Liquor Trade
Liquor Trade 
ಸುದ್ದಿಗಳು

ಪಾನ ನಿಷೇಧ ಎಂದರೆ ಸರ್ಕಾರಿ ಅಧಿಕಾರಿಗಳಿಗೆ ಇಷ್ಟ ಎಂದು ಪಾಟ್ನಾ ಹೈಕೋರ್ಟ್‌ ಹೇಳಿದ್ದೇಕೆ?

Bar & Bench

ಬಿಹಾರದಲ್ಲಿ ಜಾರಿಗೆ ತಂದಿರುವ ಪಾನ ನಿಷೇಧ ಮತ್ತು ಅಬಕಾರಿ ಕಾಯಿದೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾದ ಅಲ್ಲಿನ ರಾಜ್ಯ ಸರ್ಕಾರವನ್ನು ಪಾಟ್ನಾ ಹೈಕೋರ್ಟ್‌ ಇತ್ತೀಚೆಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದರಿಂದ ನಾಗರಿಕರ ಜೀವಕ್ಕೆ ಅಪಾಯವಿದೆ ಎಂದು ಅದು ಹೇಳಿದೆ  [ನೀರಜ್ ಸಿಂಗ್ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣ].

ಕಾಯಿದೆಯಡಿ ಸಲ್ಲಿಸಲಾದ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾ. ಪೂರ್ಣೇಂದು ಸಿಂಗ್ ಅವರು, ʼಕಾಯಿದೆಯ ಅನುಷ್ಠಾನದ ವೈಫಲ್ಯಕ್ಕೆ ಒಂದು ಕಾರಣವೆಂದರೆ ಶೋಧ, ಮುಟ್ಟುಗೋಲು ಹಾಗೂ ತನಿಖೆ ನಡೆಸುವಲ್ಲಿ ತನಿಖಾಧಿಕಾರಿಗಳು ಎಡವುತ್ತಿರುವುದುʼ ಎಂದು ಹೇಳಿದರು.

"ಪೊಲೀಸರು, ಅಬಕಾರಿ ಅಧಿಕಾರಿಗಳು ಮಾತ್ರವಲ್ಲ, ರಾಜ್ಯ ತೆರಿಗೆ ಇಲಾಖೆ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಕೂಡ ಮದ್ಯ ನಿಷೇಧವನ್ನು ಪ್ರೀತಿಸುತ್ತಾರೆ, ಅವರಿಗೆ ಪಾನ ನಿಷೇಧವೆಂದರೆ ಹಣದ ಥೈಲಿ ಎಂದರ್ಥ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿವಿಧ ಕಳ್ಳಸಾಗಣೆದಾರರು ಮತ್ತು ದುಷ್ಕರ್ಮಿಗಳ ಮೇಲೆ ಆರೋಪ ಪಟ್ಟಿ ಸಲ್ಲಿಸುವುದನ್ನು ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಿದ್ದಾರೆ. ಬದಲಿಗೆ ಅವರು ಸರಕನ್ನು ತುಂಬುವ, ಇಳಿಸುವ, ಸಾಗಿಸುವ ಬಡ ಚಾಲಕರು, ಕ್ಲೀನರ್‌ಗಳು, ಕೂಲಿ ಕಾರ್ಮಿಕರ ಮೇಲೆ ಕಾನೂನು ಕ್ರಮ ಜರುಗಿಸುತ್ತಿದ್ದಾರೆ. ಕಾಯಿದೆ ಸಮರ್ಪಕವಾಗಿ ಜಾರಿಯಾಗದೇ ಇರುವುದರಿಂದ ಕುಟುಂಬದ ಏಕೈಕ ದುಡಿಮೆದಾರರಾದ ಇಂತಹ ದಿನಗೂಲಿ ವರ್ಗದ ಮೇಲೆ ಭಾರೀ ಪರಿಣಾಮ ಉಂಟಾಗುತ್ತಿದೆ.

ಕಾಯಿದೆಯ ಕಠಿಣ ನಿಯಮಾವಳಿಗಳೇ ಕಳ್ಳಸಾಗಣೆದಾರರೊಂದಿಗೆ ಕೈಜೋಡಿಸುವ ಪೊಲೀಸರಿಗೆ ಅನುಕೂಲರವಾಗಿ ಒದಗಿಬಂದಿದೆ. ಸರ್ಕಾರಿ ಅಧಿಕಾರಿಗಳ ಉದ್ದೇಶಪೂರ್ವಕ ನಿಷ್ಕ್ರಿಯತೆಯಿಂದಾಗಿ ಮದ್ಯ ತಯಾರಿಕೆ ಮತ್ತು ಕಳ್ಳಸಾಗಣೆ ಹೆಚ್ಚುತ್ತಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಈ ಅವಲೋಕನಗಳೊಂದಿಗೆ  ಏಕಸದಸ್ಯ ಪೀಠ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳಲು ಅನುವಾಗುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತು. ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರಿಗೆ ಜಾಮೀನು ನೀಡಲಾಗಿದ್ದರೂ ವಿಶಾಲ ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಪ್ರಕರಣವನ್ನು ಮುಕ್ತವಾಗಿ ಇಡಲಾಗಿದೆ.