Kannada and Karnataka High Court 
ಸುದ್ದಿಗಳು

[ಕನ್ನಡ ಕಡ್ಡಾಯ] ರಾಜ್ಯ ಸರ್ಕಾರ ತನ್ನ ನೀತಿ ಮರು ಪರಿಶೀಲಿಸದಿದ್ದರೆ ತಡೆಯಾಜ್ಞೆ ನೀಡಬೇಕಾಗುತ್ತದೆ: ಹೈಕೋರ್ಟ್‌

“ಸರ್ಕಾರದ ಉದ್ದೇಶ ಏನೇ ಆಗಿದ್ದರೂ ಕನ್ನಡ ಅಧ್ಯಯನ ಮಾಡಬೇಕು ಎಂದು ಒತ್ತಿ ಹೇಳುವಂತಿಲ್ಲ. ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಯುವುದನ್ನು ನೀವು ಕಡ್ಡಾಯಗೊಳಿಸಲಾಗದು” ಎಂದ ಪೀಠ.

Bar & Bench

“ಪದವಿ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಡ್ಡಾಯಗೊಳಿಸಲಾಗದು. ರಾಜ್ಯ ಸರ್ಕಾರವು ಕನ್ನಡ ಕಡ್ಡಾಯ ಮಾಡಿರುವ ತನ್ನ ನೀತಿಯನ್ನು ಮರುಪರಿಶೀಲಿಸಬೇಕು. ಕನ್ನಡ ಕಲಿಯಬೇಕು ಎಂದು ಸರ್ಕಾರ ಒತ್ತಿ ಹೇಳಲಾಗದು. ನಿಮ್ಮ (ಸರ್ಕಾರ) ನೀತಿಯನ್ನು ಮರು ಪರಿಶೀಲಿಸದಿದ್ದರೆ ನಾವು ತಡೆಯಾಜ್ಞೆ ನೀಡಬೇಕಾಗುತ್ತದೆ” ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ರಾಜ್ಯ ಸರ್ಕಾರವು ಪದವಿ ಹಂತದಲ್ಲಿ ಕನ್ನಡ ಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ಆರಂಭಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಆರಂಭಿಕರಿಗೆ ಕಾರ್ಯನಿರ್ವಹಣೆಗೆ ಅಗತ್ಯವಾದ ಕನ್ನಡವನ್ನು ಕಲಿಸಲಾಗುತ್ತದೆ ವಿನಾ ಸಾಂಪ್ರದಾಯಿಕ ರೀತಿಯಲ್ಲಿ ಕ್ರಮಬದ್ಧವಾಗಿ ಕನ್ನಡ ಬೋಧಿಸುವುದಿಲ್ಲ. ಇಡೀ ಪದವಿ ಅವಧಿಯ ಆರು ತಿಂಗಳು ಮಾತ್ರ ಕನ್ನಡ ಬೋಧಿಸಲಾಗುತ್ತದೆ. ಇದನ್ನು ನಾವು ಇನ್ನಷ್ಟೇ ಜಾರಿ ಮಾಡಬೇಕಿರುವುದರಿಂದ ತಡೆಯಾಜ್ಞೆ ಪ್ರಶ್ನೆ ಉದ್ಭವಿಸುವುದಿಲ್ಲ. ಕರ್ನಾಟಕದಲ್ಲೇ ಇದ್ದು, ಇಲ್ಲೇ ಉದ್ಯೋಗ ಪಡೆಯಲು ಬಯಸಿದರೆ ಇದರಿಂದ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರವು ತನ್ನ ನೀತಿಯ ಭಾಗವಾಗಿ ಕನ್ನಡ ಕಲಿಯುವುದನ್ನು ಕಡ್ಡಾಯಗೊಳಿಸಿದೆ” ಎಂದು ಸಮರ್ಥಿಸಿದರು.

ಇದಕ್ಕೆ ಆಕ್ಷೇಪಿಸಿದ ಪೀಠವು “ಸರ್ಕಾರದ ಉದ್ದೇಶ ಏನೇ ಆಗಿದ್ದರೂ ಕನ್ನಡ ಅಧ್ಯಯನ ಮಾಡಬೇಕು ಎಂದು ಒತ್ತಿ ಹೇಳುವಂತಿಲ್ಲ. ಉದ್ಯೋಗ ಪಡೆಯಲು ಕನ್ನಡ ಕಲಿಯಬೇಕು ಎಂಬ ನಿಮ್ಮ ಮಾತು ಒತ್ತಟ್ಟಿಗಿರಲಿ. ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದ ಮಾತ್ರಕ್ಕೆ ಕನ್ನಡ ಕಲಿಯಲೇಬೇಕು ಎಂದೇನಿಲ್ಲ. ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಯುವುದನ್ನು ನೀವು ಕಡ್ಡಾಯಗೊಳಿಸಲಾಗದು. ಉದ್ಯೋಗದ ವಿಚಾರದಲ್ಲಿ ನೀವು ಷರತ್ತು ವಿಧಿಸಬಹುದು. ವಿದ್ಯಾರ್ಥಿಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರ ಬಗ್ಗೆ ಅವರು ಗಮನಹರಿಸಿಕೊಳ್ಳುತ್ತಾರೆ” ಎಂದಿತು.

ಇದಕ್ಕೂ ಮುನ್ನ ನಾವದಗಿ ಅವರು “ಸರ್ಕಾರದ ಆಕ್ಷೇಪಾರ್ಹವಾದ ಆದೇಶದ ಜಾರಿಯಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಕಾಲೇಜು, ವಿಶ್ವವಿದ್ಯಾಲಯಗಳು, ವಿಶಾಲ ನೆಲೆಯಲ್ಲಿ ಸಮಾಜಕ್ಕೆ ಸಮಸ್ಯೆಯಾಗುತ್ತದೆ ಎಂದು ಅರ್ಜಿದಾರರಾದ ಸಂಸ್ಕೃತ ಭಾರತಿ ಟ್ರಸ್ಟ್‌ ಮತ್ತಿತರರು ಮನವಿಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಯಾರಿಗಾದರೂ ಸಮಸ್ಯೆಯಾದರೆ ವಿದ್ಯಾರ್ಥಿಗಳು, ಶಿಕ್ಷಕರು ನ್ಯಾಯಾಲಯದ ಮುಂದೆ ಬರಬೇಕೆ ವಿನಾ ಪಿಐಎಲ್‌ ಮಾದರಿಯಲ್ಲಿ ಅಲ್ಲ. ಕನ್ನಡವನ್ನು ಕಡ್ಡಾಯಗೊಳಿಸಿರುವುದಕ್ಕೆ ಆಕ್ಷೇಪವಿರಬಹುದು. ನನಗೆ ಇರುವ ಮಾಹಿತಿಯ ಪ್ರಕಾರ ಕನ್ನಡವನ್ನು ಪದವಿ ಹಂತದಲ್ಲಿ ಒಂದು ಬಾರಿ ಭಾಷೆಯನ್ನಾಗಿ ಬೋಧಿಸಲಾಗುತ್ತದೆ” ಎಂದರು.

ಇದಕ್ಕೆ ಪೀಠವು “ವಿದ್ಯಾರ್ಥಿಗಳು ಮತ್ತು ಶಿಕ್ಷಕರೇ ಸರ್ಕಾರದ ಆದೇಶವನ್ನು ಪ್ರಶ್ನಿಸಬೇಕು ಎಂದು ಬಯಸಲಾಗದು” ಎಂದಿತು. ಆಗ ನಾವದಗಿ ಅವರು “ಸರ್ಕಾರದ ಜೊತೆ ಸಮಾಲೋಚಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ಶೈಕ್ಷಣಿಕ ವರ್ಷ ಆರಂಭವಾಗಿದೆ. ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಹಾಗಾಗಿ, ಪ್ರಕರಣಕ್ಕೆ ಆದ್ಯತೆ ನೀಡಬೇಕು” ಎಂದು ಪೀಠವನ್ನು ಕೋರಿದರು.

ವಾದ-ಪ್ರತಿವಾದವನ್ನು ಆಲಿಸಿದ ಪೀಠವು ಪ್ರಕರಣದ ವಿಚಾರಣೆಯನ್ನು ನವೆಂಬರ್‌ 10ಕ್ಕೆ ಮುಂದೂಡಿತು.