Vakeelara Bhavana, AAB 
ಸುದ್ದಿಗಳು

ಬೆಂಗಳೂರು ವಕೀಲರ ಸಂಘಕ್ಕೆ ನಗರ ಜಿಲ್ಲಾಧಿಕಾರಿ ಮಂಜುನಾಥ್‌ರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ ರಾಜ್ಯ ಸರ್ಕಾರ

“ಕೋವಿಡ್‌ನಿಂದಾಗಿ ಸರ್ಕಾರವು ಆರು ತಿಂಗಳು ಚುನಾವಣೆ ನಡೆಸಬಾರದು ಎಂದು ಆದೇಶಿಸಿತ್ತು. ಹೀಗಾಗಿ, ಚುನಾವಣೆ ಬಗ್ಗೆ ಚರ್ಚಿಸಿರಲಿಲ್ಲ. ಸರ್ಕಾರವು ನಿರ್ಬಂಧ ತೆರವುಗೊಳಿಸಿದ ಬಳಿಕ ಚುನಾವಣೆ ನಡೆಸಲಾಗುವುದು” ಎಂದು ಎಎಬಿ ಸರ್ಕಾರಕ್ಕೆ ಉತ್ತರಿಸಿತ್ತು.

Siddesh M S

ಬೆಂಗಳೂರು ವಕೀಲರ ಸಂಘಕ್ಕೆ (ಎಎಬಿ) ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರದ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಆಡಳಿತಾಧಿಕಾರಿಗಳಾಗಿದ್ದು, ಆರು ತಿಂಗಳು ಅಥವಾ ಹೊಸ ಆಡಳಿತ ಮಂಡಳಿ ಅಧಿಕಾರ ಸ್ವೀಕರಿಸುವವರೆಗೆ ಆಡಳಿತ ನಿಭಾಯಿಸಲಿದ್ದಾರೆ ಎಂದು ಸರ್ಕಾರವು ಶನಿವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

“ಜಿಲ್ಲಾಧಿಕಾರಿಗಳು ತಕ್ಷಣ ಪ್ರಭಾರವಾಗಿ ಅಧಿಕಾರವಹಿಸಿಕೊಂಡು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸಂಘಕ್ಕೆ ಆದಷ್ಟು ಬೇಗ ಚುನಾವಣೆ ನಡೆಸಿ, ಆಡಳಿತ ಮಂಡಳಿಗೆ ಅಧಿಕಾರ ವರ್ಗಾಯಿಸಬೇಕು” ಎಂದೂ ಆದೇಶದಲ್ಲಿ ಹೇಳಲಾಗಿದೆ.

ಎಸ್‌ ಪಿ ಶಶಿಧರ್‌ ಮತ್ತು ಇತರರು ಕಳೆದ ಫೆಬ್ರವರಿ 26ರಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಚುನಾವಣೆ ನಡೆಸಬೇಕು ಎಂದು ಕೋರಿದ್ದರು. “ಸಂಘದ ಬೈಲಾದ ಪ್ರಕಾರ ಸದ್ಯದ ಆಡಳಿತ ಮಂಡಳಿಯ ಅಧಿಕಾರ ಮುಗಿದಿದ್ದು, ಹೊಸ ಆಡಳಿತ ಮಂಡಳಿ ರಚಿಸುವ ಸಂಬಂಧ ಚುನಾವಣೆ ನಡೆಸದಿರುವುದು ಬೈಲಾಕ್ಕೆ ವಿರುದ್ಧವಾಗಿದೆ. ವಕೀಲರ ಕುಂದು-ಕೊರತೆ ಆಲಿಸಲು ಮತ್ತು ಅದನ್ನು ಬಗೆಹರಿಸಲು ಆಡಳಿತ ಮಂಡಳಿ ಅವಶ್ಯಕತೆ ಇರುತ್ತದೆ. ಸಂಘದ ಹಣ ದುರ್ಬಳಕೆಯಾಗುವುದನ್ನು ತಡೆಯಲು ಮತ್ತು ಸಂಘದ ಕ್ಷೇಮಾಭಿವೃದ್ಧಿಯ ದೃಷ್ಟಿಯಿಂದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ತರಲು ಚುನಾವಣೆ ನಡೆಸಬೇಕು” ಎಂದು ಮನವಿ ಮಾಡಲಾಗಿತ್ತು.

ಇದನ್ನು ಆಧರಿಸಿ, ಸಹಕಾರ ಸಂಘಗಳ ಉಪನಿಬಂಧಕರು “ಶಶಿಧರ್‌ ಮತ್ತಿತರರು ಸಲ್ಲಿಸಿದ್ದ ಮನವಿಯನ್ನು ಆಧಾರದಲ್ಲಿ ಚುನಾವಣೆ ನಡೆಸುವ ಸಂಬಂಧ ವರದಿ ಸಲ್ಲಿಸುವಂತೆ ಬೆಂಗಳೂರು ವಕೀಲರ ಸಂಘಕ್ಕೆ ಆದೇಶಿಸಿದ್ದರು. ಆದರೆ, ಎಎಬಿ ಯಾವುದೇ ಕ್ರಮವಹಿಸಿರಲಿಲ್ಲ. ಹೀಗಾಗಿ, ಸಂಘಕ್ಕೆ ರಾಜ್ಯ ನೋಂದಣಿ ಕಾಯಿದೆ 1980ರ ಪ್ರಕಾರ ಆಡಳಿತಾಧಿಕಾರಿ ನೇಮಿಸುವಂತೆ ಉಪನಿಬಂಧಕರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು” ಎಂದು ವಿವರಿಸಲಾಗಿದೆ.

ಇದರ ಬೆನ್ನಿಗೇ, ಸಹಕಾರ ಸಂಘಗಳ ಉಪನಿಬಂಧಕರ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರವು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಮತ್ತು ಕಾರ್ಯದರ್ಶಿ ಎ ಎನ್‌ ಗಂಗಾಧರಯ್ಯ ಅವರಿಗೆ ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದು ಎಂದು ಪ್ರಶ್ನಿಸಿ, ಲಿಖಿತ ಉತ್ತರ ದಾಖಲಿಸುವಂತೆ ಏಪ್ರಿಲ್‌ 20 ಮತ್ತು ಜೂನ್‌ 24ರಂದು ಎರಡು ಬಾರಿ ನೋಟಿಸ್‌ ಜಾರಿ ಮಾಡಲಾಗಿತ್ತು.

ಇದಕ್ಕ ಪ್ರತಿಕ್ರಿಯಿಸಿದ್ದ ಎಎಬಿ ಅಧ್ಯಕ್ಷ ರಂಗನಾಥ್‌ ಅವರು “ಕರ್ನಾಟಕ ಸಂಘಗಳ ಕಾಯಿದೆ 1960 ಕಲಂ 25ರ ವಿಚಾರಣೆಯ ಅಡಿ ಯಾವುದೇ ನೋಟಿಸ್‌ ಸಿಕ್ಕಿಲ್ಲ. ಹೀಗಾಗಿ, ವಿಚಾರಣೆಯಲ್ಲಿ ಭಾಗಿಯಾಗಿಲ್ಲ. ಆದ್ದರಿಂದ ಪ್ರಾಧಿಕಾರವು ಜೂನ್‌ 24ರಂದು ಜಾರಿ ಮಾಡಿರುವ ನೋಟಿಸ್‌ ಅನ್ನು ಹಿಂಪಡೆಯಬೇಕು” ಎಂದು ಕೋರಿದ್ದರು.

“ಅಲ್ಲದೇ, ಎಎಬಿ ಸರ್ವ ಸದಸ್ಯರ ಸಭೆಯಲ್ಲಿ ಆಗಸ್ಟ್‌ 29ರಂದು ಚುನಾವಣೆ ನಡೆಸುವ ನಿರ್ಧರಿಸಿ, ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಷ್ಟರಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಿಸಿದ್ದರಿಂದ ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ಈ ನಡುವೆ, ರಾಜ್ಯ ಹೈಕೋರ್ಟ್‌ ಕಾಲಕಾಲಕ್ಕೆ ಕೋವಿಡ್‌ ಮಾರ್ಗಸೂಚಿ ಹೊರಡಿಸಿದ್ದ‌ ಹಿನ್ನೆಲೆಯಲ್ಲಿ ಸಂಘದ ಕಚೇರಿಯನ್ನು ಮುಚ್ಚಲಾಗಿತ್ತು. ಈ ಮಧ್ಯೆ, ರಾಜ್ಯ ಸರ್ಕಾರವು ಆರು ತಿಂಗಳು ಚುನಾವಣೆ ನಡೆಸಬಾರದು ಎಂದು ಆದೇಶ ಮಾಡಿತ್ತು. ಹೀಗಾಗಿ, ಸರ್ವಸದಸ್ಯರ ಸಭೆ ಕರೆದಿಲ್ಲ. ಹಾಗೂ ಚುನಾವಣೆಯ ಬಗ್ಗೆ ಚರ್ಚಿಸಿರಲಿಲ್ಲ. ಸರ್ಕಾರವು ನಿರ್ಬಂಧ ತೆರವುಗೊಳಿಸಿದ ಬಳಿಕ ಚುನಾವಣೆ ನಡೆಸಲಾಗುವುದು ಎಂಬ ವಕೀಲರ ಸಂಘದ ಉತ್ತರವನ್ನು ಪರಿಗಣಿಸಿ ನೋಟಿಸ್‌ ಹಿಂಪಡೆಯಬೇಕು” ಎಂದು ಕೋರಲಾಗಿತ್ತು.

ಆದರೆ, ಜಿಲ್ಲಾ ನೋಂದಣಾಧಿಕಾರಿ ಅವರು “ವಕೀಲರ ಸಂಘದ ಕಾರ್ಯಕಾರಿ ಸಮಿತಿ ಮಂಡಳಿ ಅವಧಿಯು ಜನವರಿಯಲ್ಲೇ ಮುಕ್ತಾಯವಾಗಿದೆ. ಆದ್ದರಿಂದ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವುದು ಸೂಕ್ತ” ಎಂದು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದರು. ಉಪ ನಿಬಂಧಕರ ಆದೇಶವನ್ನು ಪರಿಗಣಿಸಿರುವ ರಾಜ್ಯ ಸರ್ಕಾರವು ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960ರ ಕಲಂ 27 (ಎ) ಅನ್ವಯ ಆಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ.

ಈ ಮಧ್ಯೆ, ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘವು ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ. ಈ ಪ್ರಕರಣವು ಇಂದು ವಿಚಾರಣೆಗೆ ಬರಲಿದೆ ಎನ್ನಲಾಗಿದೆ.

ಬೆಂಗಳೂರು ವಕೀಲರ ಸಂಘದಲ್ಲಿ 20 ಸಾವಿರಕ್ಕೂ ಅಧಿಕ ನೋಂದಾಯಿತ ವಕೀಲರಿದ್ದಾರೆ. ಇಡೀ ದೇಶದಲ್ಲಿ ಅತಿದೊಡ್ಡ‌ ವಕೀಲರ ಸಂಘ ಎಂಬ ಹಿರಿಮೆಗೂ ಸಂಘವು ಪಾತ್ರವಾಗಿದೆ. ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಒಳಗೊಂಡು 29 ಸದಸ್ಯರನ್ನು ಕಾರ್ಯಕಾರಿ ಸಮಿತಿ ಒಳಗೊಂಡಿದೆ.