ಭಾರತೀಯ ನ್ಯಾಯ (ಎರಡನೇ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತಾ, ಭಾರತೀಯ ಸಾಕ್ಷರತಾ (ಎರಡನೇ) ಮಸೂದೆ. 
ಸುದ್ದಿಗಳು

ಮೂರು ಅಪರಾಧಿಕ ಕಾನೂನುಗಳಲ್ಲಿನ 23 ಅಂಶಗಳಿಗೆ ತಿದ್ದುಪಡಿ ತರಲು ಕ್ರಮ: ಸಚಿವ ಎಚ್‌ ಕೆ ಪಾಟೀಲ್‌

ಕಾನೂನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದ್ದು, ಸಂವಿಧಾನದ ಅನುಚ್ಛೇದ 7ರ 3ನೇ ಪಟ್ಟಿಯಲ್ಲಿ ದತ್ತವಾದ ಅಧಿಕಾರ ಬಳಸಿ ಮೂರು ಕಾನೂನಗಳಿಗೂ ತಿದ್ದುಪಡಿ ತರಲಾಗುವುದು ಎಂದಿರುವ ಸಚಿವ ಪಾಟೀಲ್.

Bar & Bench

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಅಪರಾಧಿಕ ಕಾನೂನುಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರವು ಜುಲೈ 15ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಹೊಸ ಕಾಯಿದೆಗಳಿಗೆ ತಿದ್ದುಪಡಿ ಮಾಡುವುದಾಗಿ ಹೇಳಿದೆ.

“ಕೇಂದ್ರ ಜಾರಿಗೊಳಿಸಿರುವ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯಿದೆಗಳಲ್ಲಿ ಹಲವು ಲೋಪಗಳು ಉಳಿದುಕೊಂಡಿವೆ. ಈ ಮೂರು ಹೊಸ ಕಾನೂನುಗಳಿಂದ ದೇಶದಲ್ಲಿ ಪೊಲೀಸ್‌ ಆಳ್ವಿಕೆ ಆರಂಭವಾಗಲಿದೆ. ಇದು ಸ್ವಾತಂತ್ರ್ಯ ಚಳವಳಿಯ ಆಶಯ, ಧ್ಯೇಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ. ಇವುಗಳ ಜಾರಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ ಅಧಿಕವಾಗಲಿದೆ” ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಜುಲೈ 4ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹೊಸ ಕಾಯಿದೆಗಳ ಕುರಿತು ಚರ್ಚಿಸಲಾಗುವುದು. ಮೂರು ಕಾನೂನುಗಳಲ್ಲಿನ 23 ಅಂಶಗಳಿಗೆ ತಿದ್ದುಪಡಿ ತರಲು ಕ್ರಮಕೈಗೊಳ್ಳಲಾಗುವುದು. ಕಾನೂನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದ್ದು, ಸಂವಿಧಾನದ ಅನುಚ್ಛೇದ 7ರ 3ನೇ ಪಟ್ಟಿಯಲ್ಲಿ ದತ್ತವಾದ ಅಧಿಕಾರ ಬಳಸಿ ಮೂರು ಕಾನೂನಗಳಿಗೂ ತಿದ್ದುಪಡಿ ತರಲಾಗುವುದು” ಎಂದು ತಿಳಿಸಿದ್ದಾರೆ.

“ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕಾಯಿದೆಗಳ ಕುರಿತು ಅಭಿಪ್ರಾಯ ಕೋರಿದ್ದರು. ಈ ಸಂಬಂಧ ಮುಖ್ಯಮಂತ್ರಿ ಸೂಚನೆಯಂತೆ ಕಾನೂನು ತಜ್ಞರ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ್ದ ವರದಿಯನ್ನು ಕಾನೂನು ಇಲಾಖೆ ಪರಿಶೀಲನೆ ನಡೆಸಿದ ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ರಾಜ್ಯದ ಅಭಿಪ್ರಾಯಕ್ಕೆ ಒಕ್ಕೂಟ ಸರ್ಕಾರ ಮನ್ನಣೆ ನೀಡಿಲ್ಲ. ಕಾನೂನಿನ ಹಲವು ಅಂಶಗಳಲ್ಲಿ ಸ್ಪಷ್ಟ ವ್ಯಾಖ್ಯಾನವಿಲ್ಲ ಮತ್ತು ಜನಾಭಿಪ್ರಾಯಗಳನ್ನು ಕಡೆಗಣಿಸಲಾಗಿದೆ” ಎಂದು ಪಾಟೀಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.