Migrant workers
Migrant workers  
ಸುದ್ದಿಗಳು

ಎಲ್ಲಾ ಮನೆಗೆಲಸದವರು ಅಂತರ್ಜಾಲ ಬಳಸುತ್ತಿದ್ದಾರೆ ಎಂಬ ಊಹೆಯಲ್ಲಿ ಸರ್ಕಾರ ಇದೆ: ಕರ್ನಾಟಕ ಹೈಕೋರ್ಟ್ ಟೀಕೆ

Bar & Bench

ಕೋವಿಡ್‌ ಹಿನ್ನೆಲೆಯಲ್ಲಿ ರೂ 2,000 ಸಹಾಯಧನ ನೀಡಲು ಅಸಂಘಟಿತ ವಲಯಕ್ಕೆ ಸೇರಿದ ಮನೆಗೆಲಸದವರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ ಕೇಳಿರುವುದು ಕಾರ್ಯಸಾಧುವೇ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯಸರ್ಕಾರವನ್ನು ಪ್ರಶ್ನಿಸಿದೆ.

ತಾವು ನೋಂದಣಿ ಮೂಲಕ ಪರಿಹಾರ ಪಡೆಯಲು ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಬೇಕು ಎಂದಾದರೂ ಅಂತಹ ವ್ಯಕ್ತಿಗಳಿಗೆ ಹೇಗೆ ಗೊತ್ತಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

“… ಎಲ್ಲಾ ಕಾರ್ಮಿಕರು ಅಂತರ್ಜಾಲ ಬಳಸುತ್ತಾರೆ ಹಾಗೂ ಛಾಯಾಚಿತ್ರ ಮತ್ತು ಉದ್ಯೋಗ ಪ್ರಮಾಣಪತ್ರವನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡುತ್ತಾರೆ ಎಂಬ ಊಹೆಯಲ್ಲಿ ಸರ್ಕಾರ ಮುಂದುವರೆಯುತ್ತಿದೆ” ಎಂದು ನ್ಯಾಯಾಲಯ ಟೀಕಿಸಿದೆ.

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆ ಮತ್ತು ಅದಕ್ಕೆ ಸಂಬಂಧಿಸಿದ 2009ರ ನಿಯಮಗಳಡಿ ಮನೆಗೆಲಸದವರನ್ನು ನೋಂದಾಯಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ರಾಜ್ಯದಲ್ಲಿ ವಿಧಿಸಲಾದ ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಗಮನಿಸಿ ಎಲ್ಲಾ ಅಂಸಘಟಿತ ಕಾರ್ಮಿಕರಿಗೆ ರೂ 2000 ಸಹಾಯಧನ ನೀಡುವುದಾಗಿ ಸರ್ಕಾರ ಮೇ 20ರಂದು ಘೋಷಿಸಿತ್ತು. ಅರ್ಜಿಯನ್ನು ವಿಚಾರಣೆಗಾಗಿ ಕೈಗೆತ್ತಿಕೊಂಡಾಗ ಮನೆಗೆಲಸದವರನ್ನು ನೋಂದಾಯಿಸಲು ಛಾಯಾಚಿತ್ರ, ಆಧಾರ್‌ ಕಾರ್ಡ್‌ ಹಾಗೂ ಅರ್ಜಿ ನಮೂನೆಯ ಮೂರು ದಾಖಲೆಗಳು ಅಗತ್ಯವಿದೆ ಎಂದು ತಿಳಿಸಲಾಯಿತು. ಆದರೆ ಇದಕ್ಕೆ ಸಂಬಂಧಪಟ್ಟಂತೆ ಪ್ರಚಾರ ನೀಡಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿತು. ಆಗ “ಕೆಲಸಗಾರರು ತಮ್ಮ ಹೆಸರನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಅದು ಸಾಧ್ಯವಾಗದಿದ್ದಲ್ಲಿ, ಗ್ರಾಮ ಪಂಚಾಯಿತಿಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು” ಎಂದು ತಿಳಿಸಲಾಯಿತು.

ವಿಚಾರಣೆ ಮುಂದುವರೆದಂತೆ, ಆಧಾರ್ ಕಾರ್ಡ್ ಇಲ್ಲದ ಯಾವುದೇ ಕಾರ್ಮಿಕರಿಗೆ ಪರಿಹಾರ ನೀಡಲಾಗದು ಎಂಬ ಸರ್ಕಾರದ ನಿರ್ಧಾರದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಹಂತದಲ್ಲಿ ನ್ಯಾಯಾಲಯ “ಒಂದು ವೇಳೆ ಆಧಾರ್‌ ಕಾರ್ಡ್‌ ಇಲ್ಲದಿದ್ದರೆ ಹಣವನ್ನು ನೀಡುವುದಿಲ್ಲವೇ? ಹಾಗಾದರೆ ಯೋಜನೆಯ ಉದ್ದೇಶವೇನು?” ಎಂದು ಪ್ರಶ್ನಿಸಿತು. “ಕೆಲವರ ಬಳಿ ಮಾತ್ರ ಆಧಾರ್‌ ಕಾರ್ಡ್‌ ಇಲ್ಲ ಎಂದು ಸರ್ಕಾರದ ಪರ ವಕೀಲರು ತಿಳಿಸಿದಾಗ ಅಂತಹ ಕೆಲವು ಮಂದಿ ಕೂಡ ಯೋಜನೆಯ ಲಾಭ ಪಡೆಯಬೇಕು ಎಂದು ನ್ಯಾಯಾಲಯ ಕಿವಿಮಾತು ಹೇಳಿತು.

“ಯೋಜನೆ ಉತ್ತಮವಾದುದಾಗಿದ್ದು ಅದು ಎಲ್ಲ ಕೆಲಸಗಾರರಿಗೂ ದೊರೆಯಬೇಕು. ಬೆಂಗಳೂರು ಒಂದರಲ್ಲಿಯೇ ನಾಲ್ಕು ಲಕ್ಷ ಮನೆಗೆಲಸದವರಿದ್ದಾರೆ. ಅದೂ ಕೂಡ ರೂಢಿಗತ ಅಂದಾಜು” ಎಂದು ಅರ್ಜಿದಾರರ ಪರ ವಕೀಲ ಕ್ಲಿಫ್ಟನ್‌ ಡಿ ರೊಜಾರಿಯೊ ತಿಳಿಸಿದರು. ಆಗ ನ್ಯಾಯಾಲಯ “ಸರ್ಕಾರ ಈ ಕಾರ್ಯವಿಧಾನವನ್ನು ಸರಿಪಡಿಸಬೇಕು” ಎಂದು ಸೂಚಿಸಿತು.

"ಹೆಚ್ಚು ಕೇಳುತ್ತಾ ಹೋದಂತೆ ಈ ಯೋಜನೆ ಕಾಗದದಲ್ಲಿ ಮಾತ್ರ ಉಳಿಯಬೇಕೆಂದು ನೀವು (ಸರ್ಕಾರ) ಬಯಸುತ್ತೀರಿ ಎಂದು ನಮಗೆ ಮನವರಿಕೆಯಾಗಿದೆ. (ರೂ 2000 ಸಹಾಯಧನ ನೀಡಿರುವುದನ್ನು ಪ್ರಸ್ತಾಪಿಸುತ್ತಾ) ಇದು ಅಲ್ಪ ಮೊತ್ತ ಮಾತ್ರ. ಎಷ್ಟೊಂದು ಮುಂದೂಡಿಕೆಗಳು. ಸರ್ಕಾರ ಬರೀ ಸಬೂಬು ನೀಡುತ್ತಿದೆ” ಎಂದು ನ್ಯಾಯಾಲಯ ಕಿಡಿಕಾರಿತು. ಅಲ್ಲದೆ ಅರ್ಹ ಫಲಾನುಭವಿಗಳೆಲ್ಲರಿಗೂ ಯೋಜನೆ ಲಭ್ಯವಾಗುವಂತೆ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದ ಪೀಠ ಯೋಜನೆಗೆ ವ್ಯಾಪಕ ಪ್ರಚಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆ ಜೂನ್ 25ಕ್ಕೆ ನಿಗದಿಯಾಗಿದೆ.