Prof. Ravi Varma Kumar and Karnataka HC 
ಸುದ್ದಿಗಳು

[ಬಿಎಸ್‌ವೈ ವಿರುದ್ಧದ ಪೋಕ್ಸೊ ಪ್ರಕರಣ] ಎಸ್‌ಪಿಪಿಯಾಗಿ ಪ್ರೊ.ರವಿವರ್ಮ ಕುಮಾರ್‌ ನೇಮಕ; ಹೈಕೋರ್ಟ್‌ಗೆ ಸರ್ಕಾರದ ವಿವರಣೆ

“ಸೆ. 3ರಂದು ಸರ್ಕಾರವು ಪ್ರೊ. ರವಿವರ್ಮ ಕುಮಾರ್‌ ಅವರನ್ನು ಈ ಪ್ರಕರಣದಲ್ಲಿ ಎಸ್‌ಪಿಪಿಯನ್ನಾಗಿ ನೇಮಕ ಮಾಡಿದೆ. ಅವರಿಗೆ ಪ್ರಕರಣದ ಮಾಹಿತಿ ನೀಡಲಾಗುವುದು. ಹೀಗಾಗಿ, ಅರ್ಜಿ ವಿಚಾರಣೆಯನ್ನು ಮುಂದೂಡಬೇಕು” ಎಂದು ಕೋರಿದ ಅಶೋಕ್‌ ನಾಯ್ಕ್‌.

Bar & Bench

ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪ ಅವರು ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೊ ಪ್ರಕರಣ ರದ್ದುಪಡಿಸುವಂತೆ ಹಾಗೂ ಇದೇ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸಿಐಡಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್‌ ನಾಯ್ಕ್‌ ಅವರು “ಸೆಪ್ಟೆಂಬರ್‌ 3ರಂದು ರಾಜ್ಯ ಸರ್ಕಾರವು ಪ್ರೊ. ರವಿವರ್ಮ ಕುಮಾರ್‌ ಅವರನ್ನು ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿದೆ. ಅವರಿಗೆ ಪ್ರಕರಣದ ಮಾಹಿತಿಯನ್ನು (ಬ್ರೀಫ್‌) ನೀಡಲಾಗುವುದು. ಹೀಗಾಗಿ, ಅರ್ಜಿ ವಿಚಾರಣೆಯನ್ನು ಮುಂದೂಡಬೇಕು” ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಾಲಯವು ಯಡಿಯೂರಪ್ಪ ಅವರನ್ನು ಬಂಧಿಸದಂತೆ ಮತ್ತು ಅವರಿಗೆ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿ ಈ‌ ಹಿಂದೆ‌ ಮಾಡಿದ್ದ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಆದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೆಪ್ಟೆಂಬರ್‌ 19ಕ್ಕೆ ಮುಂದೂಡಿತು. 

ಈ ಹಿಂದೆ ಅಡ್ವೊಕೇಟ್‌ ಜನರಲ್‌ ಆಗಿದ್ದ ಪ್ರೊ. ರವಿವರ್ಮ ಕುಮಾರ್‌ ಅವರನ್ನು ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಸಂಬಂಧಿ ಪ್ರಕರಣಗಳಲ್ಲಿಯೂ ಹೈಕೋರ್ಟ್‌ನಲ್ಲಿ ವಿಶೇಷ ತನಿಖಾ ತಂಡದ ಪರವಾಗಿ ವಾದಿಸಲು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿದೆ.