ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಲು ಮತ್ತೊಂದು ವಿಶೇಷ ನ್ಯಾಯಾಲಯ ಸ್ಥಾಪಿಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಹೈಕೋರ್ಟ್‌ನ ಆಡಳಿತ ವಿಭಾಗಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ಇಂಥ ಕೋರಿಕೆಗಳಿಗೆ ರಾಜ್ಯ ಸರ್ಕಾರವು ತಕ್ಷಣ ಪ್ರತಿಕ್ರಿಯಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ಎಸ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.
“ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ನಡೆಸಲು ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಥವಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರನ್ನು ನೇಮಿಸುವ ಸಂಬಂಧ ಹೈಕೋರ್ಟ್‌ನ ಆಡಳಿತ ವಿಭಾಗವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು… ಅಂಥ ಪ್ರಸ್ತಾವ ಕಳುಹಿಸಿದಾಗ ತಕ್ಷಣ ರಾಜ್ಯ ಸರ್ಕಾರ ಅದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು” ಎಂದು ನ್ಯಾಯಾಲಯವು ಆದೇಶ ಹೊರಡಿಸಿದೆ.
ಶಾಸನ ರೂಪಿಸುವವರ ವಿರುದ್ಧದ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವ ಸಂಬಂಧ ಕಾರ್ಯಯೋಜನೆ ರೂಪಿಸುವಂತೆ ಸುಪ್ರೀಂ ಕೋರ್ಟ್ ದೇಶದ ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಅರ್ಜಿ ದಾಖಲಿಸಿಕೊಳ್ಳಲು ನಿರ್ದೇಶಿಸಿತ್ತು. “ಇನ್ನೊಂದು ನ್ಯಾಯಾಲಯವನ್ನು ಸ್ಥಾಪಿಸಿದರೆ ಪ್ರಕರಣಗಳ ಕುರಿತಾದ ವಿಚಾರಣೆ ಇತ್ಯಾದಿಯನ್ನು ತುರ್ತಾಗಿ ಪರಿಹರಿಸಬಹುದು” ಎಂದು ಶುಕ್ರವಾರ ನ್ಯಾಯಾಲಯ ಹೇಳಿದೆ.
ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳನ್ನು ನಡೆಸಲು ಅರ್ಹವಾದ ಅಭ್ಯರ್ಥಿಗಳನ್ನು ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸುವ ಸಂಬಂಧ ಸಮಿತಿಯನ್ನು ಪುನರ್ ರಚಿಸಲಾಗಿದೆ. ರಾಜ್ಯದ ಸರ್ಕಾರಿ ಅಭಿಯೋಜಕರನ್ನು ಸಮಿತಿಯಲ್ಲಿ ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸುವಂತೆ ನ್ಯಾಯಾಲಯ ಸಲಹೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ನಾವದಗಿ ಅವರು ತನ್ನನ್ನು ಸದಸ್ಯನನ್ನಾಗಿ ಮಾಡುವುದು ಸರಿಯಲ್ಲ. ಬದಲಿಗೆ ರಾಜ್ಯದ ಸರ್ಕಾರಿ ಅಭಿಯೋಜಕರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸುವುದು ಸೂಕ್ತ ಎಂದು ಸಲಹೆ ನೀಡಿದ್ದರು.