<div class="paragraphs"><p>[From L to R] Justice Sanjay Kishan Kaul and Justice MM Sundresh</p></div>

[From L to R] Justice Sanjay Kishan Kaul and Justice MM Sundresh

 
ಸುದ್ದಿಗಳು

ರಕ್ಷಿತ ಸಾಕ್ಷಿಯ ಗುರುತು ಬದಲಿಸಿದ ನಂತರ ಅವರ ಹೇಳಿಕೆ ಪ್ರತಿಯನ್ನು ಯುಎಪಿಎ ಆರೋಪಿ ಪಡೆಯಬಹುದು: ಸುಪ್ರೀಂಕೋರ್ಟ್

Bar & Bench

ಸಿಆರ್‌ಪಿಸಿ ಸೆಕ್ಷನ್ 173 (6) ಅನ್ನು ಯುಎಪಿಎ ಸೆಕ್ಷನ್‌ 44ರೊಂದಿಗೆ ಓದಿದಾಗ ಅದರಡಿ ರಕ್ಷಿತ ಸಾಕ್ಷಿಯ ಗುರುತು ಬದಲಿಸಿದ ನಂತರ ಅವರ ಹೇಳಿಕೆ ಪ್ರತಿಯನ್ನು ಯುಎಪಿಎ ಆರೋಪಿ ಪಡೆಯಲು ಅರ್ಹನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. [ವಹೀದ್-ಉರ್-ರೆಹಮಾನ್ ಪರ್ರಾ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ನಡುವಣ ಪ್ರಕರಣ].

ಕೆಲವು ಸಾಕ್ಷಿಗಳನ್ನು ರಕ್ಷಿತ ಸಾಕ್ಷಿಗಳೆಂದು ವಿಚಾರಣಾ ನ್ಯಾಯಾಲಯ ಘೋಷಿಸಿದಾಗ ಅವರ ಗುರುತು ಬದಲಿಸಿದ ಹೇಳಿಕೆಯ ಪ್ರತಿಯನ್ನು ಪಡೆಯಲು ಡಿಫೆನ್ಸ್‌ ಸೆಕ್ಷನ್ 207 ಮತ್ತು ಸೆಕ್ಷನ್ 161ರ ಅಡಿಯಲ್ಲಿ ಪರಿಹಾರ ಕೋರಬಹುದೇ ಎಂಬ ಕುರಿತಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ವಿಚಾರಣೆ ನಡೆಸಿತು.

ರಕ್ಷಿತ ಸಾಕ್ಷಿಯ ಗುರುತು ಬದಲಿಸಿದ ನಂತರ ಆರೋಪಿಗೆ ಸಾಕ್ಷಿ ಹೇಳಿಕೆ ಪ್ರತಿ ಒದಗಿಸುವುದು ಪ್ರಾಸಿಕ್ಯೂಷನ್‌ ಮತ್ತು ಡಿಫೆನ್ಸ್‌ಗಳ ಪಾಲಿಗೆ ನ್ಯಾಯಯುತವಾಗಲಿದ್ದು ಅದು ಸಾಕ್ಷಿಗಳನ್ನು ರಕ್ಷಿಸುವುದಲ್ಲದೆ ಅವರು ನ್ಯಾಯಸಮ್ಮತ ವಿಚಾರಣೆಯ ರಕ್ಷಣೆಯಿಂದ ವಂಚಿತರಾಗದಂತೆ ತಡೆಯುತ್ತದೆ ಎಂದು ಪೀಠ ಹೇಳಿದೆ.

ಮೇಲ್ಮನವಿದಾರ ವಹೀದ್-ಉರ್-ರೆಹಮಾನ್ ಪರ್ರಾ ವಿರುದ್ಧ ಯುಎಪಿಎ ಹಾಗೂ ಸ್ಫೋಟಕ ವಸ್ತು ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ಈ ಹಿಂದೆ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು. ವಿಚಾರಣೆ ವೇಳೆ ಸಾಕ್ಷ್ಯ ನುಡಿದಿದ್ದ ಐವರ ಹೇಳಿಕೆಗಳ ಪ್ರತಿಯನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಲಾಗಿತ್ತು. ಸಿಆರ್‌ಪಿಸಿ ಸೆಕ್ಷನ್‌ 207ರ ಅಡಿ ಗುರುತು ಬದಲಿಸಿದ ಸಾಕ್ಷಿಗಳ ಹೇಳಿಕೆ ಪ್ರತಿಯನ್ನು ತಮಗೆ ಒದಗಿಸಬೇಕೆಂದು ವಿಚಾರಣಾ ನ್ಯಾಯಾಲಯದಲ್ಲಿ ಮೇಲ್ಮನವಿದಾರ ಕೋರಿದ್ದರು. ಆದರೆ ಇದಕ್ಕೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

ಮೇಲ್ಮನವಿದಾರನ ಪರವಾಗಿ ತೀರ್ಪು ನೀಡಿದ್ದ ನ್ಯಾಯಾಲಯ “ಯುಎಪಿಎ ಸೆಕ್ಷನ್ 44, ಹಾಗೂ ಸಿಆರ್‌ಪಿಸಿ ಸೆಕ್ಷನ್ 207 ಮತ್ತು 173(6)ರ ಪ್ರಕಾರ ಐವರು ಸಾಕ್ಷಿಗಳ ಹೇಳಿಕೆ ಪ್ರತಿಯನ್ನು ಒದಗಿಸುವುದು ಪ್ರಾಸಿಕ್ಯೂಷನ್‌ ಕರ್ತವ್ಯ. ಗುರುತು ಮರೆಮಾಚಿ ಸಾಕ್ಷ್ಯಗಳ ಪ್ರತಿ ಒದಗಿಸಬೇಕು” ಎಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಮೇಲ್ಮನವಿಯಲ್ಲಿ ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯದ ಮನವಿಯನ್ನು ತಿರಸ್ಕರಿಸಿತ್ತು. ಈಗ ಮೇಲ್ಮನವಿಯನ್ನು ಅಂಗೀಕರಿಸಿದ ಸರ್ವೋಚ್ಚ ನ್ಯಾಯಾಲಯ ಹೈಕೋರ್ಟ್‌ ಆದೇಶವನ್ನು ಬದಿಗೆ ಸರಿಸಿದೆ.