ಪದವಿ ಶಿಕ್ಷಣದಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯ ಮಾಡುವುದರಿಂದ ಸಮಸ್ಯೆಗೆ ನಾಂದಿ: ಹೈಕೋರ್ಟ್‌ ಕಳವಳ

ರಾಜ್ಯ ಸರ್ಕಾರವು ಪದವಿ ಹಂತದಲ್ಲಿ ಕನ್ನಡ ಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿತು.
Kannada, NEP-2020 and Karnataka HC
Kannada, NEP-2020 and Karnataka HC

“ಕರ್ನಾಟಕ ಸರ್ಕಾರವು ಪದವಿ ಹಂತದಲ್ಲಿ ಕನ್ನಡ ಭಾಷಾ ವಿಷಯಯನ್ನು ಕಡ್ಡಾಯಗೊಳಿಸಿರುವುದು ಸಮಸ್ಯೆಗಳನ್ನು ಹುಟ್ಟುಹಾಕಲಿದೆ. ಇದರಿಂದ ತಮಿಳುನಾಡು ತಮಿಳನ್ನು, ಉತ್ತರ ಪ್ರದೇಶ ಹಿಂದಿಯನ್ನು ಕಡ್ಡಾಯ ಮಾಡಬಹುದು. ಪ್ರತಿ ರಾಜ್ಯವೂ ತನ್ನ ಭಾಷೆಯನ್ನು ಹೇರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ” ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ರಾಜ್ಯ ಸರ್ಕಾರವು ಪದವಿ ಹಂತದಲ್ಲಿ ಕನ್ನಡ ಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶ್‌ನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು ಪದವಿ ಹಂತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿ ಉನ್ನತ ಶಿಕ್ಷಣ ಇಲಾಖೆಯು ಆಗಸ್ಟ್‌ 7ರಂದು ಆದೇಶ ಹೊರಡಿಸಿದೆ. ಇದನ್ನು ಸೆಪ್ಟೆಂಬರ್‌ 15ರ ಆದೇಶದಲ್ಲಿ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವುದರಿಂದ 12ನೇ ತರಗತಿ ಪೂರೈಸಿ ಕರ್ನಾಟಕಕ್ಕೆ ಶಿಕ್ಷಣ ಮುಂದುವರಿಸಲು ಬರುವ ಇತರೆ ರಾಜ್ಯಗಳ ವಿದ್ಯಾರ್ಥಿಗಳು ಕನ್ನಡವನ್ನು ಕಲಿತಿರುವುದಿಲ್ಲ. ಇದರಿಂದ ಪದವಿ ಹಂತದಲ್ಲಿ ಅವರಿಗೆ ಸಮಸ್ಯೆಯಾಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) – 2020ರಲ್ಲಿ ಪ್ರಾದೇಶಿಕ ಭಾಷೆಯನ್ನು ಕಡ್ಡಾಯ ಭಾಷೆಯನ್ನಾಗಿ ಕಲಿಯಬೇಕು ಎಂದು ಹೇಳಿಲ್ಲ ಎಂದು ವಿವರಿಸಿದ್ದಾರೆ. ರಾಜ್ಯ ಸರ್ಕಾರದ ಆಕ್ಷೇಪಾರ್ಹ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದ್ದಾರೆ. ಈ ಸಂಬಂಧ ನಾಳೆ ವಿಚಾರಣೆ ಮುಂದುವರಿಸಲಾಗುವುದು” ಎಂದು ಪೀಠ ಆದೇಶದಲ್ಲಿ ಹೇಳಿದೆ.

ವಿಚಾರಣೆಯಲ್ಲಿ ಭಾಗಿಯಾಗದಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಕಲಾಪದ ಅಂತ್ಯದಲ್ಲಿ “ಪದವಿ ಹಂತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿರುವ ಆದೇಶವು ಸರ್ಕಾರದ ನೀತಿಯ ಭಾಗವಾಗಿದೆ. ನಮ್ಮ ರಾಜ್ಯಕ್ಕೆ ಬರುವವರು ನಮ್ಮ ಭಾಷೆಯನ್ನು ಅಧ್ಯಯನ ಮಾಡಬೇಕು. ಒಂದು ಭಾಷೆ ಕಲಿಯುವುದು ಅಸಮರ್ಥನೀಯ ಹೇಗಾಗುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಹೊರ ರಾಜ್ಯಗಳಿಂದ ಬಂದು ಇಲ್ಲಿ ಪದವಿ ಶಿಕ್ಷಣ ಪಡೆಯುವವರಿಗೆ ಸಾಮಾನ್ಯ ಪಠ್ಯಕ್ರಮ ಇರುವುದಿಲ್ಲ. ಅವರಿಗೆ ಪ್ರತ್ಯೇಕ ಪಠ್ಯಕ್ರಮ ಇರುತ್ತದೆ. ಪ್ರಕರಣವು ಗಂಭೀರವಾದ ಪರಿಣಾಮಗಳನ್ನು ಉಂಟು ಮಾಡುತ್ತದೆ. ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ ಮಾಡುತ್ತಿದ್ದೇನೆ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ವಿಸ್ತೃತವಾಗಿ ವಾದ ಮಂಡಿಸಬೇಕಿದೆ. ನ್ಯಾಯಾಲಯದ ರಜಾ ಕಾಲ ಮುಗಿದ ಮೇಲೆ ಪ್ರಕರಣವನ್ನು ನಡೆಸಬಹುದು. ಇಷ್ಟು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವೇನಿದೆ. ನಮ್ಮ ವಾದವನ್ನು ಆಲಿಸದೇ ಮಧ್ಯಂತರ ಆದೇಶ ಮಾಡಬಾರದು” ಎಂದು ಪೀಠವನ್ನು ಕೋರಿದರು. ಇದಕ್ಕೆ ಪೀಠವು “ನಿಮ್ಮ ವಾದವನ್ನು ಆಲಿಸದೇ ಯಾವುದೇ ಮಧ್ಯಂತರ ಆದೇಶ ಮಾಡುವುದಿಲ್ಲ” ಎಂದು ಅಭಯ ನೀಡಿತು.

ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ದೇಶದಲ್ಲಿ ಕಡ್ಡಾಯವಾಗಿ ಇಂಥದ್ದೇ ಭಾಷೆ ಕಲಿಯಬೇಕು ಎಂದು ಹೇಳಿಲ್ಲ. ಸರ್ಕಾರದ ಆದೇಶವು 2021-22ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರಲಿದ್ದು, ಆದೇಶದ ಪ್ರಕಾರ ದೆಹಲಿಯಿಂದ ಬಂದು ಬಿ ಎ ಕೋರ್ಸ್‌ಗೆ ಕರ್ನಾಟಕದಲ್ಲಿ ವಿದ್ಯಾರ್ಥಿಯೊಬ್ಬ ಪ್ರವೇಶ ಪಡೆದರೆ ಅವರು ಕನ್ನಡ ಭಾಷಾ ವಿಷಯ ಅಧ್ಯಯನ ಮಾಡುವುದು ಕಡ್ಡಾಯವಾಗುತ್ತದೆ. ಇದು ಸರಿಯಲ್ಲ” ಎಂದರು.

ಮುಂದುವರಿದು, “ಸರ್ಕಾರದ ಆದೇಶದಿಂದ ಶಿಕ್ಷಕರಿಗೆ ಸಮಸ್ಯೆಯಾಗುತ್ತದೆ. ಹಲವು ಕಾಲೇಜುಗಳು ಹಿಂದಿ, ಉರ್ದು, ತೆಲುಗು, ಸಂಸ್ಕೃತ ಹೀಗೆ ಹಲವು ಭಾಷೆಗಳ ಶಿಕ್ಷರನ್ನು ನೇಮಕ ಮಾಡಿಕೊಂಡಿವೆ. ಕನ್ನಡ ಕಡ್ಡಾಯಗೊಳಿಸಿದರೆ ಬೇರೆ ಭಾಷಾ ವಿಷಯಗಳನ್ನು ಓದುವ ವಿದ್ಯಾರ್ಥಿಗಳೇ ಇಲ್ಲವಾಗುತ್ತಾರೆ. ಇದರಿಂದ ಕನ್ನಡೇತರ ಭಾಷಾ ವಿಷಯಗಳ ಶಿಕ್ಷಕರು ಸಹಜವಾಗಿ ತಮ್ಮ ಜೀವನಾಧಾರವನ್ನು ಕಳೆದುಕೊಳ್ಳುತ್ತಾರೆ” ಎಂದು ಪೀಠಕ್ಕೆ ವಿವರಿಸಿದರು.

“ಎನ್‌ಇಪಿ ಅಡಿ ಪ್ರಾದೇಶಿಕ ಭಾಷೆ ಅಧ್ಯಯನ ಕಡ್ಡಾಯ ಮಾಡಲಾಗಿಲ್ಲ. ಹಿಂದೆ ಬಿ ಎ ಕೋರ್ಸ್‌ ಅಧ್ಯಯನ ಮಾಡುವಾಗ ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಅಧ್ಯಯನ ಮಾಡಬೇಕಿತ್ತು. ಎನ್‌ಇಪಿ-2020ರಲ್ಲಿ ಉದಾಹರಣೆಗೆ ವಿದ್ಯಾರ್ಥಿಗಳು ಗಣಿತ, ಹಿಂದಿ, ಇತಿಹಾಸ ಅಧ್ಯಯನ ಮಾಡಬಹುದಾಗಿದೆ. ಒಂದೊಮ್ಮೆ ತಮಿಳುನಾಡಿನ ವಿದ್ಯಾರ್ಥಿಯೊಬ್ಬ 12ನೇ ತರಗತಿ ಶಿಕ್ಷಣ ಪೂರೈಸಿ ಕರ್ನಾಟಕದಲ್ಲಿ ಶಿಕ್ಷಣ ಮುಂದುವರಿಸಲು ಬಂದರೆ ಆತ ಕನ್ನಡ ಭಾಷಾ ಅಧ್ಯಯನ ಮಾಡುವುದು ಕಡ್ಡಾಯವಾಗಿರುತ್ತದೆ. ಪ್ರಾಯೋಗಿಕವಾಗಿ ಇದು ಕಷ್ಟ. ಇದರಿಂದ ನಾವು ದ್ವೀಪ ಸೃಷ್ಟಿಸಿದಂತಾಗುತ್ತದೆ” ಎಂದರು.

Also Read
ಶಾಲೆಗಳಲ್ಲಿ ಕನ್ನಡ ಕಡ್ಡಾಯ ಪ್ರಶ್ನಿಸಿ ಮನವಿ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್‌

ಆಗ ಪೀಠವು ಕಾನ್ವೆಂಟ್‌, ಶಾಲೆಗಳಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯಗೊಳಿಸಲಾಗಿದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ನಾಗಾನಂದ್‌ ಅವರು “ಕನ್ನಡವನ್ನು ಕಡ್ಡಾಯಗೊಳಿಸಲಾಗಿಲ್ಲ. ಶಿಕ್ಷಣ ನೀಡುವ ಮಾಧ್ಯಮದ ಕುರಿತ ವಿವಾದ ಈ ನ್ಯಾಯಾಲಯದ ಮುಂದಿದೆ. ಶಾಲೆಯಲ್ಲಿ ಮೂರು ಭಾಷೆಯ ವಿಧಾನ ಅಳವಡಿಸಿಕೊಳ್ಳಲಾಗಿದೆ. ಒಂದನೇ ಭಾಷೆ ಇಂಗ್ಲಿಷ್‌, ಎರಡನೇ ಮತ್ತು ಮೂರನೇ ಭಾಷೆ ಇರುತ್ತದೆ. ಕನ್ನಡವನ್ನು ಆಯ್ಕೆಯನ್ನಾಗಿ ಮಾಡಬಹುದೇ ವಿನಾ ಕಡ್ಡಾಯ ಮಾಡಲಾಗದು. ಇದರಿಂದ 1.32 ಲಕ್ಷ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ” ಎಂದು ನ್ಯಾಯಾಲಯದ ಗಮನಸೆಳೆದರು.

ವಿದ್ಯಾರ್ಥಿಯು ಇತರೆ ವಿಷಯಗಳ ಜೊತೆ ಎರಡು ಭಾಷಾ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇದರಲ್ಲಿ ಒಂದು ಕನ್ನಡ ಅಧ್ಯಯನ ಕಡ್ಡಾಯವಾಗಿರುತ್ತದೆ ಎಂದು ರಾಜ್ಯ ಸರ್ಕಾರವು ಆಗಸ್ಟ್‌ 7ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಕನ್ನಡ ಭಾಷಾ ವಿಷಯವನ್ನು ಕಡ್ಡಾಯಗೊಳಿಸುವುದರಿಂದ ಸಂವಿಧಾನದ ಅಡಿ ದೊರೆತಿರುವ ಇಚ್ಛೆಯ ಭಾಷಾ ಹಕ್ಕನ್ನು ಕಸಿದಂತಾಗುತ್ತದೆ ಎಂದು ಅರ್ಜಿದಾರರು ಮನವಿಯಲ್ಲಿ ಆಕ್ಷೇಪಿಸಿದ್ದಾರೆ.

ಎನ್‌ಇಪಿ ಜಾರಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ಟಾಸ್ಕ್‌ ಫೋರ್ಸ್‌ ಮತ್ತು ಉಪ ಸಮಿತಿಯು ಪದವಿ ಹಂತದಲ್ಲಿ ಕನ್ನಡ ಭಾಷಾ ವಿಷಯವನ್ನು ಕಡ್ಡಾಯಗೊಳಿಸಬೇಕು ಎಂದು ಹೇಳಿಲ್ಲ. ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು ಎಂದು ಎನ್‌ಇಪಿಯಲ್ಲೂ ಹೇಳಲಾಗಿಲ್ಲ. ಹೀಗಾಗಿ ಸರ್ಕಾರದ ಆದೇಶವು ಸಂವಿಧಾನದ 14, 19, 21, 29 ಮತ್ತು 30ನೇ ವಿಧಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ. ಸರ್ಕಾರದ ಆದೇಶವು ಕಾನೂನುಬಾಹಿರ, ಸ್ವೇಚ್ಛೆ, ಅಸಾಂವಿಧಾನಿಕವಾಗಿದ್ದು, ನ್ಯಾಯಾಲಯವು ಇದರಲ್ಲಿ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ರಾಜ್ಯ ಸರ್ಕಾರದ ಪರವಾಗಿ ವಕೀಲ ಶ್ರೀನಿಧಿ ಮತ್ತು ಕೇಂದ್ರ ಸರ್ಕಾರದ ಪರವಾಗಿ ವಕೀಲ ಮಧುಕರ್‌ ದೇಶಪಾಂಡೆ ಹಾಜರಿದ್ದರು.

Kannada Bar & Bench
kannada.barandbench.com