ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ, ಆರ್ ನಾಗರಾಜು, ಎಂ ಲಕ್ಷ್ಮಣ್‌ಗೆ ಬೆಂಗಳೂರಿನ ಸತ್ರ ನ್ಯಾಯಾಲಯವು ಸೋಮವಾರ ಜಾಮೀನು ನಿರಾಕರಿಸಿದೆ. ಆದರೆ, ಇತರೆ ಆರೋಪಿಗಳಾದ ರವಿಶಂಕರ್ ಮತ್ತು ದೀಪಕ್ ಕುಮಾರ್ ಅಲಿಯಾಸ್ ದೀಪಕ್‌ಗೆ ಜಾಮೀನು ಮಂಜೂರು ಮಾಡಿದೆ.
ನಟ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜು, ರವಿಶಂಕರ್ ಮತ್ತು ದೀಪಕ್ ಕುಮಾರ್ ಅವರ ಕಾಯ್ದಿರಿಸಿದ್ದ ಜಾಮೀನು ಅರ್ಜಿಗಳ ಆದೇಶವನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಜೈಶಂಕರ್ ಅವರು ಇಂದು ಪ್ರಕಟಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಮತ್ತು ಮೊದಲನೇ ಆರೋಪಿಯಾಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ, ದರ್ಶನ್ ಮ್ಯಾನೇಜರ್ ಆಗಿದ್ದ 11ನೇ ಆರೋಪಿ ಆರ್ ನಾಗರಾಜು ಹಾಗೂ 12ನೇ ಆರೋಪಿ ಎಂ ಲಕ್ಷ್ಮಣ್ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಎಂಟನೇ ಆರೋಪಿ ರವಿಶಂಕರ್ ಅಲಿಯಾಸ್ ರವಿ, 13ನೇ ಆರೋಪಿ ದೀಪಕ್ ಕುಮಾರ್ ಅಲಿಯಾಸ್ ದೀಪಕ್‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ ಮತ್ತು ನಿಖಿಲ್ ನಾಯಕ್‌ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಇದರೊಂದಿಗೆ 17 ಆರೋಪಿಗಳ ಪೈಕಿ ಐವರಿಗೆ ಜಾಮೀನು ಮಂಜೂರಾಗಿದೆ.
ದರ್ಶನ್ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ದೇಶಾದ್ಯಂತ ದರ್ಶನ್ ಅಭಿಮಾನಿಗಳನ್ನು ಹೊಂದಿದ್ದಾರೆ. ದರ್ಶನ್‌ರಿಂದಾಗಿ 500 ಕುಟುಂಬಗಳು ಊಟ ಮಾಡುತ್ತಿವೆ. ದರ್ಶನ್ ಜೈಲಿನಲ್ಲಿ ಮುಂದುವರಿದರೆ ಆ ಕುಟುಂಬಗಳಿಗೆ ಹೊಡೆತ ಬೀಳುತ್ತದೆ” ಎಂಬುದು ಸೇರಿದಂತೆ ಸುದೀರ್ಘ ವಾದಿಸಿದ್ದರು.
ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ಐದು ನೂರು ಕುಟುಂಬಗಳು ದರ್ಶನ್ ಅವರು ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡಿರುವುದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ವಾದಿಸಲಾಗಿದೆ. ಆದರೆ, ಸಹರಾ ಸಮೂಹದ ಅಧ್ಯಕ್ಷ ಸುಬ್ರತೋ ರಾಯ್ ಪ್ರಕರಣದಲ್ಲಿ ಅವರು 20 ಸಾವಿರ ಮಂದಿಗೆ ಉದ್ಯೋಗಿ ಕಲ್ಪಿಸಿದ್ದರೂ ಜಾಮೀನು ಮಂಜೂರು ಮಾಡಿರಲಿಲ್ಲ ಎಂಬುದನ್ನು ಗಮದಲ್ಲಿಟ್ಟುಕೊಳ್ಳಬೇಕು. ಆರೋಪಿಗಳ ನಡುವಿನ ಸಂಭಾಷಣೆಯ ಕರೆ ದಾಖಲೆ 10 ಸಾವಿರ ಪುಟಗಳಷ್ಟಿದೆ. ಅದರ ಸಾಫ್ಟ್ ಕಾಪಿ ಕೂಡ ಇದೆ. ಮೊದಲಿಗೆ ಸಾಕ್ಷಿ ಹೇಳಿಕೆ ನೀಡಿ ನ್ಯಾಯಾಲಯದಲ್ಲಿ ಉಲ್ಟಾ ಆಗುತ್ತಿದ್ದರು. ಈಗ ಲೊಕೇಷನ್ ಇರುವುದರಿಂದ ಹಾಗೆ ಮಾಡಲು ಸಾಧ್ಯವಿಲ್ಲ. ರೇಣುಕಾಸ್ವಾಮಿ ಕೊಲೆಯ ಮೂಲಕ ದರ್ಶನ್ ಮತ್ತು ತಂಡ ಪರ್ಯಾಯ ಸರ್ಕಾರದ ರೀತಿ ವರ್ತಿಸಿದ್ದಾರೆ. ಹೀಗಾಗಿ, ಜಾಮೀನು ಮಂಜೂರು ಮಾಡಬಾರದು” ಎಂದು ಆಕ್ಷೇಪಿಸಿದ್ದರು.
ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪವಿತ್ರ ಗೌಡ, ದರ್ಶನ್ ಅಲಿಯಾಸ್ ಡಿ ಬಾಸ್, ಪುಟ್ಟಸ್ವಾಮಿ ಅಲಿಯಾಸ್ ಪವನ್, ರಾಘವೇಂದ್ರ, ನಂದೀಶ್, ಜಗದೀಶ್ ಅಲಿಯಾಸ್ ಜಗ್ಗ, ಅನುಕುಮಾರ್, ರವಿ ಶಂಕರ್ ಅಲಿಯಾಸ್ ರವಿ, ಧನರಾಜ್ ಡಿ ಅಲಿಯಾಸ್ ರಾಜು, ವಿನಯ್ ವಿ, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೂಷ್, ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಆರೋಪಿಗಳಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯ ನಾಶ), 120 (ಬಿ) (ಕ್ರಿಮಿನಲ್ ಪಿತೂರಿ), 364 (ಅಪಹರಣ), 355 (ಕ್ರಿಮಿನಲ್ ಉದ್ದೇಶದಿಂದ), 384 (ಸುಲಿಗೆ), 143 (ಅಕ್ರಮ ಕೂಟ), 147 (ದೊಂಬಿ), 148 (ಮಾರಕಾಸ್ಟ್ರ ಬಳಕೆ) ಜೊತೆಗೆ 149 (ಏಕೈಕ ಉದ್ದೇಶದಿಂದ ಎಲ್ಲರೂ ಒಟ್ಟುಗೂಡಿ ಕೃತ್ಯ ಎಸಗಿರುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು.