Factories 
ಸುದ್ದಿಗಳು

ಕಂಪೆನಿಗಳು ಹಣ ಹೂಡಿಕೆ ಮಾಡಿದ ಬಳಿಕ ರಾಜ್ಯ ಸರ್ಕಾರಗಳು ಕೈಗಾರಿಕಾ ಪ್ರೋತ್ಸಾಹ ಹಿಂಪಡೆಯುವಂತಿಲ್ಲ: ಸುಪ್ರೀಂ ಕೋರ್ಟ್

ರಾಜ್ಯ ಸರ್ಕಾರ ನೀಡಿದ ಇಂತಹ ಭರವಸೆಗಳನ್ನು ಗೌರವಪೂರ್ವಕವಾಗಿ ಜಾರಿಗೆ ತರುವಂತೆ ನೋಡಿಕೊಳ್ಳುವುದಕ್ಕಾಗಿ ಪೀಠ, ನ್ಯಾಯಸಮ್ಮತ ನಿರೀಕ್ಷೆ ಮತ್ತು ವಾಗ್ದಾನ ತಡೆ ಸಿದ್ಧಾಂತವನ್ನು ಅನ್ವಯಿಸಿತು.

Bar & Bench

ಸರ್ಕಾರದ ಹೂಡಿಕೆ ನೀತಿಗಳ ಅಡಿಯಲ್ಲಿ ನೀಡಿದ ಭರವಸೆಗಳ ಆಧಾರದ ಮೇಲೆ ಕಂಪನಿಗಳು ಹಣ ಹೂಡಿಕೆ ಮಾಡಿದ ಬಳಿಕ ರಾಜ್ಯ ಸರ್ಕಾರಗಳು ಕೈಗಾರಿಕಾ ಉತ್ತೇಜನದ ವಿಚಾರದಲ್ಲಿ ಉಲ್ಟಾ ಹೊಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ತೀರ್ಪು ನೀಡಿದೆ [ಐಎಪ್‌ಜಿಎಲ್‌ ರಿಫ್ರ್ಯಾಕ್ಟರೀಸ್‌ ಮತ್ತು ಒಡಿಶಾ ರಾಜ್ಯ ಹಣಕಾಸು ನಿಗಮ ನಡುವಣ ಪ್ರಕರಣ]

ರಾಜ್ಯ ಸರ್ಕಾರ ನೀಡಿದ ಇಂತಹ ಭರವಸೆಗಳನ್ನು ಗೌರವಪೂರ್ವಕವಾಗಿ ಜಾರಿಗೆ ತರುವಂತೆ ನೋಡಿಕೊಳ್ಳುವುದಕ್ಕಾಗಿ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ, ನ್ಯಾಯಸಮ್ಮತ ನಿರೀಕ್ಷೆ ಮತ್ತು ವಾಗ್ದಾನ ತಡೆ ಸಿದ್ಧಾಂತವನ್ನು ಅನ್ವಯಿಸಿತು.

ಐಎಫ್‌ಜಿಎಲ್‌ ರಿಫ್ರಾಕ್ಟರೀಸ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯ 1989ರ ಒಡಿಶಾ ಕೈಗಾರಿಕಾ ನೀತಿಯ ಅಡಿಯಲ್ಲಿ ಅನುಮೋದಿತ ಸಬ್ಸಿಡಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರಾಕರಿಸಿದ್ದನ್ನು  ಎತ್ತಿಹಿಡಿದು 2018ರಲ್ಲಿ ಒಡಿಶಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತು.

ಮೇಲ್ಮನವಿದಾರ ಕಂಪನಿಗೆ ಅನುಮೋದಿತ ಸಬ್ಸಿಡಿಗಳನ್ನು ಬಿಡುಗಡೆ ಮಾಡಿಸಿಕೊಳ್ಳುವ ಹಕ್ಕು ಇದೆ. ಪ್ರತಿವಾದಿ ಅಧಿಕಾರಿಗಳು ಸ್ಪಷ್ಟ  ಭರವಸೆ  ನೀಡಿದ್ದರು ಎಂದು ತಿಳಿದುಬಂದಿದೆ. ಅನುಮೋದಿತ ಸಬ್ಸಿಡಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ನ್ಯಾಯಸಮ್ಮತ ನಿರೀಕ್ಷೆ  ಮೇಲ್ಮನವಿದಾರ ಕಂಪನಿಯದಾಗಿದ್ದು, ಆ ಭರವಸೆಗಳು ಮತ್ತು ಆಶ್ವಾಸನೆಗಳ ಆಧಾರದ ಮೇಲೆಯೇ ಗಣನೀಯ ವೆಚ್ಚ ಮಾಡಿ ಎಂಎಂ ಪ್ಲಾಂಟ್ ಘಟಕದಲ್ಲಿ ಉತ್ಪಾದನೆ ಮುಂದುವರೆಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

1989ರ ಕೈಗಾರಿಕಾ ನೀತಿಯನ್ನು ಪರಿಶೀಲಿಸಿದ ಅದು 1989ರ ಡಿಸೆಂಬರ್ 1ರಂದು ಅಥವಾ ಅದರ ನಂತರ ಸ್ಥಿರ ಮೂಲಧನದಲ್ಲಿ ಹೂಡಿಕೆ ಮಾಡಿದರೆ, ಆ ಕೈಗಾರಿಕಾ ಘಟಕವನ್ನು “ಹೊಸ” ಘಟಕವೆಂದು ಪರಿಗಣಿಸಬೇಕು ಎಂದು ತೀರ್ಮಾನಿಸಿತು.

ಎಂಎಂ ಪ್ಲಾಂಟ್ ಹಿಂದಿನ ಘಟಕಗಳ ಮುಂದುವರೆದ ಭಾಗವಷ್ಟೇ ಎಂಬ ರಾಜ್ಯ ಸರ್ಕಾರದ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ದಾಖಲೆಗಳ ಪ್ರಕಾರ ಅದನ್ನು ಹೊಸ ಘಟಕವೆಂದೇ ಪರಿಗಣಿಸಬೇಕೆಂದು ಹೇಳಿತು.

ಅಲ್ಲದೆ ರಾಜ್ಯ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ ಅದು “ಅಧಿಕಾರಶಾಹಿ ಅಲಸ್ಯದ ಸ್ಪಷ್ಟ ಉದಾಹರಣೆ”ಎಂದು ಹೇಳಿತು. ಕೈಗಾರಿಕಾ ನೀತಿಗಳ ಉದ್ದೇಶ ಹೂಡಿಕೆ, ಉದ್ಯೋಗ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವುದಾದರೆ, ಇಂತಹ ಅಲಸ್ಯ ಉದ್ಯಮಶೀಲತೆಯನ್ನು ನಿರುತ್ಸಾಹಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿತು.

ರಾಜ್ಯ ಸರ್ಕಾರ ತಾನು ಸಾರ್ವಜನಿಕವಾಗಿ ಘೋಷಿಸಿದ ನೀತಿಗಳು ಮತ್ತು ಭರವಸೆಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತದೆ ಎಂಬ ನ್ಯಾಯಸಮ್ಮತ ನಿರೀಕ್ಷೆ ಇರುತ್ತದೆ ಎಂದು ಅದು ತಿಳಿಸಿತು.

ಅಂತೆಯೇ ಅನುಮೋದಿತ ಸಬ್ಸಿಡಿ ಬಿಡುಗಡೆಗೆ ನಿರಾಕರಿಸಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದ ಅದು ಹೈಕೋರ್ಟ್‌ ತೀರ್ಪು ರದ್ದುಗೊಳಿಸಿ ಐಎಫ್‌ಜಿಎಲ್‌ ರಿಫ್ರಾಕ್ಟರೀಸ್ ಲಿಮಿಟೆಡ್‌ಗೆ ಸಬ್ಸಿಡಿ ಬಿಡುಗಡೆ ಮಾಡುವಂತೆ ಸೂಚಿಸಿತು.

IFGL_Refractories_Vs_State_of_Odisha.pdf
Preview