ಜಾಮೀನು ನೀಡುವಾಗ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯು (ಯುಎಪಿಎ), ಕಾನೂನು ಕ್ರಮ ಪರಿಶೀಲಿಸುವ ನ್ಯಾಯಾಲಯಗಳ ಪಾತ್ರವನ್ನು ನಿರ್ಬಂಧಿಸುತ್ತದೆ ಮತ್ತು ಪ್ರಾಸಿಕ್ಯೂಷನ್ ವಾದ ತನಗೆ ನಿಜವೆನಿಸಿದರೆ ಜಾಮೀನನ್ನು ತಡೆಯುತ್ತದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ಶನಿವಾರ ತಿಳಿಸಿದರು.
"ಯುಎಪಿಎ: ಪ್ರಜಾಪ್ರಭುತ್ವ, ಭಿನ್ನಾಭಿಪ್ರಾಯ ಮತ್ತು ನಿರ್ದಯ ಕಾನೂನುಗಳು" ಎಂಬ ವಿಷಯದ ಕುರಿತು ‘ಕ್ಯಾಂಪೇನ್ ಫಾರ್ ಜುಡಿಷಿಯಲ್ ಅಕೌಂಟಬಿಲಿಟಿ ಅಂಡ್ ರಿಫಾರ್ಮ್ಸ್’ ಸಂಘಟನೆ ಆಯೋಜಿಸಿದ್ದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಆರೋಪಿತ ವ್ಯಕ್ತಿಯ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ನಂಬಲು ಸೂಕ್ತ ಆಧಾರಗಳಿವೆ ಎನಿಸಿದರೂ ಕೇಸ್ ಡೈರಿಯ ಪರಿಶೀಲನೆ ಮತ್ತು ನ್ಯಾಯಾಲಯದ ಅಭಿಪ್ರಾಯದಲ್ಲಿ, ಯುಎಪಿಎ ಸೆಕ್ಷನ್ 43 ಡಿ (5) ಜಾಮೀನು ನಿರ್ಬಂಧಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ತಲೆಮಾರುಗಳವರೆಗೆ ವಿಚಾರಣೆ ನಡೆದರೂ ಜಾಮೀನು ದೊರೆಯುವುದು ಬಹುತೇಕ ಅಸಾಧ್ಯವಾಗಿದ್ದು ಒಟ್ಟಾರೆ ಅಸಾಂವಿಧಾನಿಕವಾಗಿರುವ ಯುಎಪಿಎ ವ್ಯಾಖ್ಯಾನ ಜೀವಿಸುವ ಮೂಲಭೂತ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಂವಿಧಾನದತ್ತವಾಗಿ ದೊರೆತ ತ್ವರಿತ ವಿಚಾರಣೆಯ ಬುಡಕ್ಕೆ ಪೆಟ್ಟು ನೀಡುತ್ತದೆ” ಎಂದು ನಿವೃತ್ತ ನ್ಯಾಯಮೂರ್ತಿಗಳು ತಿಳಿಸಿದರು.
ಎನ್‌ಐಎ ಮತ್ತು ಜಹೂರ್ ಅಹ್ಮದ್ ಷಾ ವಟಾಲಿ ನಡುವಣ ಪ್ರಕರಣವನ್ನು ಸುಪ್ರೀಂಕೋರ್ಟ್ ಮರುಪರಿಶೀಲಿಸುವ ಅಗತ್ಯವಿದೆ. ಏಕೆಂದರೆ ಯುಎಪಿಎ ಅಡಿಯಲ್ಲಿ ಜಾಮೀನು ಪರಿಗಣಿಸುವಾಗ ನ್ಯಾಯಾಲಯಗಳು ಪ್ರಾಸಿಕ್ಯೂಷನ್ ಪ್ರಕರಣದ ವಿವರವಾದ ವಿಶ್ಲೇಷಣೆಯಲ್ಲಿ ತೊಡಗಿಸಿಕೊಳ್ಳಲು ಕೂಡ ಅನುಮತಿ ಇಲ್ಲ ಮತ್ತು ಪ್ರಾಸಿಕ್ಯೂಷನ್ ಒದಗಿಸಿದ ಸಾಕ್ಷ್ಯಗಳು ಸಮರ್ಪಕವಾಗಿವೆಯೇ ಇಲ್ಲವೆ ಎಂಬುದನ್ನು ಅಳೆಯಲು ಕೂಡ ಆಗದು ಎಂದರು.
"ಪ್ರಾಸಿಕ್ಯೂಷನ್ ಪ್ರಕರಣಕ್ಕೆ ಯಾವುದೇ ಸವಾಲು ಹಾಕುವುದನ್ನು ತಡೆಯುವ ಮೂಲಕ ವಟಾಲಿ ತೀರ್ಪು ಪ್ರತಿವಾದಿಯ ಎರಡೂ ಕೈಗಳನ್ನು ಕಟ್ಟಿಹಾಕುತ್ತದೆ" ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಈ ವಿಶೇಷ ಕಾನೂನುಗಳ ಬಗೆಗಿನ ನ್ಯಾಯಾಂಗ ವ್ಯಾಖ್ಯಾನಗಳು ದಿಕ್ಕು ತಪ್ಪಿವೆ ಮತ್ತು ವಾಟಾಲಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪರಿಶೀಲಿಸಬೇಕಿದೆ ಎಂದು ಅವರು ಹೇಳಿದರು.
ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಅಪಾಯಕಾರಿಯಾದ ಸರ್ವಾಧಿಕಾರಿ ಧೋರಣೆ ಅನುಸರಿಸುವುದರಿಂದ ಭಾರತದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿಶೇಷ ಭದ್ರತಾ ಕಾಯಿದೆಗಳಲ್ಲಿ ಬೃಹತ್ ಸುಧಾರಣೆ ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.
“ಕಾನೂನು ಸುಧಾರಣೆಗಳು ಅನಿವಾರ್ಯ. ಸರ್ಕಾರವನ್ನು ಮೀರುವವರಿಗೆ ಶಿಕ್ಷೆ ನೀಡದ ಈ ವಿಶೇಷ ಕಾನೂನುಗಳ ನಿಬಂಧನೆಯನ್ನು ರದ್ದುಗೊಳಿಸಬೇಕಿದೆ. ಈ ಅಧಿಕಾರ ಚಲಾಯಿಸಲು ಕಠಿಣ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ” ಎಂದು ಅವರು ಹೇಳಿದರು.