Karnataka High Court 
ಸುದ್ದಿಗಳು

ಹಣಕಾಸು ನಿಗಮ ಸ್ಥಾಪಿಸಲು ಜಾತಿಗಳ ನಡುವೆ ತಾರತಮ್ಯ ಮಾಡಲಾಗದು: ಕರ್ನಾಟಕ ಹೈಕೋರ್ಟ್‌

ಪ್ರತ್ಯೇಕ ಜಾತಿಗಳು, ಸಮುದಾಯಗಳು ಅಥವಾ ಧರ್ಮಗಳ ಅನುಕೂಲಕ್ಕಾಗಿ ಸರ್ಕಾರ ರಚಿಸಿರುವ ನಿಗಮಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪಿಐಎಲ್‌ಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ನಡೆಸಿತು.

Bar & Bench

ಹಣಕಾಸು ನಿಗಮಗಳನ್ನು ಸ್ಥಾಪಿಸುವಲ್ಲಿ ಕೆಲವು ಸಮುದಾಯಗಳಿಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ.

ಪ್ರತ್ಯೇಕ ಜಾತಿಗಳು, ಸಮುದಾಯಗಳು ಅಥವಾ ಧರ್ಮಗಳ ಅನುಕೂಲಕ್ಕಾಗಿ ಸರ್ಕಾರ ರಚಿಸಿರುವ ನಿಗಮಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿರುವ ಪಿಐಎಲ್‌ಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ಪೀಠವು ನಡೆಸಿತು.

“ಈ ಜಾತಿಗಳನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ? ಆದ್ಯತೆ ನೀಡುವುದರ ಹಿಂದಿನ ಆಧಾರವೇನು? ಈ ಸಮುದಾಯಗಳನ್ನು ಆಯ್ಕೆ ಮಾಡಿಕೊಂಡಿರುವುದು ಏತಕ್ಕಾಗಿ… ಸಮುದಾಯವೊಂದರಗೆ ಜಾತಿ ಆಯ್ಕೆ ಮಾಡಿಕೊಳ್ಳಲು ಯಾವುದಾದರೂ ನೀತಿ ಅನುಸರಿಸಲಾಗಿದೆಯೇ?” ಎಂದು ಪೀಠ ಪ್ರಶ್ನಿಸಿದೆ.

ಜಾತಿ ಆಧಾರಿತ ಹಣಕಾಸು ಸಂಸ್ಥೆಗಳಾದ ರಾಜ್ಯ ಮರಾಠ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ರಾಜ್ಯ ಕ್ರಿಶ್ಚಿಯನ್‌ ಅಭಿವೃದ್ಧಿ ಮಂಡಳಿ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಪ್ರತಿನಿಧಿಸಿದ್ದರು.

ಬಜೆಟ್‌ ಹಂಚಿಕೆ ಆಧರಿಸಿ ನಿರ್ದಿಷ್ಟ ಜಾತಿಗಳಿಗೆ ಹಣಕಾಸು ಕಾರ್ಪೊರೇಶನ್‌ಗಳನ್ನು ಸೃಷ್ಟಿಸಲಾಗಿದೆ ಎಂದು ಹಾರನಹಳ್ಳಿ ಪೀಠಕ್ಕೆ ವಿವರಿಸಿದರು. ಕಾಲಾನುಕ್ರಮದಲ್ಲಿ ಈ ಕಾರ್ಪೊರೇಶನ್‌ಗಳನ್ನು ರಾಜ್ಯ ಸರ್ಕಾರವು ಹಂತಹಂತವಾಗಿ ಆರಂಭಿಸಲಿದೆ ಎಂದೂ ಅವರು ತಿಳಿಸಿದರು.

ಹಣಕಾಸು ಕಾರ್ಪೊರೇಶನ್‌ಗಳನ್ನು ಸೃಷ್ಟಿಸುವಾಗ ರಾಜ್ಯ ಸರ್ಕಾರವು ತಾರತಮ್ಯ ಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ. “ಮುಂದೊಮ್ಮೆ ರಾಜ್ಯ ಸರ್ಕಾರವು ತನ್ನ ಬಳಿ 1,000 ಕೋಟಿ ರೂಪಾಯಿ ಇದ್ದು, ಅದು ಕೇವಲ ನಾಲ್ಕು ಕಾರ್ಪೊರೇಶನ್‌ಗಳಿಗೆ ಮಾತ್ರ ಎನ್ನಬಹುದು. ರಾಜ್ಯ ಸರ್ಕಾರ ಹಾಗೆ ಮಾಡಬಹುದೇ? ರಾಜ್ಯ ಸರ್ಕಾರವು ಸಂವಿಧಾನದ ಚೌಕಟ್ಟಿಗೆ ಒಳಪಟ್ಟಿರುತ್ತದೆ. ಸರ್ಕಾರ ತಾರತಮ್ಯ ನೀತಿ ಅನುಸರಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಇಲ್ಲಿ ತಾರತಮ್ಯದ ಪ್ರಶ್ನೆ ಉದ್ಭವಿಸುವುದಿಲ್ಲ. ನಿಗಮ, ಮಂಡಳಿ ಸೃಷ್ಟಿಸುವುದರಲ್ಲಿ ತಪ್ಪು ಹುಡುಕಬಾರದು ಎಂದ ಹಾರನಹಳ್ಳಿ ಅವರು ಸದ್ಯದ ಮನವಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಯಾವ ವಿಭಾಗಕ್ಕೆ ಸಮಸ್ಯೆ ಉಂಟು ಮಾಡಲಾಗಿದೆ ಎಂಬುದರ ಕಡೆಗೆ ಬೆರಳು ಮಾಡಲಾಗಿಲ್ಲ ಎಂದರು. “ಜಾತಿ ಮತ್ತು ಸಮುದಾಯಗಳಿಗೆ ಏಕರೂಪದ ಪ್ರಯೋಜನಗಳನ್ನು ಅವರು ಬಯಸುತ್ತಿಲ್ಲ” ಎಂದ ಹಾರನಹಳ್ಳಿ ಅವರು, “ನ್ಯಾಯಾಂಗದ ಮಿತಿಯಲ್ಲಿ ಅನುಮಾನಿಸಬಹುದಾದ ವಿಚಾರಗಳು ಇವಲ್ಲ. ಬಜೆಟ್‌ಗೆ ಅನುಗುಣವಾಗಿ ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಯಾವ ಸಮುದಾಯಕ್ಕೆ ಎಷ್ಟು ಅನುದಾನ ನೀಡಬೇಕು ಎಂದು ಶಾಸನ ಸಭೆ ನಿರ್ಧರಿಸುತ್ತದೆ” ಎಂದರು.

ನಿಗಮಗಳನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರದಲ್ಲಿ ಯಾವುದೇ ಹಸ್ತಕ್ಷೇಪವು ಧನ ವಿನಿಯೋಗ ಕಾಯಿದೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದ ಹಾರನಹಳ್ಳಿ ಅವರು ತಮ್ಮ ವಾದವನ್ನು ಸಮರ್ಥಿಸಲು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನೂ ಉಲ್ಲೇಖಿಸಿದರು.

ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಪ್ರತಿವಾದ ಮಂಡಿಸಲಿದ್ದಾರೆ. ಜುಲೈ 15ಕ್ಕೆ ವಿಚಾರಣೆ ಮುಂದೂಡಲಾಗಿದೆ.