುಡಿಯುತ್ತಾ ಸಿಗರೇಟ್‌ ಸೇದುತ್ತಿದ್ದ ಚಿತ್ರಗಳು ಮಾಧ್ಯಮದಲ್ಲಿ ಪ್ರಸಾರವಾಗಿದ್ದವು. ಈ ಕುರಿತು ರಾಜ್ಯ ಕಾರಾಗೃಹಗಳ ಮಹಾ ನಿರ್ದೇಶಕರು ಪ್ರಾಥಮಿಕ ತನಿಖೆಗೆ ನಡೆಸಿದ್ದರು ಎಂದು ಪೀಠದ ಗಮನಕ್ಕೆ ತಂದಿದ್ದರು.

ಅಲ್ಲದೇ, ಕಾರಾಗೃಹದಲ್ಲಿ ದರ್ಶನ್‌ಗೆ ವಿವಿಧ ಸೌಲಭ್ಯ ಕಲ್ಪಿಸಿರುವುದು ಸಾಬೀತಾಗಿದೆ. ಇದರಿಂದ ಕರ್ನಾಟಕ ಕಾರಾಗೃಹ ಸುಧಾರಣಾ ಕೈಪಿಡಿ-2021ರ ಅಧ್ಯಾಯ- 4 ಖಂಡಿಕೆ 11ರಲ್ಲಿ ನೀಡಲಾಗಿರುವ ಜೈಲು ಅಧಿಕಾರಿಗಳಿಗೆ ನೀಡಲಾಗಿದ್ದ ಕರ್ತವ್ಯಗಳನ್ನು ಅರ್ಜಿದಾರರು ಉಲ್ಲಂಘಿಸಿರುವುದು ಪ್ರಾಥಮಿಕ ತನಿಖಾ ವರದಿಯಲ್ಲಿ ಬಯಲಾಗಿತ್ತು. ಅರ್ಜಿದಾರರು ಜೈಲಿನ ಮೇಲುಸ್ತುವಾರಿ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ಹಾಗಾಗಿ ದುರ್ನಡತೆ ಮತ್ತು ಕರ್ತವ್ಯ ಲೋಪ ಆರೋಪದ ಮೇಲೆ ಅರ್ಜಿದಾರರು ಸೇರಿದಂತೆ ಜೈಲಿನ 9 ಅಧಿಕಾರಿಗಳನ್ನು ಅಮಾನತುಪಡಿಸಲಾಗಿತ್ತು. ಹಾಗಾಗಿ, ಸರ್ಕಾರದ ಆದೇಶ ಸೂಕ್ತವಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಈ ವಾದ ಪುರಸ್ಕರಿಸಿದ ಪೀಠವು ಪ್ರಕರಣದ ದಾಖಲೆ ಪರಿಶೀಲಿಸಿದರೆ ಸರ್ಕಾರ ಆದೇಶ ಸೂಕ್ತವಾಗಿದೆ ಎನ್ನುವುದು ಕಂಡುಬರುತ್ತಿದೆ. ಇದರಿಂದ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ನುಡಿದಿದೆ.

ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ 2024ರ ಜೂನ್‌ನಲ್ಲಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪಾಲಾಗಿದ್ದರು. ಕಾರಾಗೃಹ ಆವರಣದಲ್ಲಿ ದರ್ಶನ್‌ ಒಂದು ಕೈಯಲ್ಲಿ ಸಿಗರೇಟ್‌ ಹಿಡಿದು, ಮತ್ತೊಂದು ಕೈಯಲ್ಲಿ ಚಹಾ ಕಪ್‌ ಹಿಡಿದುಕೊಂಡು, ಚೇರ್‌ ಮೇಲೆ ಆರಾಮಾಗಿ ಕುಳಿತು ಕುಖ್ಯಾತ ರೌಡಿ ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳಸೀನ ಹಾಗೂ ಸಹ ಆರೋಪಿಯಾದ ಆಪ್ತ ನಾಗರಾಜ್‌ ಜೊತೆಗೆ ಹರಟೆ ಹೊಡೆಯುತ್ತಿರುವ ಪೋಟೋ 2024ರ ಆಗಸ್ಟ್‌ 25ರಂದು ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಕಾರಾಗೃಹ ಇಲಾಖೆ ಮಹಾನಿರ್ದೇಶಕರು ಘಟನೆ ಆಂತರಿಕ ತನಿಖೆಗೆ ಆದೇಶಿಸಿದ್ದರು.

ಕಾರಾಗೃಹ ಇಲಾಖೆ ಹೆಚ್ಚುವರಿ ಮಹಾ ನಿರ್ದೇಶಕರ ನೇತೃತ್ವದ ತಂಡವು ಕಾರಾಗೃಹಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ಪ್ರಾಥಮಿಕ  ತನಿಖೆಯಲ್ಲಿ ದರ್ಶನ್‌ಗೆ ವಿಶೇಷ ಸೌಲಭ್ಯ ಕಲ್ಪಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅರ್ಜಿದಾರರಾಗಿರುವ ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಬಿ. ಸ್ವಾಮಿ ಸೇರಿ 9 ಮಂದಿಯನ್ನು ಸೇವೆಯಿಂದ ಅಮಾತುಗೊಳಿಸಿ ಸರ್ಕಾರ ಆಗಸ್ಟ್‌ 26ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಲ್ಲಿಕಾರ್ಜುನ ಸ್ವಾಮಿ ಕೆಎಟಿ ಮೆಟ್ಟಿಲೇರಿದ್ದರು.