“ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೈಲಿಗೆ ಹೋಗುತ್ತಾರೆ ಎಂದು ಆಡಳಿತಾರೂಢ ಕಾಂಗ್ರೆಸ್‌ನ ಸಚಿವರು, ಶಾಸಕರು ದಿನ ಬೆಳಗಾಯ್ತು ಎಂದರೆ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಅವರೇ ಬಂದು ವಾದಿಸಲಿ” ಎಂದು ಬಿಎಸ್‌ವೈ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಶುಕ್ರವಾರ ಮೌಖಿಕವಾಗಿ ಸವಾಲು ಎಸೆದರು.
ಪೋಕ್ಸೊ ಪ್ರಕರಣದಲ್ಲಿ ಜಾಮೀನು ಕೋರಿ ಮತ್ತು ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬಿ ಎಸ್ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಸಿಐಡಿ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯ್ಕ್ ಅವರು “ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಲಾಗುತ್ತಿದ್ದು, ಸ್ವಲ್ಪ ಕಾಲಾವಕಾಶ ನೀಡಬೇಕು” ಎಂದರು.
ಆಗ ಬಿಎಸ್‌ವೈ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ದಿನ ಬೆಳಗಾಯ್ತು ಎಂದರೆ ಒಬ್ಬರಲ್ಲಾ ಒಬ್ಬ ಸಚಿವರು ಯಡಿಯೂರಪ್ಪ ಅವರನ್ನು ಪೋಕ್ಸೊ ಪ್ರಕರಣದಲ್ಲಿ ಪ್ರಾಸಿಕ್ಯೂಟ್ ಮಾಡಲಾಗುತ್ತದೆ, ಅವರು ಸರಂಡರ್ ಆಗಬೇಕು. ಜೈಲಿಗೆ ಹೋಗುತ್ತಾರೆ ಎನ್ನುತ್ತಿದ್ದಾರೆ. ತಡೆಯಾಜ್ಞೆಯನ್ನು ನಾವು ತೆರವು ಮಾಡುವಂತೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಹಾಗಾದರೆ ಬಂದು ವಾದಿಸಿ” ಎಂದು ಸವಾಲು ಎಸೆದರು.
ಮುಂದುವರಿದು, “ಬಿಎಸ್‌ವೈ ಹಣೆಬರಹ ಇದ್ದರೆ ಅವರು ಜೈಲಿಗೆ ಹೋಗುತ್ತಾರೆ. ಹಾಗೆ ಹೇಳುವವರು ಬಂದು ವಾದಿಸಲಿ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್‌ಎ, ಎಂಪಿಗಳು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಪೋಸ್ಕೊ, ಪೋಸ್ಕೊ..” ಎಂದು ಏರುಧ್ವನಿಯಲ್ಲಿ ಹೇಳಿದರು.
ಆಗ ನ್ಯಾಯಮೂರ್ತಿಗಳು “ಅದೇನದು ಪೋಸ್ಕೊ, ಪೋಸ್ಕೋ… ಅದು ಪೋಕ್ಸೊ” ಎಂದು ಲಘು ದಾಟಿಯಲ್ಲಿ ಹೇಳಿದರು. ಅದಕ್ಕ ನಾಗೇಶ್ ಅವರು “ನಾನು ಪೋಸ್ಕೊ ಎನ್ನುತ್ತಿಲ್ಲ. ಅವರು (ರಾಜಕಾರಣಿಗಳು) ಹಾಗೆ ಹೇಳುತ್ತಿದ್ದಾರೆ” ಎಂದರು.
ಅಂತಿಮವಾಗಿ ಪೀಠವು ಮಧ್ಯಂತರ ಆದೇಶ ಮುಂದುವರಿಯಲಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಲಾಗಿದೆ ಎಂದು ಆದೇಶಿಸಿತು.