Former CJI Ranjan Gogoi
Former CJI Ranjan Gogoi 
ಸುದ್ದಿಗಳು

ಪೆಗಾಸಸ್‌ ನಿಗಾ ಇರಿಸಿದ್ದ ಪಟ್ಟಿಯಲ್ಲಿ ಗೊಗೊಯ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಸಿಬ್ಬಂದಿಯ ಹೆಸರು!

Bar & Bench

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸುಪ್ರೀಂ ಕೋರ್ಟ್‌ ಸಿಬ್ಬಂದಿಗೆ ಸೇರಿದ ಮೂರು ಮೊಬೈಲ್‌ ನಂಬರ್‌ಗಳನ್ನು ಪೆಗಾಸಸ್‌ ಸಾಫ್ಟ್‌ವೇರ್‌ ಬಳಸಿ ಕಣ್ಗಾವಲಿಗೆ ಒಳಪಡಿಸಲಾಗಿತ್ತು ಎಂದು ʼದಿ ವೈರ್‌ʼ ವರದಿ ಮಾಡಿದೆ.

2019ರ ಏಪ್ರಿಲ್‌ನಲ್ಲಿ ಲೈಂಗಿಕ ಕಿರುಕುಳ ಆರೋಪ ಬಿರುಗಾಳಿ ಎಬ್ಬಿಸಿದ್ದಾಗ ಮಹಿಳಾ ಸಿಬ್ಬಂದಿಯ ಕುಟುಂಬ ಸದಸ್ಯರ ಎಂಟು ಮೊಬೈಲ್‌ ನಂಬರ್‌ಗಳ ಮೇಲೂ ನಿಗಾ ಇಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಸ್ರೇಲ್‌ ಮೂಲದ ಎನ್‌ಎಸ್‌ಒ ಎಂಬ ಸ್ಪೈವೇರ್‌ ಸಂಸ್ಥೆಯು ʼಪೆಗಾಸಸ್‌ʼ ಎಂಬ ಸ್ಪೈವೇರ್‌ಗೆ ಕುಖ್ಯಾತಿಯಾಗಿದೆ. ಪರಿಶೀಲಿಸಲ್ಪಟ್ಟ ಸರ್ಕಾರಗಳಿಗೆ ಮಾತ್ರ ಅದು ಸ್ಪೈವೇರ್‌ ಮಾರಾಟ ಮಾಡುತ್ತಿದ್ದು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ. ಅಲ್ಲದೇ, ಯಾವ ಸರ್ಕಾರಕ್ಕೆ ತಾನು ಈ ವಿವಾದಾತ್ಮಕ ಉತ್ಪನ್ನವನ್ನು ಮಾರಾಟ ಮಾಡಿದ್ದೇನೆ ಎಂದೂ ಅದು ತಿಳಿಸುವುದಿಲ್ಲ.

ಪೆಗಾಸಸ್‌ ಪ್ರಾಜೆಕ್ಟ್‌ನ ಸದಸ್ಯರು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಕಳುಹಿಸಿದ ವಿಸ್ತೃತವಾದ ಪ್ರಶ್ನೆಗೆ ಉತ್ತರವಾಗಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಭಾರತ ಸರ್ಕಾರ ಮತ್ತು ಪೆಗಾಸಸ್‌ ನಡುವಿನ ಸಹಯೋಗದ ಆರೋಪವು ದುರುದ್ದೇಶದಿಂದ ಕೂಡಿದೆ ಎಂದು ಹೇಳಿರುವುದಾಗಿ ʼದಿ ವೈರ್‌ʼ ವರದಿಯಲ್ಲಿ ವಿವರಿಸಲಾಗಿದೆ.

“ನಿರ್ದಿಷ್ಟ ವ್ಯಕ್ತಿಗಳ ಮೇಲೆ ಸರ್ಕಾರವು ನಿಗಾ ಇಟ್ಟಿದೆ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ ಅಥವಾ ಅದರಲ್ಲಿ ಸತ್ಯಾಂಶವಿಲ್ಲ” ಎಂದಿದೆ. ರಂಜನ್‌ ಗೊಗೊಯ್‌ ವಿರುದ್ಧ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಮಹಿಳಾ ಸಿಬ್ಬಂದಿಯನ್ನು 2018ರ ಡಿಸೆಂಬರ್‌ನಲ್ಲಿ ಸೇವೆಯಿಂದ ವಜಾ ಮಾಡಲಾಗಿತ್ತು.

ನಾಲ್ಕು ವೆಬ್‌ಪೋರ್ಟಲ್‌ಗಳು ಲೈಂಗಿಕ ಕಿರುಕುಳದ ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಅದೇ ದಿನ ಸಿಜೆಐ ಗೊಗೊಯ್‌ ಅವರು ವಿಶೇಷ ಪೀಠ ರಚಿಸಿದ್ದರು. “ಸಾರ್ವಜನಿಕವಾಗಿ ಅತ್ಯಂತ ಮಹತ್ವವಾದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು” ಎಂಬ ತಲೆಬರಹದಡಿ ಪ್ರಕರಣ ದಾಖಲಿಸಲಾಗಿತ್ತು.

ಇದರ ಬೆನ್ನಿಗೇ, ಸಿಜೆಐ ಗೊಗೊಯ್‌ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆಗಾಗಿ ನ್ಯಾಯಮೂರ್ತಿಗಳ ವಿಶೇಷ ಸಮಿತಿ ರಚಿಸಲಾಗಿತ್ತು. ಆರಂಭದಲ್ಲಿ ನ್ಯಾಯಮೂರ್ತಿಗಳಾದ ಎಸ್‌ ಎ ಬೊಬ್ಡೆ, ಎನ್‌ ವಿ ರಮಣ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ದೂರುದಾರೆಯು ಎನ್‌ ವಿ ರಮಣ ಅವರ ಉಪಸ್ಥಿತಿಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ಹಿಂದೆ ಸರಿದಿದ್ದರು. ಸಿಜೆಐ ಗೊಗೊಯ್‌ ಮತ್ತು ಎನ್‌ ವಿ ರಮಣ ಅವರ ನಡುವೆ ಅತ್ಯುತ್ತಮ ಬಾಂಧವ್ಯವಿದ್ದು, ಇದು ವಿಚಾರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ, ಅವರ ಬದಲಿಗೆ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರನ್ನು ಸಮಿತಿಗೆ ಸೇರ್ಪಡೆಗೊಳಿಸಲಾಗಿತ್ತು.

ನಾಲ್ಕು ದಿನಗಳ ವಿಚಾರಣೆಯ ಬಳಿಕ ಸಮಿತಿಯು ಸಿಜೆಐ ಗೊಗೊಯ್‌ ವಿರುದ್ಧ ಸುಪ್ರೀಂ ಕೋರ್ಟ್‌ ಸಿಬ್ಬಂದಿ ಮಾಡಿರುವ ಲೈಂಗಿಕ ಕಿರುಕುಳ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿತ್ತು. ಈ ಮಧ್ಯೆ, ಮೂರನೇ ದಿನದ ವಿಚಾರಣೆಯ ನಡುವೆಯೇ ನ್ಯಾಯಯುತವಾಗಿ ವಿಚಾರಣೆ ನಡೆಯುತ್ತಿಲ್ಲ ಎಂದು ದೂರುದಾರೆ ಹಿಂದೆ ಸರಿದಿದ್ದರು. ತನ್ನ ವಕೀಲರು ಅಥವಾ ಬೆಂಬಲಿತರನ್ನು ವಿಚಾರಣೆಗೆ ಕರೆದೊಯ್ಯಲು ಅವಕಾಶ ಮಾಡಿಕೊಟ್ಟಿಲ್ಲ ಮತ್ತು ಕಲಾಪದ ವಿಡಿಯೊ ರೆಕಾರ್ಡಿಂಗ್‌ ಮಾಡಲಾಗುತ್ತಿಲ್ಲ ಎಂದು ದೂರುದಾರೆ ಆರೋಪಿಸಿದ್ದರು. ಆಶ್ಚರ್ಯವೆಂದರೆ, ಸಿಜೆಐ ಎಸ್‌ ಎ ಬೊಬ್ಡೆ ಕಾಲಾವಧಿಯಲ್ಲಿ ಮಹಿಳಾ ಸಿಬ್ಬಂದಿಯನ್ನು ಸೇವೆಗೆ ಪುನರ್‌ ನೇಮಕ ಮಾಡಲಾಯಿತು.