H K Patil, Law and Parliamentary Affairs Minister 
ಸುದ್ದಿಗಳು

ಮತಾಂತರ ನಿಷೇಧ, ಎಪಿಎಂಸಿ ಕಾಯಿದೆಗೆ ತರಲಾಗಿದ್ದ ತಿದ್ದುಪಡಿ ರದ್ದತಿಗೆ ಸಂಪುಟ ಸಭೆ ನಿರ್ಧಾರ; ಅಧಿವೇಶನದಲ್ಲಿ ಮಂಡನೆ

ಕರ್ನಾಟಕ ಹೈಕೋರ್ಟ್‌ನ ಆಡಳಿತ ವೆಚ್ಚ ಮಿತಿ, ಹಣಕಾಸು ಅಧಿಕಾರ ಹೆಚ್ಚಳ ಮಾಡಲು ಮತ್ತು ಹೆಚ್ಚಿನ ಅಧಿಕಾರಿಗಳ ನಿಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಇದನ್ನು ಹೈಕೋರ್ಟ್‌ಗೆ ತಿಳಿಸಲಾಗುವುದು ಎಂದ ಸಚಿವ ಎಚ್‌ ಕೆ ಪಾಟೀಲ್.‌

Bar & Bench

ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಮತಾಂತರ ನಿಷೇಧ ಕಾಯಿದೆ ಮತ್ತು ಎಪಿಎಂಸಿ ಕಾಯಿದೆಗೆ ತರಲಾಗಿದ್ದ ತಿದ್ದುಪಡಿ ರದ್ದುಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ವಿಧಾನಸೌಧದಲ್ಲಿ ಸಂಪುಟ ಸಭೆಯ ಬಳಿಕ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಅವರು ಒಟ್ಟು 17 ವಿಷಯಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗಿತ್ತು ಎಂದು ವಿವರಿಸಿದರು. ಈ ಪ್ರಮುಖ ವಿಚಾರಗಳು ಇಂತಿವೆ.

  • ಕರ್ನಾಟಕ ಧಾರ್ಮಿಕ, ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಅಧಿನಿಯಮ 2022 ಅನ್ನು ರದ್ದುಪಡಿಸಲಾಗಿದೆ. ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ 2023ಕ್ಕೆ ಅನುಮೋದನೆ ನೀಡಲಾಗಿದೆ. ಇದನ್ನು ಜುಲೈ 3ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮಂಡಿಸಲಾಗುವುದು.

  • ಎಪಿಎಂಸಿ ಕಾಯಿದೆಗೆ ಹಿಂದಿನ ಸರ್ಕಾರ ತಂದಿದ್ದ ತಿದ್ದುಪಡಿಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ.

  • ಕರ್ನಾಟಕ ಅಗ್ನಿಶಾಮಕ ತಿದ್ದುಪಡಿ ವಿಧೇಯಕ 2023 ಕ್ಕೆ ಅನುಮೋದನೆ ನೀಡಲಾಗಿದೆ. ಕಟ್ಟಡದ ಎತ್ತರ ಮೊದಲು 15 ಮೀಟರ್‌ ಇದ್ದರೆ ಮಾತ್ರ ಅನುಮತಿ ಪಡಯಬೇಕಿತ್ತು. ಈಗ ಅದನ್ನು 21 ಮೀಟರ್‌ಗೆ ಹೆಚ್ಚಳ ಮಾಡಲಾಗಿದೆ.

  • ಕರ್ನಾಟಕ ಅನರ್ಹತೆ ನಿಷೇಧ ಕಾಯಿದೆಗೆ (ಪ್ರಿವೆನ್ಷನ್‌ ಆಫ್‌ ಡಿಸ್‌ಕ್ವಾಲಿಫಿಕೇಶನ್‌ ಆಕ್ಟ್‌) ತಿದ್ದುಪಡಿ ಮಾಡಿದ್ದೇವೆ. ಇದು ರಾಜಕೀಯ ಕಾರ್ಯದರ್ಶಿ ನೇಮಕಾತಿ ಮಾತ್ರ ಒಳಗೊಂಡಿತ್ತು. ಇದಕ್ಕೆ ಕಾನೂನು ಸಲಹೆಗಾರರ ಹುದ್ದೆಯನ್ನು ಸೇರ್ಪಡೆ ಮಾಡಲಾಗಿದೆ. ಈ ತಿದ್ದುಪಡಿ ಮಸೂದೆಯ ಸಂಪುಟ ಒಪ್ಪಿಗೆ ನೀಡಿದೆ.

  • ಕರ್ನಾಟಕ ಹೈಕೋರ್ಟ್‌ನ ಆಡಳಿತ ವೆಚ್ಚ ಮಿತಿ, ಹಣಕಾಸು ಅಧಿಕಾರ ಹೆಚ್ಚಳ ಮಾಡಲು ಮತ್ತು ಹೆಚ್ಚಿನ ಅಧಿಕಾರಿಗಳ ನಿಯೋಜನೆಗೆ ಒಪ್ಪಿಗೆ. ಈ ಒಪ್ಪಿಗೆಯನ್ನು ಹೈಕೋರ್ಟ್‌ಗೆ ತಿಳಿಸಲಾಗುವುದು.

  • ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸಂಪುಟ ಉಪ ಸಮಿತಿ ರಚಿಸಲು ಒಪ್ಪಿಗೆ ನೀಡಲಾಗಿದೆ. ಈ ಸಮಿತಿ ರಚಿಸಲು ಮುಖ್ಯಮಂತ್ರಿ ಅವರಿಗೆ ಅಧಿಕಾರ ನೀಡಲಾಗಿದೆ.

  • ನಾಡಗೀತೆಯ ಹಾಡಿ ಬಳಿಕ ಸಂವಿಧಾನದ ಪೀಠಿಕೆಯನ್ನು ಶಾಲೆ, ಕಾಲೇಜುಗಳಲ್ಲಿ ಓದುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಪ್ರಾರ್ಥನೆ ಬಳಿಕ ಕಡ್ಡಾಯವಾಗಿ ಸಂವಿಧಾನ ಪೀಠಿಕೆ ಓದಬೇಕು. ಸರ್ಕಾರಿ, ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಈ ನಿಯಮ ಅನ್ವಯ. ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆಯ ಫೋಟೊ ಅಳವಡಿಕೆಗೆ ಒಪ್ಪಿಗೆ.

  • ಕೆಪಿಎಸ್‌ಸಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಮುಖ್ಯಮಂತ್ರಿಗಳಿಗೆ ಕೆಪಿಎಸ್‌ಸಿ ಸದಸ್ಯರನ್ನು ನೇಮಕ ಮಾಡಲು ಅಧಿಕಾರ ನೀಡಲಾಗಿದೆ. ಅಲ್ಲಿ ಮೂರು ಹುದ್ದೆಗಳಿವೆ.

  • ಡಾ. ಮೈತ್ರಿ ಅವರನ್ನು ಕೆಎಎಸ್‌ ಕಿರಿಯ ಶ್ರೇಣಿಗೆ ನೇಮಕ ಮಾಡುವ ಪ್ರಸ್ತಾವದ ಕುರಿತು ಚರ್ಚಿಸಲಾಗಿದ್ದು, ಇದನ್ನು ಕಾನೂನು ಇಲಾಖೆಯ ಪರಿಶೀಲನೆಗೆ ಮಾಡಬೇಕಿರುವುದರಿಂದ ಅದನ್ನು ಮುಂದೂಡಲಾಗಿದೆ. 2011ನೇ ಬ್ಯಾಚ್‌ನ ಗೆಜೆಟೆಡ್‌ ಆಫೀಸರ್‌ಗಳ ಸಮಸ್ಯಾತ್ಮಕ ಮೀಸಲಾತಿಗೆ ಇದು ಸಂಬಂಧಿಸಿದ್ದಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್‌ ಮುನಿಯಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಮತ್ತು ಸಮಾಜ ಕಲ್ಯಾಣ ಸಚಿವ ಎಚ್‌ ಸಿ ಮಹದೇವಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.