Justice John Michael Cunha 
ಸುದ್ದಿಗಳು

ರಾಜ್ಯ ಭದ್ರತಾ ಆಯೋಗದ ಸದಸ್ಯರಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ನೇಮಕ

ನ್ಯಾ. ಮೈಕಲ್‌ ಕುನ್ಹಾ ಅವರು ಈಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣದ ಏಕಸದಸ್ಯ ವಿಚಾರಣಾ ಆಯೋಗದ ನೇತೃತ್ವ ವಹಿಸಿದ್ದಾರೆ. ಇದರ ಜೊತೆಗೆ ಸರ್ಕಾರವು ಅವರಿಗೆ ಕೋವಿಡ್‌ ಹಗರಣದ ವಿಚಾರಣೆಯ ಹೊಣೆಯನ್ನೂ ವಹಿಸಿದೆ.

Bar & Bench

ರಾಜ್ಯ ಭದ್ರತಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್‌ ಕುನ್ಹಾ ಅವರನ್ನು ನೇಮಿಸಿ ರಾಜ್ಯ ಸರ್ಕಾರವು ಈಚೆಗೆ ಆದೇಶಿಸಿದೆ.

ರಾಜ್ಯ ಭದ್ರತಾ ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡುವಂತೆ ಕೋರಿ ವಕೀಲ ಎಸ್‌ ಉಮಾಪತಿ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸಲು ಗಡುವು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ಮೇ 21ರಂದು ನ್ಯಾ. ಕುನ್ಹಾ ಅವರನ್ನು ನೇಮಿಸಿದೆ ಎಂದು ಅಧಿಸೂಚನೆಯನ್ನು ಒಳಗೊಂಡ ಅಫಿಡವಿಟ್‌ ಅನ್ನು ಸರ್ಕಾರವು ಹೈಕೋರ್ಟ್‌ಗೆ ಸಲ್ಲಿಸಿದೆ.

ರಾಜ್ಯ ಭದ್ರತಾ ಆಯೋಗಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರಲಿದ್ದು, ಗೃಹ ಸಚಿವರು ಉಪಾಧ್ಯಕ್ಷರಾಗಿರಲಿದ್ದಾರೆ. ವಿಪಕ್ಷ ನಾಯಕ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನಾಮನಿರ್ದೇಶಿಸುವ ನಿವೃತ್ತ ನ್ಯಾಯಮೂರ್ತಿ, ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ ಸದಸ್ಯರಾಗಿರಲಿದ್ದಾರೆ. ಪೊಲೀಸ್‌ ಮಹಾನಿರ್ದೇಶಕರು ಮತ್ತು ಪೊಲೀಸ್‌ ಮಹಾ ನಿರೀಕ್ಷಕರು ಆಯೋಗದ ಸದಸ್ಯ ಕಾರ್ಯದರ್ಶಿಗಳಾಗಿರಲಿದ್ದಾರೆ.

ಕರ್ನಾಟಕ ಪೊಲೀಸ್‌ (ತಿದ್ದುಪಡಿ) ಕಾಯಿದೆ ಸೆಕ್ಷನ್‌ 20(ಎ) ಅಡಿ ಪದತ್ತವಾದ ಅಧಿಕಾರ ಬಳಸಿ ರಾಜ್ಯ ಭದ್ರತಾ ಆಯೋಗ ರಚಿಸಲಾಗಿದೆ.

ನ್ಯಾ. ಮೈಕಲ್‌ ಕುನ್ಹಾ ಅವರು ಈಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣದ ಏಕಸದಸ್ಯ ವಿಚಾರಣಾ ಆಯೋಗದ ನೇತೃತ್ವ ವಹಿಸಿದ್ದಾರೆ. ಇದರ ಜೊತೆಗೆ ರಾಜ್ಯ ಸರ್ಕಾರವು ಅವರಿಗೆ ಕೋವಿಡ್‌ ಹಗರಣದ ವಿಚಾರಣಾ ಆಯೋಗದ ಹೊಣೆಯನ್ನೂ ವಹಿಸಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಜೈಲು ಶಿಕ್ಷೆ ವಿಧಿಸುವ ಮೂಲಕ ನ್ಯಾ. ಮೈಕಲ್‌ ಕುನ್ಹಾ ಅವರು ದೇಶದ ಗಮನಸೆಳೆದಿದ್ದರು.