ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ವಿವಾಹ ಸರಿಪಡಿಸಲಾಗದಷ್ಟು ಮುರಿದುಬಿದ್ದಿದೆ ಎಂದು ನ್ಯಾಯಾಲಯಗಳು ಭಾವಿಸಿ ವಿಚ್ಛೇದನ ನೀಡಬಾರದು. ವಿವಾಹ ಮುರಿದುಬೀಳಲು ಯಾರು ಕಾರಣ ಎಂಬುದನ್ನು ಅವು ಮೊದಲು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಈಚೆಗೆ ಹೇಳಿದೆ.
ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ವಿವಾಹ ಸರಿಪಡಿಸಲಾಗದಷ್ಟು ಮುರಿದುಬಿದ್ದಿದೆ ಎಂಬ ತೀರ್ಮಾನಕ್ಕೆ ನ್ಯಾಯಾಲಯಗಳು ಬರುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ನವೆಂಬರ್ 14ರಂದು ನೀಡಿದ ಆದೇಶದಲ್ಲಿ ಅಂದಿನ ನ್ಯಾಯಮೂರ್ತಿ (ಈಗ ಮುಖ್ಯ ನ್ಯಾಯಮೂರ್ತಿ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿದೆ.ರ
ವಿವಾಹ ಸರಿಪಡಿಸಲಾಗದಷ್ಟು ಮುರದಿದೆ ಎಂದು ತೀರ್ಮಾನಿಸುವ ಮೊದಲು ನ್ಯಾಯಾಲಯಗಳು ಒಬ್ಬ ಸಂಗಾತಿಯನ್ನು ಮತ್ತೊಬ್ಬರು ಉದ್ದೇಶಪೂರ್ವಕವಾಗಿ ತೊರೆದಿದ್ದಾರೆಯೇ ಅಥವಾ ಕೈ ಮೀರಿದ ಸಂದರ್ಭ ಅವರನ್ನು ಪ್ರತ್ಯೇಕವಾಗಿ ಒತ್ತಾಯಿಸುವಂತೆ ಮಾಡಿದೆಯೇ ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ಪೀಠ ಹೇಳಿದೆ.
"ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳು, ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿರುವುದರಿಂದ, ಮದುವೆ ಸರಿಪಡಿಸಲಾಗದಷ್ಟು ಹದಗೆಟ್ಟಿದೆ ಎಂದು ಭಾವಿಸಬೇಕು ಎಂಬ ತೀರ್ಪು ನೀಡುತ್ತಿವೆ. ಆದರೆ ಇಂತಹ ತೀರ್ಮಾನಕ್ಕೆ ಬರಲು ಮುನ್ನ, ಫ್ಯಾಮಿಲಿ ಕೋರ್ಟ್ ಅಥವಾ ಹೈಕೋರ್ಟ್‌ಗಳು ಇಬ್ಬರಲ್ಲಿ ಯಾರು ವೈವಾಹಿಕ ಬಾಂಧವ್ಯ ಮುರಿಯಲು ಕಾರಣರಾದರು ಮತ್ತು ಯಾರು ಮತ್ತೊಬ್ಬರನ್ನು ಪ್ರತ್ಯೇಕವಾಗಿ ವಾಸಿಸಲು ಒತ್ತಾಯಿಸಿದರು ಎಂಬುದನ್ನು ಕಟ್ಟುನಿಟ್ಟಾಗಿ ನಿರ್ಧರಿಸುವುದು ಅತ್ಯಾವಶ್ಯಕ” ಎಂದು ಅದು ಹೇಳಿದೆ.
ಉದ್ದೇಶಪೂರ್ವಕವಾಗಿ ತೊರೆದುಹೋದ ಅಥವಾ ಸಹಬಾಳ್ವೆ ನಡೆಸಲು ನಿರಾಕರಿಸಿದ ಬಗ್ಗೆ ಬಲವಾದ ಪುರಾವೆಗಳಿಲ್ಲದಿದ್ದರೆ, ವಿಚ್ಛೇದನ ನೀಡಲು ವಿವಾಹವು "ಸರಿಪಡಿಸಲಾರದಷ್ಟು ಮುರಿದುಹೋಗಿದೆ" ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ.
ಇಂತಹ ಪ್ರಕರಣಗಳಲ್ಲಿ ದಂಪತಿಗೆ ಮಗುವೂ ಇದ್ದಾಗ ನಾಯಾಲಯಗಳು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಕ್ರೌರ್ಯದ ಆಧಾರದ ಮೇಲೆ ವ್ಯಕ್ತಿಯೊಬ್ಬ 2010ರಲ್ಲಿ ವಿಚ್ಛೇದನ ಮೊಕದ್ದಮೆ ಹೂಡಿದ್ದ. ನಂತರ ಅರ್ಜಿ ಹಿಂಪಡೆದಿದ್ದ ಆತ 2013ರಲ್ಲಿ ಮತ್ತೆ ಮನವಿ ಸಲ್ಲಿಸಿ ಹೆಂಡತಿ ತನ್ನನ್ನು ತೊರೆದಿದ್ದಾಳೆ ಎಂದು ದೂರಿದ್ದ. ಆದರೆ ಗಂಡನ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಹೇಳಿ ವಿಚ್ಛೇದನ ಅರ್ಜಿಯನ್ನು 2018ರಲ್ಲಿ ವಿಚಾರಣಾ ನ್ಯಾಯಾಲಯ ತಳ್ಳಿ ಹಾಕಿತ್ತು.
ಆದರೆ 2019ರಲ್ಲಿ ಈ ಆದೇಶ ಬದಿಗೆ ಸರಿಸಿದ ಉತ್ತರಾಖಂಡ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ವಾದ ಆಲಿಸಿದ ಸುಪ್ರೀಂ ಕೋರ್ಟ್ ಕ್ರೌರ್ಯ ಎನ್ನುವ ಗಂಡನ ವಾದಕ್ಕಿರುವ ನಿಜವಾದ ಆಧಾರ ಪರಿಶೀಲಿಸದೆ ಹೈಕೋರ್ಟ್ ವಿವಾಹ ರದ್ದುಪಡಿಸಿದೆ. ಅದು ಗಂಡನ ವಾದಗಳನ್ನಷ್ಟೇ ನಂಬಿದೆ. ಅತಿಮುಖ್ಯವಾದ ಕಾನೂನು ಪ್ರಶ್ನೆಗಳನ್ನು ಅದು ಕಡೆಗಣಿಸಿದೆ ಎಂದಿತು.
ಅಂತೆಯೇ ವಿವಾಹ ಸಂಬಂಧಿತ ಪ್ರಕರಣಗಳಲ್ಲಿ ನ್ಯಾಯಾಲಯಗಳು ಎಲ್ಲಾ ದಾಖಲೆಗಳನ್ನು, ಸಾಮಾಜಿಕ ಹಿನ್ನೆಲೆಯನ್ನು, ಕುಟುಂಬ ಪರಿಸ್ಥಿತಿಯನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುವ ಬಾಧ್ಯತೆ ಹೊಂದಿವೆ ಎಂದ ಅದು ಹೈಕೋರ್ಟ್ ನೀಡಿದ್ದ ವಿಚ್ಛೇದನ ರದ್ದುಪಡಿಸಿ ಮತ್ತೆ ಪ್ರಕರಣವನ್ನು ಹೊಸದಾಗಿ ಆಲಿಸುವಂತೆ ತಿಳಿಸಿತು.