Renukaswamy 
ಸುದ್ದಿಗಳು

ರೇಣುಕಾಸ್ವಾಮಿ ಕೊಲೆ: ಕಾಮಾಕ್ಷಿಪಾಳ್ಯ ಹಿಂದಿನ ಇನ್‌ಸ್ಪೆಕ್ಟರ್‌ ಗಿರೀಶ್‌ ನಾಯ್ಕ್‌ ಆರೋಪಿಯಾಗಿಸಲು ಸರ್ಕಾರ ಆಕ್ಷೇಪ

“ಅಪರಾಧದಲ್ಲಿ ಭಾಗಿಯಾಗಿದ್ದಲ್ಲಿ ಮಾತ್ರ ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 319 ಅನ್ವಯ ತನಿಖಾಧಿಕಾರಿಯನ್ನು ಆರೋಪಿ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿ ಯಾವ ಕಾರಣಕ್ಕೆ ತನಿಖಾಧಿಕಾರಿಯನ್ನು ಆರೋಪಿ ಮಾಡಬೇಕು” ಎಂದು ಪ್ರಶ್ನಿಸಿದ ಎಸ್‌ಪಿಪಿ.‌

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಒದಗಿಸಿದ ಆರೋಪ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂಬ ಮೂರನೇ ಆರೋಪಿ ಪವನ್‌ ಮನವಿಗೆ ರಾಜ್ಯ ಸರ್ಕಾರ ಬಲವಾಗಿ ಆಕ್ಷೇಪಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಐ ಪಿ ನಾಯ್ಕ್‌ ವಿಚಾರಣೆ ನಡೆಸಿದರು.

ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ  ಸೃಷ್ಟಿಸಿದ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ಆವರಣ ಪ್ರವೇಶಿಸುವುದಕ್ಕೆ ಅನುಮತಿ ನಿರಾಕರಿಸಿದ ಬಗ್ಗೆ ವಿವರಣೆ ನೀಡುವಂತೆ ಆ ಠಾಣೆಯ ಇನ್‌ಸ್ಪೆಕ್ಟರ್‌ಗೆ ಬೆಂಗಳೂರು ನ್ಯಾಯಾಲಯ ನಿರ್ದೇಶಿಸಿತ್ತು.  ಜೊತೆಗೆ ಸುಳ್ಳು ಸಾಕ್ಷ್ಯ ಸೃಷ್ಟಿ ಮಾಡಿದ್ದಕ್ಕೆ ಮೊದಲಿಗೆ ಪ್ರಕರಣದ ತನಿಖೆ ನಡೆಸಿದ್ದ‌ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂದು ಪವನ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಬುಧವಾರ ಬಲವಾಗಿ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌ ಅವರು “ಅಪರಾಧದಲ್ಲಿ ಭಾಗಿಯಾಗಿದ್ದಲ್ಲಿ ಮಾತ್ರ ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 319 ಅನ್ವಯ ತನಿಖಾಧಿಕಾರಿಯನ್ನು ಆರೋಪಿ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿ ಯಾವ ಕಾರಣಕ್ಕೆ ತನಿಖಾಧಿಕಾರಿಯನ್ನು ಆರೋಪಿ ಮಾಡಬೇಕು” ಎಂದು ಪ್ರಶ್ನಿಸಿದರು.

ಅಲ್ಲದೇ, “ತನಿಖೆಯ ವೇಳೆ 2024ರ ಜೂನ್‌ 11ರಂದು ರಾತ್ರಿ 1 ಗಂಟೆಗೆ ವಶಪಡಿಸಿಕೊಂಡ ಎಂಟು ಮೊಬೈಲ್‌ಗಳು ಆರೊಪಿಗಳದ್ದೇ ಆಗಿದೆ. ಅವುಗಳ ಮಹಜರು ನಡೆಸಿ ಜಫ್ತಿ ಮಾಡಲಾಗಿದೆ.  ಆ ಮೊಬೈಲ್‌ಗಳಿಂದ ಡಿಜಿಟಲ್ ಸಾಕ್ಷ್ಯ ಸಂಗ್ರಹಿಸಲಾಗಿದೆ. ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಈ ರೀತಿಯ ಅರ್ಜಿಗಳನ್ನ ಸಲ್ಲಿಸಲಾಗಿದ್ದು, ಅವುಗಳಿಗೆ  ಮಾನ್ಯತೆ ನೀಡಬಾರದು” ಎಂದು ಸರ್ಕಾರಿ ಅಭಿಯೋಜಕರು ನ್ಯಾಯಾಲಯವನ್ನು ಕೋರಿದರು.

ಕಾಮಾಕ್ಷಿಪಾಳ್ಯ ಠಾಣೆಗೆ ಭೇಟಿ ನೀಡಲು ಪವನ್ ಪರ ವಕೀಲ ಸುಧನ್ವಗೆ ಅವಕಾಶ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಸನ್ನಕುಮಾರ್‌ ಅವರು “ವಕೀಲರ ಭೇಟಿಯಿಂದ ಕಲೆಹಾಕುವ ಸಾಕ್ಷ್ಯಕ್ಕೆ ಯಾವ ಮಾನ್ಯತೆಯಿದೆ. ಠಾಣೆಯಲ್ಲಿ ಸೂಕ್ಷ್ಮ ಪ್ರಕರಣಗಳ ತನಿಖೆ ನಡೆಯುತ್ತಿರುತ್ತವೆ. ಅತ್ಯಾಚಾರ ಹಾಗೂ ಪೋಕ್ಸೊ ಪ್ರಕರಣದ ಆರೋಪಿಗಳು ಅಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ವಕೀಲರ ತಂಡಕ್ಕೆ ಠಾಣೆಗೆ ಭೇಟಿಗೆ ಅವಕಾಶ ನೀಡಲು ಹೇಗೆ ಸಾಧ್ಯ‌” ಎಂದು ಸರ್ಕಾರಿ ಅಭಿಯೋಕರು ಖಾರವಾಗಿ ಪ್ರಶ್ನಿಸಿದರು. ಅಂತಿಮವಾಗಿ ವಿಚಾರಣೆಯನ್ನು ಮಾರ್ಚ್‌ 9ಕ್ಕೆ ನ್ಯಾಯಾಲಯ ಮುಂದೂಡಿದೆ.

977 ಪ್ರಕರಣಗಳು ವಿಚಾರಣೆಗೆ ಬಾಕಿ

ಪ್ರಕರಣವನ್ನು ಪ್ರತಿ ದಿನ ವಿಚಾರಣೆ ಮಾಡುವಂತೆ ಕೋರಿರುವ ದರ್ಶನ್ ಅರ್ಜಿಗೆ  ಆಕ್ಷೇಪಣೆ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು, ಪ್ರತಿದಿನ ವಿಚಾರಣೆ ಅಗತ್ಯವಿಲ್ಲ. ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಲಷ್ಟೇ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.  ಇದೇ ನ್ಯಾಯಾಲಯದಲ್ಲಿ 977 ಪ್ರಕರಣಗಳ ವಿಚಾರಣೆ (ಟ್ರಯಲ್) ನಡೆಯುತ್ತಿವೆ. ಆ ಎಲ್ಲಾವನ್ನು ಬಿಟ್ಟು ಈ ಪ್ರಕರಣವನ್ನ ಏಕೆ ಪ್ರತಿದಿನ ವಿಚಾರಣೆ ಮಾಡಬೇಕು? ಈಗಾಗಲೇ ವಾರಕ್ಕೆ 2 ದಿನ ವಿಚಾರಣೆ ನಡೆಯುತ್ತಿದೆ. ಅದನ್ನೇ ಮುಂದುವರಿಸಬೇಕು. ಹೀಗಾಗಿ, ಪ್ರತಿದಿನ ವಿಚಾರಣೆಗೆ ಅವಕಾಶ ನೀಡಬಾರದು ಎಂದು ಕೋರಿದರು.

ವಿಚಾರಣೆ ವೇಳೆ ಆರೋಪಿಗಳನ್ನ ಖುದ್ದು ಕೋರ್ಟ್ ಗೆ ಹಾಜರುಪಡಿಸಲು ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂಬ ಆರೋಪಿಗಳ ಮನವಿ ತಿರಸ್ಕರಿಸಬೇಕು. ಆರೋಪಿಗಳನ್ನ ಕೋರ್ಟ್‌ಗೆ ಹಾಜರುಪಡಿಸಿದಾಗ ಸಾಕಷ್ಡು ಜನಜಂಗುಳಿ ಆಗುತ್ತದೆ. ಆರೋಪಿಗಳ ವಿಚಾರಣೆ ವಿಡಿಯೊ ಕಾನ್ಫರೆನ್ಸ್‌ನಲ್ಲಿಯೇ ವಿಚಾರಣೆ ನಡೆಯಲಿ ಎಂದರು.

ಜೈಲಿನೊಳಗೆ ಭೇಟಿ ಮಾಡಲು ತನ್ನ  ಕುಟುಂಬಸ್ಥರಿಗೆ ಅವಕಾಶ ನೀಡಲು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಗೂ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, ಜೈಲಿನೊಳಗಿನ ಸಂದರ್ಶನಕ್ಕೆ ಅವಕಾಶ ಕೋರಿ ಆರೋಪಿಗಳು ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿಲ್ಲ.‌ ಜೈಲು ಕೈಪಿಡಿ ಪ್ರಕಾರ ಜೈಲು ಅಧಿಕಾರಿಗಳಿಗೆ ಮೊದಲು ಮನವಿ ಮಾಡಬೇಕು. ಆ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿದರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಸಣ್ಣ ಪುಟ್ಟ ವಿಚಾರಕ್ಕೂ ದರ್ಶನ್ ಪದೇ ಪದೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನ್ಯಾಯಾಲಯದ  ಸಮಯ ಹಾಳು ಮಾಡುತ್ತಿದ್ದಾರೆ. ಹೀಗಾಗಿ, ಅವರ ಅರ್ಜಿಗೆ ಮಾನ್ಯತೆ ನೀಡಬಾರದು ಎಂದು ಮನವಿ ಮಾಡಿದರು.