ಮಥುರಾದ ಶ್ರೀಕೃಷ್ಣ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಮಸೀದಿಯನ್ನು ಹಿಂದೂಗಳಿಗೆ ಹಸ್ತಾಂತರಿಸಲು ನಿರ್ದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅಲಹಾಬಾದ್ ಹೈಕೋರ್ಟ್ ಮರುಸ್ಥಾಪಿಸಿದೆ.
ನ್ಯಾಯಾಲಯಕ್ಕೆ ಅರ್ಜಿದಾರರು ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಜನವರಿ 19, 2021 ರಂದು ವಜಾಗೊಂಡಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಪ್ರಕಾಶ್ ಪಾಡಿಯಾ ಅವರಿದ್ದ ಪೀಠ ಮರುಸ್ಥಾಪಿಸಿತು. ಜುಲೈ 25 ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಮಥುರಾದ ಶಾಹಿ ಮಸೀದಿಯನ್ನು ಕೃಷ್ಣನ ಜನ್ಮಸ್ಥಾನದಲ್ಲಿ ನಿರ್ಮಿಸಲಾಗಿದೆ. ಕತ್ರಾ ಕೇಶವದೇವ್ ದೇಗುಲವಾಗಿದ್ದ ಇದನ್ನು 16 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಕೆಡವಿ ಮಸೀದಿ ನಿರ್ಮಿಸಿದ ಎಂದು ವಕೀಲ ಮೆಹೆಕ್ ಮಹೇಶ್ವರಿ ಅವರು ಅರ್ಜಿ ಸಲ್ಲಿಸಿದ್ದರು. ವಾರದಲ್ಲಿ ಕೆಲವು ದಿನಗಳು ಮತ್ತು ಕೃಷ್ಣ ಜನ್ಮಾಷ್ಟಮಿಯಂದು ಮಸೀದಿಯಲ್ಲಿ ಪೂಜೆ ಮಾಡಲು ಹಿಂದೂಗಳಿಗೆ ಅನುಮತಿ ನೀಡುವಂತೆ ಅರ್ಜಿಯಲ್ಲಿ ಮಧ್ಯಂತರ ಪರಿಹಾರ ಕೋರಲಾಗಿತ್ತು.
ಈ ಮಧ್ಯೆ ಮಥುರಾ ನ್ಯಾಯಾಲಯದ ಮುಂದೆ ಇತ್ತೀಚೆಗಷ್ಟೇ ಅರ್ಜಿ ಸಲ್ಲಿಸಿದ್ದ ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ ಶಾಹಿ ಈದ್ಗಾ ಮಸೀದಿಯ ಒಳಗೆ ಮತ್ತು ಪಕ್ಕದ ರಸ್ತೆಯಲ್ಲಿ ನಮಾಜ್ ನಿಲ್ಲಿಸಲು ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.