ಸುದ್ದಿಗಳು

ಜೈಲಿನಲ್ಲಿ ತನ್ನ ಧಾರ್ಮಿಕ ನಂಬಿಕೆಯಂತೆ ಆಹಾರ ನೀಡುತ್ತಿಲ್ಲ ಎಂದಿದ್ದ ಸಚಿವ ಜೈನ್ ಮನವಿ ವಜಾಗೊಳಿಸಿದ ದೆಹಲಿ ನ್ಯಾಯಾಲಯ

Bar & Bench

ದೆಹಲಿಯ ತಿಹಾರ್‌ ಜೈಲಿನಲ್ಲಿ ತನ್ನ ಧಾರ್ಮಿಕ ನಂಬಿಕೆಯ ಪ್ರಕಾರ ಆಹಾರ ನೀಡುತ್ತಿಲ್ಲ ಎಂದು ದೂರಿ ಸಚಿವ ಸತ್ಯೇಂದ್ರ ಜೈನ್‌ ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ವಜಾಗೊಳಿಸಿರುವ ನಗರದ ರೌಸ್‌ ಅವೆನ್ಯೂ ನ್ಯಾಯಾಲಯ ‘ಪ್ರಭುತ್ವ ಯಾರಿಗೂ ಯಾವುದೇ ವಿಶೇಷ ಸವಲತ್ತು ನೀಡುವಂತಿಲ್ಲ’ ಎಂದು ತಿಳಿಸಿದೆ.

ಜೈನ್ ಅವರು ಸಲ್ಲಿಸಿದ್ದ ಮನವಿ ವಜಾಗೊಳಿಸಿದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್ ಅವರು ಸಚಿವರಿಗೆ ಹಣ್ಣು, ತರಕಾರಿ ಹಾಗೂ ಒಣಹಣ್ಣು ಒದಗಿಸುವಂತೆ ತಿಹಾರ್‌ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಕಾರಣ ಇಲ್ಲ ಎಂದರು.   

ಜೈನಧರ್ಮದ ಕಟ್ಟಾ ಅನುಯಾಯಿಯಾಗಿರುವ ತಾನು ಧಾರ್ಮಿಕ ಉಪವಾಸ ಆಚರಿಸುತ್ತಿದ್ದು ಬೇಯಿಸಿದ ಆಹಾರ ಅಥವಾ ಬೇಳೆಕಾಳುಗಳನ್ನು ತಿನ್ನುವಂತಿಲ್ಲ ಎಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷ ಮೇ ತಿಂಗಳಿನಿಂದ ಜೈಲಿನಲ್ಲಿರುವ ಜೈನ್ ಮನವಿ ಮಾಡಿದ್ದರು.

ಜೈಲು ನಿಯಮಗಳ ಪ್ರಕಾರ, ಧಾರ್ಮಿಕ ಉಪವಾಸ ಆಚರಿಸುವ ಕೈದಿಗಳಿಗೆ ಸರ್ಕಾರದ ಆದೇಶದಿಂದ ಅನುಮತಿಸಬಹುದಾದ ಹಣ್ಣು/ಆಲೂಗಡ್ಡೆ ರೀತಿಯ ಪರ್ಯಾಯ ಆಹಾರ ಒದಗಿಸಬಹುದು ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ನ್ಯಾಯಾಧೀಶರು ಗಮನಿಸಿದರು.

ಆದರೂ ಪ್ರಸ್ತುತ ಪ್ರಕರಣದಲ್ಲಿ ಜೈನ್‌ ಅವರು ಉಪವಾಸ ಮಾಡುವ ಇಂಗಿತ ವ್ಯಕ್ತಪಡಿಸಿ ಯಾವುದೇ ವಿನಂತಿ ಸಲ್ಲಿಸಿರಲಿಲ್ಲ ಅಥವಾ ಜೈಲು ಅಧಿಕಾರಿಗಳು ಧಾರ್ಮಿಕ ಉಪವಾಸ ಆಚರಿಸಲು ಯಾವುದೇ ಅನುಮತಿ ನೀಡಿರಲಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಜೈಲು ಕ್ಯಾಂಟೀನ್‌ನಿಂದ ಹಣ್ಣು/ತರಕಾರಿ ಖರೀದಿಸುತ್ತಿದ್ದಾರೆ ಎಂದು ಜೈನ್‌ ಮತ್ತು ಜೈಲು ಅಧಿಕಾರಿಗಳು ಹೇಳಿದ್ದನ್ನು ಗಮನಿಸಿದ ನ್ಯಾಯಾಲಯ ಅದಕ್ಕೆ ಸಂಬಂಧಿಸಿದ ಯಾವುದೇ ಬಿಲ್‌ ಸಲ್ಲಿಸಿಲ್ಲ. ಹೀಗಾಗಿ ಡಿಜಿ ಅಥವಾ ಅಧಿಕಾರಿಗಳ ಆದೇಶ ಇಲ್ಲದೆ ಜೈನ್‌ ಅವರಿಗೆ ಹಣ್ಣು ತರಕಾರಿಗಳನ್ನು ಒದಗಿಸಲಾಗುತ್ತಿದೆ ಎಂದು ಮೇಲ್ನೋಟಕ್ಕೆಕಂಡುಬರುತ್ತಿದೆ ಎಂದು ಹೇಳಿತು. 

ಅರ್ಜಿದಾರರಿಗೆ ಹಣ್ಣು ಮತ್ತು ತರಕಾರಿ ಒದಗಿಸುವುದು- ಸರ್ಕಾರ ಎಲ್ಲಾ ಕೈದಿಗಳನ್ನು ಸಮಾನವಾಗಿ ಪರಿಗಣಿಸಲು ಬದ್ಧವಾಗಿರಬೇಕು ಮತ್ತು ಜಾತಿ, ಧರ್ಮ, ಲಿಂಗ, ಧರ್ಮದ ಆಧಾರದ ಮೇಲೆ ತಾರತಮ್ಯ ಎಸಗುವಂತಿಲ್ಲ ಎಂದು ಹೇಳುವ ಸಂವಿಧಾನದ 14ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.