ಕಾಲ್ತುಳಿತ ಪ್ರಕರಣ: ನಿವೃತ್ತ ನ್ಯಾ. ಮೈಕೆಲ್ ಕುನ್ಹಾ ನೇತೃತ್ವದ ಆಯೋಗದಿಂದ ನ್ಯಾಯಾಂಗ ತನಿಖೆಗೆ ಆದೇಶಿಸಿದ ಸರ್ಕಾರ

ಬೆಂಗಳೂರು ಪೊಲೀಸ್‌ ಆಯುಕ್ತ ಬಿ ದಯಾನಂದ, ಬೆಂಗಳೂರು ಪಶ್ಚಿಮ ಹೆಚ್ಚುವರಿ ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ವಿಕಾಸ್‌, ಕೇಂದ್ರ ವಿಭಾಗದ ಡಿಸಿಪಿ ಶೇಖರ್‌ ಎಚ್‌. ತೆಕ್ಕಣ್ಣವರ್‌ ಅವರನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರ.
Justice John Michael Cunha
Justice John Michael Cunha
Published on

ಆರ್‌ಸಿಬಿ ವಿಜಯೋತ್ಸವಕ್ಕೂ ಮುನ್ನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿರುವ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದ ಏಕಸದಸ್ಯ ಅಯೋಗವನ್ನು ರಚಿಸಿದೆ. ಈ ಕುರಿತು ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಅಲ್ಲದೇ, ದುರಂತಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಮತ್ತು ಕಾರ್ಯಕ್ರಮ ಆಯೋಜಕರಾದ ಡಿಎನ್‌ಎ ವಿರುದ್ಧ ಸಿಐಡಿ ತನಿಖೆಗೆ ರಾಜ್ಯ ಸರ್ಕಾರವು ಆದೇಶಿಸಿದೆ. ಈ ಮೂರು ಸಂಸ್ಥೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಸಂಬಂಧಿತರನ್ನು ಬಂಧಿಸಲು ಸೂಚಿಸಲಾಗಿದೆ.

ಇದರ ಜೊತೆಗೆ ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್‌ ಆಯುಕ್ತ ಹಾಗೂ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಬಿ ದಯಾನಂದ, ಬೆಂಗಳೂರು ಪಶ್ಚಿಮ ಹೆಚ್ಚುವರಿ ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ವಿಕಾಸ್‌, ಕೇಂದ್ರ ವಿಭಾಗದ ಡಿಸಿಪಿ ಶೇಖರ್‌ ಎಚ್‌. ತೆಕ್ಕಣ್ಣವರ್‌, ಕಬ್ಬನ್‌ ಪಾರ್ಕ್‌ನ ಸಹಾಯಕ ಪೊಲೀಸ್‌ ಆಯುಕ್ತ ಸಿ ಬಾಲಕೃಷ್ಣ, ಕಬ್ಬನ್‌ ಪಾರ್ಕ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಎ ಕೆ ಗಿರೀಶ್‌ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.

Also Read
ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಹೈಕೋರ್ಟ್‌

ಆರ್‌ಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಜೂನ್‌ 3ರಂದು ತಂಡವು ಪ್ರಶಸ್ತಿ ಗೆದ್ದಿರುವ ವಿಜಯೋತ್ಸವವನ್ನು ಜೂನ್‌ 4ರಂದು ಆಚರಿಸಲು ಅನುಮತಿ ಕೋರಿದ್ದರು. ಆದರೆ, ಪೊಲೀಸ್‌ ಆಯುಕ್ತರ ಕಚೇರಿಯು ಲಿಖಿತವಾಗಿ ಪ್ರತಿಕ್ರಿಯೆ ನೀಡಲು ವಿಫಲವಾಗಿದ್ದು, ಸಮಯದ ಕೊರತೆಯ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗದು ಎಂದು ಹೇಳಲು ವಿಫಲವಾಗಿತ್ತು.

ಇದರ ಮಧ್ಯೆ, ಆರ್‌ಸಿಬಿ ಮತ್ತು ಕೆಎಸ್‌ಸಿಎ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಭಿಮಾನಿಗಳನ್ನು ಟಿಕೆಟ್‌ ಅಥವಾ ಪಾಸ್‌ ನೀಡುವ ಹಿಂದಿನ ಪ್ರಕ್ರಿಯೆ ಪಾಲಿಸದೇ ಆಹ್ವಾನಿಸಿತ್ತು. ಇದಕ್ಕೆ ಅಗತ್ಯ‌ ಸಿದ್ಧತೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಈ ಅನಾಹುತ ಸಂಭವಿಸಿದೆ ಎಂದು ವಿವರಿಸಲಾಗಿದೆ.

Kannada Bar & Bench
kannada.barandbench.com