Justices B Veerappa and T Venkatesh Naik
Justices B Veerappa and T Venkatesh Naik 
ಸುದ್ದಿಗಳು

ಬೇಚರಾಕ್‌ ಗ್ರಾಮಗಳ ಪಟ್ಟಿ ಸಲ್ಲಿಸಲು ಕಾಲಾವಕಾಶ ಕೋರಿದ ಸರ್ಕಾರ; ತಾಳ್ಮೆ ಪರೀಕ್ಷಿಸಬೇಡಿ ಎಂದು ಗುಡುಗಿದ ಹೈಕೋರ್ಟ್‌

Bar & Bench

ರಾಜ್ಯದಲ್ಲಿರುವ ‘ಬೇಚರಾಕ್’ (ಜನವಸತಿ ಇಲ್ಲದ) ಗ್ರಾಮಗಳ ಪಟ್ಟಿಯನ್ನು ಸಲ್ಲಿಸಲು ಕಾಲಾವಕಾಶ ಕೋರಿದ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ನ್ಯಾಯಾಲಯದ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ವೆಂಕಟೇಶ್‌ ನಾಯಕ್‌ ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.

ಸರ್ಕಾರ ಪರ ವಕೀಲರು, ರಾಜ್ಯದಲ್ಲಿರುವ ಬೇಚರಾಕ್ ಗ್ರಾಮಗಳ ಪಟ್ಟಿ ಸಲ್ಲಿಸಲು ಕಾಲಾವಕಾಶ ಬೇಕು ಎಂದರು. ಇದಕ್ಕೆ ಕೋಪಗೊಂಡ ಪೀಠವು ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಒದಗಿಸಿಕೊಡುವುದು ಸರ್ಕಾರದ ಜವಾಬ್ದಾರಿ. 2019ರಲ್ಲಿ ನ್ಯಾಯಾಲಯ ಆದೇಶ ಮಾಡಿದೆ. ಇದನ್ನು ಪಾಲಿಸಿಲ್ಲ ಎಂದು 2020ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ. ಈಗ 2023 ಬಂದರೂ ಸರ್ಕಾರ ನ್ಯಾಯಾಂಗ ನಿಂದನೆ ಪ್ರಕರಣವನ್ನು ಬೆಳೆಸುತ್ತಲೇ ಹೋಗುತ್ತಿದೆ. ಅದರ ಬದಲು ಸ್ಮಶಾನ ಜಾಗ ಒದಗಿಸಲು ಆಗಲ್ಲ ಎಂದು ಅಫಿಡವಿಟ್‌ ಸಲ್ಲಿಸಿಬಿಡಿ. ಅದು ಬಿಟ್ಟು ಈ ರೀತಿ ಕಾಲ ಸಾಗ ಹಾಕಿ ನ್ಯಾಯಾಲಯದ ಜೊತೆ ಆಟ ಆಡಿದರೆ ಸುಮ್ಮನೆ ಬಿಡಲ್ಲ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ ಚಾಟಿ ಬೀಸಿತು.

ಅಲ್ಲದೇ, ಸರ್ಕಾರ ಕೆಲಸ ಮಾಡದಿದ್ದ ಕಾರಣ ಅನಿವಾರ್ಯವಾಗಿ ನ್ಯಾಯಾಲಯ ಕಾನೂನು ಸೇವಾ ಪ್ರಾಧಿಕಾರದ ನೆರವು ಕೇಳಬೇಕಾಗಿದೆ. ಕಾನೂನು ಸೇವಾ ಪ್ರಾಧಿಕಾರದವರು 40 ದಿನಗಳಲ್ಲಿ 5,200 ಗ್ರಾಮಗಳಿಗೆ ತಲುಪಿ ಮಾಹಿತಿ ಸಂಗ್ರಹಿಸಿದ್ದಾರೆ. ಅವರಿಗೆ ಸಾಧ್ಯವಾಗಿರುವುದು ಸರ್ಕಾರದ ಅಧಿಕಾರಿಗಳಿಗೆ ಯಾಕೆ ಸಾಧ್ಯವಾಗುವುದಿಲ್ಲ. ಅಸಲಿಗೆ ಇದಕ್ಕೆ ಅಧಿಕಾರಿಗಳಿಗೆ ಮನಸ್ಸು ಇರಬೇಕು ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಅಂತಿಮವಾಗಿ ಗುರುವಾರದೊಳಗೆ ಬೇಚರಾಕ್ ಗ್ರಾಮಗಳ ಪಟ್ಟಿ ನೀಡಬೇಕು ಎಂದು ಗಡುವು ನೀಡಿತು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಮುಂದೂಡಿತು.